ಸುರಕ್ಷಿತ ಪಾದಚಾರಿ ಮಾರ್ಗ​ ಅಭಿಯಾನ ಜು.1ರಿಂದ|gba

ಜಿಬಿಎ
ಜಿಬಿಎ
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಕೃಷ್ಣ ಬೈರೇಗೌಡ ಹೇಳಿಕೆ
  • ವಾರಸುದಾರರಿಲ್ಲದ ವಾಹನಗಳ ಟೋಯಿಂಗ್​
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಗ್ರೇಟರ್​ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಪಾದಚಾರಿ ಮಾರ್ಗಗಳಲ್ಲಿನ ಅಕ್ರಮ ಒತ್ತುವರಿಗಳನ್ನು ಅಂಗಡಿ ಮಾಲೀಕರು ಸ್ವಯಂಪ್ರೇರಿತವಾಗಿ ತೆರವುಗೊಳಿಸಲು ಜು.1ರ ವರೆಗೆ ಅವಕಾಶ ನೀಡಲಾಗುವುದು. ಬಳಿಕ, ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನವನ್ನು ಆರಂಭಿಸಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಜಿಬಿಎ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಹಾಗೂ ದುರಸ್ತಿ ಕಾಮಗಾರಿಗಳ ಕುರಿತು ಜಿಬಿಎ ಕೇಂದ್ರ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಪಾದಚಾರಿ ಮಾರ್ಗದಲ್ಲಿ ನಡೆಯುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು ಎಂದು ಸವೋರ್ಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದ್ದು, ಅದನ್ನು ಅನುಷ್ಠಾನಗೊಳಿಸಲು ಎಲ್ಲ ರಾಜ್ಯಗಳ ಸ್ಥಳಿಯ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ಅದರಂತೆ, ಸಿಎಂ ಡಿ.ಕೆ. ಶಿವಕುಮಾರ್​ ಕೂಡ ಈ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಹಲವು ನಿರ್ದೇಶನಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ನಗರದಲ್ಲಿ ಸುಮಾರು 13 ಸಾವಿರ ಕಿ.ಮೀ. ರಸ್ತೆ ಜಾಲವಿದ್ದು, ಆರ್ಟಿರಿಯಲ್​ ಹಾಗೂ ಸಬ್​- ಆರ್ಟಿರಿಯಲ್​ ರಸ್ತೆ ಸುಮಾರು 2 ಸಾವಿರ ಕಿ.ಮೀ. ವ್ಯಾಪ್ತಿಯಲ್ಲಿ ಪಾದಚಾರಿಗಳ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವ ಎಲ್ಲ ಅಡೆತಡೆಗಳನ್ನು ತೆರವುಗೊಳಿಸಲು ಅಭಿಯಾನ ಕೈಗೊಳ್ಳಲಾಗುವುದು. ಅನೇಕ ಅಂಗಡಿಗಳು ತಮ್ಮ ಸಾಮಗ್ರಿಗಳು, ನಾಮಫಲಕಗಳು ಹಾಗೂ ಇತರೆ ವಸ್ತುಗಳನ್ನು ಪಾದಚಾರಿ ಮಾರ್ಗಗಳ ಮೇಲೆ ಇರಿಸುವುದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಅವನ್ನು ತೆರವು ಮಾಡದಿದ್ದರೆ ದುಬಾರಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್​, ಆಯುಕ್ತರಾದ ಡಿ.ಎಸ್​. ರಮೇಶ್​, ಪಿ. ಸುನೀಲ್​ ಕುಮಾರ್​, ಜಿ. ಜಗದೀಶ್​, ಕೆ.ಎನ್​. ರಮೇಶ್​, ಡಾ. ಕೆ.ವಿ. ರಾಜೇಂದ್ರ, ಸಂಚಾರ ಪೊಲೀಸ್​ ವಿಭಾಗದ ಜಂಟಿ ಆಯುಕ್ತ ಕಾರ್ತಿಕ್​ ರೆಡ್ಡಿ ಉಪಸ್ಥಿತರಿದ್ದರು.
ಶೇ.30 ಪಾದಚಾರಿಗಳ ಸಾವು
ನಗರದಲ್ಲಿ ಪ್ರತಿವರ್ಷ ಸುಮಾರು ಸಾವಿರ ಮಂದಿ ರಸ್ತೆ ಅಪಘಾತಗಳಲ್ಲಿ ಮೃತಪಡುತ್ತಿದ್ದು, ಅವರಲ್ಲಿ ಶೇ.30 ಪಾದಚಾರಿಗಳೇ ಇದ್ದಾರೆ. ಸುರಕ್ಷಿತ ಹಾಗೂ ಸುಗಮ ಪಾದಚಾರಿ ಮಾರ್ಗಗಳು ಲಭ್ಯವಿದ್ದರೆ ಇಂತಹ ಅನೇಕ ಅಪಘಾತಗಳನ್ನು ತಡೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವ್ಯಾಪಾರಿಗಳು ಸಹಕರಿಸಬೇಕು ಎಂದು ಸಚಿವರು ಕೋರಿದರು.
ಪಾರ್ಕಿಂಗ್​ಗೆ ಅವಕಾಶವಿಲ್ಲ
ಪಾದಚಾರಿ ಮಾರ್ಗಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಇಲ್ಲ. ಸವೋರ್ಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಪಾದಚಾರಿ ಮಾರ್ಗಗಳಲ್ಲಿ ವಾಹನಗಳನ್ನು ನಿಲ್ಲಿಸಿದರೆ ಮುಲಾಜಿಲ್ಲದೆ ಟೋಯಿಂಗ್​ ಮೂಲಕ ತೆರವುಗೊಳಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು. ಜು.1 ರಿಂದ ನಗರದಾದ್ಯಂತ ವಾರಸುದಾರರಿಲ್ಲದೆ ರಸ್ತೆ ಬದಿಯಲ್ಲಿ ನಿಂತ ವಾಹನಗಳಿಗೆ ನೋಟಿಸ್​ ಸ್ಟಿಕ್ಕರ್​ ಅಂಟಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆ ಬಳಿಕ 7 ದಿನಗಳ ಕಾಲಾವಕಾಶ ನೀಡಲಾಗುವುದು. ನಂತರವೂ ವಾಹನಗಳನ್ನು ತೆರವುಗೊಳಿಸದಿದ್ದಲ್ಲಿ ಜು.10ರಿಂದ ಟೋಯಿಂಗ್​ ಮೂಲಕ ತೆರವುಗೊಳಿಸಿ ಹರಾಜು ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಕೃಷ್ಣಬೈರೇಗೌಡ ತಿಳಿಸಿದರು.
ದುರಸ್ತಿಗೆ 70 ಕೋಟಿ ರೂ.ಮೀಸಲು
ಪಾದಚಾರಿ ಮಾರ್ಗಗಳ ದುರಸ್ತಿಗೆ 70 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಸ್ಲ್ಯಾಬ್​ಗಳು, ಕರ್ವ್​ ಸ್ಟೋನ್​ಗಳು, ಲೆವೆಲ್​ ವ್ಯತ್ಯಾಸಗಳು ಸೇರಿ ದುರಸ್ತಿ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ತಳ್ಳುಗಾಡಿಗೂ ಜುಲ್ಮಾನೆ
ಜು.1ರಿಂದ ಆರ್ಟಿರಿಯಲ್​ ಹಾಗೂ ಸಬ್​-ಆರ್ಟಿರಿಯಲ್​ ರಸ್ತೆಗಳ ಪಾದಚಾರಿ ಮಾರ್ಗಗಳು ಮತ್ತು ಪ್ರಮುಖ ರಸ್ತೆಗಳಲ್ಲಿ ತಳ್ಳುಗಾಡಿಗಳ ಮೂಲಕ ವ್ಯಾಪಾರ ಮಾಡಲು ಅವಕಾಶ ಇರುವುದಿಲ್ಲ. ನಿಯಮ ಉಲ್ಲಂಘಿಸಿದಲ್ಲಿ ತಳ್ಳುಗಾಡಿಗಳನ್ನು ವಶಪಡಿಸಿಕೊಂಡು ದಂಡ ವಿಧಿಸಲಾಗುವುದು. ಇತರೆ ಅನುಮತಿ ನೀಡಿದ ಪ್ರದೇಶಗಳಲ್ಲಿ ಮಾತ್ರ ವ್ಯಾಪಾರ ನಡೆಸಬಹುದು ಎಂದು ಕೃಷ್ಣಬೈರೇಗೌಡ ಹೇಳಿದರು.

