ಪೈಪ್​ಲೈನ್​ನಲ್ಲಿ ನೀರು ಸೋರಿಕೆ ಪರೀಕ್ಷೆಗೆ ರೋಬಾಟ್ | robot

ನೀರು ಸೋರಿಕೆ ಪರೀಕ್ಷೆಗೆ ರೋಬಾಟ್
ನೀರು ಸೋರಿಕೆ ಪರೀಕ್ಷೆಗೆ ರೋಬಾಟ್
Published on

ಪ್ರಮುಖ ಮುಖ್ಯಾಂಶಗಳು

  • 8.5 ನಿಮಿಷದಲ್ಲಿ 100 ಮೀಟರ್​ ಪೈಪ್​ ಪರಿಶೀಲನೆ
  • ಸ್ವಸ್ಥ್​ ಎಐ ವೇದಿಕೆಯಿಂದ ನಿರ್ವಹಣೆ
  • ಮಾಹಿತಿ ವಿಶ್ಲೇಷಣೆ
ಪವನ್​ ಆಚಾರ್ಯ ನೀರ್ಚಾಲು ಬೆಂಗಳೂರು
ಗ್ರೇಟರ್​ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿನ ಜಮೀನಿನ ಒಳಭಾಗದಲ್ಲಿ, ಅದರಲ್ಲೂ ಕೋರ್​ ಪ್ರದೇಶದಲ್ಲಿ ಇರುವ ನೀರಿನ ಪೈಪ್​ಲೈನ್​ಗಳು ಬಹಳ ವರ್ಷಗಳ ಹಿಂದೆ ಅಳವಡಿಸಲಾಗಿದೆ. ಅವುಗಳಲ್ಲಿ ರಚನಾತ್ಮಕ ಹಾನಿ, ತಡೆಗಳು, ಪೈಪ್​ಲೈನ್​ ಭಂಗ, ಸೋರಿಕೆ, ನೀರಿನ ಮಾಲಿನ್ಯ ಇತ್ಯಾದಿ ಸಮಸ್ಯೆಗಳನ್ನು ಮೇಲ್ಮೆಯಿಂದಲೇ ಪತ್ತೆಹಚ್ಚುವುದು ಕಷ್ಟ. ಅದಕ್ಕಾಗಿ ಕೃತಕಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆಧಾರಿತ ರೋಬಾಟಿಕ್​ ತಂತ್ರಜ್ಞಾನವನ್ನು ಬಳಸಲು ಜಲಮಂಡಳಿ ಈಗಾಗಲೆ ಚಾಲನೆ ನೀಡಿದೆ.
ಏನಿದು ತಂತ್ರಜ್ಞಾನ?: ನೀರಿನ ಭೂಗತ ಪೈಪ್​ಲೈನ್​ಗಳ ಸೋರಿಕೆ ಪತ್ತೆ ಮತ್ತು ಸ್ಥಿತಿ ಮೌಲ್ಯಮಾಪನಕ್ಕಾಗಿ "ಎಂಡೋಬೋಟ್​&120' ತಂತ್ರಜ್ಞಾನವನ್ನು ಅಳವಡಿಸಿದ್ದು, 3.5 ಇಂಚಿನ ಪೈಪ್​ನಿಂದ ಹಿಡಿದು 17.5 ಇಂಚಿನ ಪೈಪ್​ನಲ್ಲೂ ಹೋಗಿ ಸಮಸ್ಯೆ ಬಗೆಹರಿಸುವ ಸಾಮರ್ಥ್ಯ ಹೊಂದಿದೆ. 595 ಎಂ.ಎಂ., 79 ಎಂ.ಎಂ., 72 ಎಂ.ಎಂ. ಮೂರು ರೀತಿಯ ವಾಹನಗಳಿದ್ದು, ಇವು ನಿಮಿಷಕ್ಕೆ 20&35 ಸೆ.ಮೀ. ಚಲಿಸುತ್ತವೆ. 5.5& 8.5 ನಿಮಿಷದಲ್ಲಿ 100 ಮೀ. ಉದ್ದದ ಪೈಪ್​ಲೈನ್​ ಅನ್ನು ಪರೀಸಬಲ್ಲದು. ಬಹುತೇಕ ಕಬ್ಬಿಣದಿಂದ ನಿರ್ಮಿಸಲಾದ ಈ ವಾಹನವು ಸುಮಾರು 8 ಕೆ.ಜಿ. ಭಾರ ಹೊಂದಿದೆ. ಸೋನಿಯ 180 ಡಿಗ್ರಿ (1.3 ಎಂ.ಪಿ.)ಕ್ಯಾಮರಾ, ಎಲ್​ಇಡಿ ಲೈಟ್​, ಪ್ಲಾನೆಟರಿ, ಬೆವೆಲ್​ ಮತ್ತು ಸ್ಪರ್​ ಗೇರ್​ಗಳ ಸಂಯೋಜನೆಯೊಂದಿಗೆ 6/6 ವೀಲ್​ ಡೆವ್​ ಟ್ರಾನ್ಸ್​ಮಿಷನ್​ ಇತ್ಯಾದಿ ರೋಬಾಟಿಕ್​ ವಾಹನದ ಪ್ರಮುಖ ಭಾಗಗಳು.
ಬಳಕೆ ಹೇಗೆ?: ರೋಬಾಟ್​ಗಳು ಸಂಗ್ರಹಿಸುವ ಮಾಹಿತಿಯನ್ನು ಸ್ವಸ್ಥ್​ ಎಐ ವೇದಿಕೆ ಸಂಸ್ಕರಿಸುತ್ತದೆ. ಪ್ರಗತಿದಾಯಕ ಎಐ ಅಥವಾ ಎಂಎಲ್​ ಆಲ್ಗೊರಿದಮ್​ಗಳು ಡೇಟಾ ಮಾದರಿಗಳನ್ನು ವಿಶ್ಲೇಷಿಸಿ, ಪೈಪ್​ಲೈನ್​ ದೋಷಗಳ ಗಂಭೀರತೆಯನ್ನು ಗುರುತಿಸಿ, ಡ್ಯಾಶ್​ಬೋರ್ಡ್​ ಮೂಲಕ ಕಾರ್ಯಗತ ಮಾಹಿತಿಯನ್ನು ಪ್ರದರ್ಶಿಸುತ್ತವೆ. ಜಿಐಎಸ್​ ಆಧಾರಿತ ದೋಷ ಮ್ಯಾಪಿಂಗ್​, ನಿಖರ ಸ್ಥಳಗಳನ್ನು ಸೂಚಿಸುವುದರಿಂದ ತುರ್ತು ಹಸ್ತಕ್ಷೇಪ ಮತ್ತು ಯೋಜಿತ ನಿರ್ವಹಣೆ ಸುಲಭವಾಗುತ್ತದೆ. ಇಂಜಿನಿಯರ್​ಗಳಿಗೆ ಸಮಸ್ಯೆಯನ್ನು ಕಂಡುಕೊಳ್ಳುವಲ್ಲಿ, ನಿರ್ಧಾರಗಳನ್ನು ತೆಗೆಯುವಲ್ಲಿ ಎ.ಐ. ವೇದಿಕೆ ಪೂರಕವಾಗಿದೆ.
ಮಾಹಿತಿ ವಿಶ್ಲೇಷಣೆ: ಅಂತಿಮ ಹಂತದಲ್ಲಿ, ಡೇಟಾ ವಿಶ್ಲೇಷಣೆ ದೀರ್ಘಕಾಲಿಕ ಆಸ್ತಿಗಳ ನಿರ್ವಹಣೆಗೆ ಆಧಾರವಾಗುತ್ತದೆ. ಪೈಪ್​ಲೈನ್​ಗಳ ಸ್ಥಿತಿ ಮೌಲ್ಯಮಾಪನ, ಅವುಗಳ ಉಳಿದ ಬಳಕೆ ಆಯುಷ್ಯ ಅಂದಾಜು, ನಿರ್ವಹಣೆ ಹಾಗೂ ಬದಲಾವಣೆಗಳಿಗೆ ಆದ್ಯತೆ ನಿಗದಿಪಡಿಸುವುದು ಈ ಹಂತದಲ್ಲಿ ನಡೆಯುತ್ತದೆ. ಮಾಹಿತಿ ಆಧಾರಿತ ನಿರ್ಧಾರ ಪ್ರಕ್ರಿಯೆಯು ಕಾರ್ಯಾಚರಣಾ ವೆಚ್ಚಗಳನ್ನು ಕಡಿಮೆ ಮಾಡಲಿದೆ ಮತ್ತು ನೀರು ಸರಬರಾಜು ವ್ಯವಸ್ಥೆಯ ದೀರ್ಘಕಾಲಿಕ ಸ್ಥಿರತೆಯನ್ನು ಬಲಪಡಿಸಲಿದೆ.
ಈ ಮೂರು ತಂತ್ರಜ್ಞಾನಗಳ ಸಂಯೋಜನೆಯು ಪೈಪ್​ಲೈನ್​ಗಳ ಸ್ಥಿತಿ ಮೇಲ್ವಿಚಾರಣೆಗೆ ಡಿಜಿಟಲ್​ ಪರಿಹಾರವನ್ನು ಒದಗಿಸುತ್ತದೆ.