ಮುಖ್ಯಾಂಶಗಳು

* ನಗರದ ರಸ್ತೆ ಗುಂಡಿಗಳನ್ನು ವೈಜ್ಞಾನಿಕ ವಿಧಾನದಲ್ಲಿ ಬಾಕ್ಸ್​ ಕಟಿಂಗ್​ ಮಾಡಿ, ಜೆಲ್ಲಿ ತುಂಬಿ, ಡಾಂಬರೀಕರಣ ನಡೆಸಿ ರಸ್ತೆ ಮಟ್ಟಕ್ಕೆ ಸಮನಾಗಿ ದುರಸ್ತಿ.
* ನಗರದ ಪ್ರಮುಖ ಜಂಕ್ಷನ್​ಗಳು ಹಾಗೂ ಸಿಗ್ನಲ್​ಗಳಲ್ಲಿ ತುರ್ತು ದುರಸ್ತಿ ಕಾರ್ಯ ಕೈಗೊಳ್ಳಿ.
* ಸಿಗ್ನಲ್​ಗಳ ಸಮೀಪ ಹಂಪ್​ಗಳ ತೆರವು. ಸಿಗ್ನಲ್​ ಸಮೀಪ 75 ಮೀಟರ್​ ವ್ಯಾಪ್ತಿಯಲ್ಲಿ ವಾಹನ ನಿಲುಗಡೆಗೆ ರ್ನಿಬಂಧ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net