ಕಾರ್ಯಾಚರಣೆಗೆ ನೀಲಿ ಪಡೆ

ಕಾರ್ಯಾಚರಣೆಯ ವೇಗವನ್ನು ಹಚ್ಚಿಸಲು ನಗರದ 16 ವಿಭಾಗದಲ್ಲೂ ಒಂದೊಂದು ನೀಲಿ ಪಡೆ ಕಾರ್ಯ ನಿರ್ವಹಿಸಲಿದೆ. ಒಂದು ತಂಡದಲ್ಲಿ ಮೂವರು ಸಿಬ್ಬಂದಿ ಇರಲಿದ್ದಾರೆ. ಈ ವಿಶೇಷ ದಳವು ಈ ವಾರದಿಂದಲೇ ತನ್ನ ಕಾರ್ಯಾಚರಣೆ ಪ್ರಾರಂಭಿಸಲಿದೆ. ಇವರು ಅನಧಿಕೃತವಾಗಿ ನೀರಿನ ಸಂಪರ್ಕ ಪಡೆದಿರುವುದನ್ನು ಪತ್ತೆ ಮಾಡಲಿದ್ದಾರೆ. ಕೆಲ ಪ್ರಕರಣಗಳಲ್ಲಿ ದಂಡ ಪ್ರಯೋಗ ಮಾಡಲಿದ್ದು, ಕೆಲವು ಪ್ರಕರಣಗಳನ್ನು ಸಕ್ರಮಗೊಳಿಸಲು ಕ್ರಮ ವಹಿಸಲಾಗುವುದು ಎಂದು ರಾಮ ಪ್ರಸಾತ್​ ಮನೋಹರ್​ ತಿಳಿಸಿದ್ದಾರೆ.

ರೋಬಾಟಿಕ್​ ತಂತ್ರಜ್ಞಾನವು ಭೂಗತ ಪೈಪ್​ಲೈನ್​ಗಳ ಈಗಿನ ಸ್ಥಿತಿಯನ್ನು ನಿಖರವಾಗಿ ಗುರುತಿಸುವ ಸಾಧನವಾಗಿದೆ. ಎಐ ಆಧಾರಿತ ವಿಶ್ಲೇಷಣೆ ಹಾಗೂ ಸಂಪೂರ್ಣ ಮಾಹಿತಿಯ ಆಧಾರದಲ್ಲಿ ನಮ್ಮ ಇಂಜಿನಿಯರ್​ಗಳಿಗೆ ಪ್ರಮುಖ ಸಮಸ್ಯೆಗಳನ್ನು ಪತ್ತೆಹಚ್ಚಿ ಅದಕ್ಕೆ ಸರಿಯಾದ ಪರಿಹಾರಗಳನ್ನು ಕಂಡುಕೊಳ್ಳಲು ನೆರವಾಗಲಿದೆ. ಅಕ್ರಮ ನೀರಿನ ಸಂಪರ್ಕಗಳನ್ನು ನಿಮೂರ್ಲನೆ ಮಾಡಲು ಉತ್ತಮ ಮಾರ್ಗವಾಗಿದ್ದು, ಇದರಿಂದ ಮಂಡಳಿಗೆ ಆಗುತ್ತಿದ್ದ ನಷ್ಟವನ್ನು ತಡೆಗಟ್ಟಬಹುದು. ಅಲ್ಲದೆ, ತುರ್ತು ಕಾಮಗಾರಿಗಳಿಗೆ 24 ಗಂಟೆಗಳೊಳಗೆ ಪರಿಹಾರ ಸಿಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net