ಹೊಸೂರು ಏರ್‌ಪೋರ್ಟ್‌ಗೆ ರೆಡ್ ಸಿಗ್ನಲ್

ವಿಮಾನ ನಿಲ್ದಾಣ
ವಿಮಾನ ನಿಲ್ದಾಣ
Published on
ಬೆಂಗಳೂರು: ಹೊಸೂರಿನಲ್ಲಿ 2ನೇ ವಿಮಾನ ನಿಲ್ದಾಣ ಸ್ಥಾಪಿಸಲು ಮುಂದಾಗಿದ್ದ ತಮಿಳುನಾಡು ಸರ್ಕಾರಕ್ಕೆ ನಿರಾಸೆ ಉಂಟಾಗಿದೆ.
ಬೆಂಗಳೂರಿನಲ್ಲಿನ ಹಿಂದೂಸ್ತಾನ್ ಏರೋನಾಟಿಕ್ಸೃ್ ಲಿಮಿಟೆಡ್ (ಎಚ್‌ಎಎಲ್) ಸಮೀಪ ಇರುವ ಹಿನ್ನೆಲೆಯಲ್ಲಿ ಹೊಸೂರು ವಿಮಾನ ನಿಲ್ದಾಣ ಸ್ಥಾಪನೆಗೆ ಕೇಂದ್ರ ರಕ್ಷಣಾ ಸಚಿವಾಲಯ ಅನುಮತಿ ನಿರಾಕರಿಸಿದೆ. ಏಕೆಂದರೆ ಹೊಸೂರು ಎಚ್‌ಎಎಲ್ ನಿಯಂತ್ರಣ ವ್ಯಾಪ್ತಿಯಲ್ಲಿರುವ ಹಿನ್ನೆಲೆಯಲ್ಲಿ ಅನುಮತಿ ಕೋರಿ ತಮಿಳುನಾಡು ಸರ್ಕಾರ ಪತ್ರ ಬರೆದಿತ್ತು. ಅನುಮತಿ ನಿರಾಕರಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಖಚಿತಪಡಿಸಿವೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ಭವಿಷ್ಯದಲ್ಲಿ ಉಂಟಾಗುವ ಏರ್‌ಟ್ರಾಫಿಕ್‌ನ್ನು ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರ ಬೆಂಗಳೂರು ಸಮೀಪವೇ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಲು ಉದ್ದೇಶಿಸಿದೆ.
ಇದೇ ವೇಳೆ ತಮಿಳುನಾಡು ಸರ್ಕಾರ ಹೊಸೂರು ಸೇರಿ ಎರಡು ಕಡೆ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ಗುರುತು ಮಾಡಿ ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆದಿತ್ತು. ಇತ್ತ ಕರ್ನಾಟಕ ಸರ್ಕಾರ ಸಹ ಕನಕಪುರ ರಸ್ತೆಯ ಚೂಡಹಳ್ಳಿ ಮತ್ತು ಸೋಮನಹಳ್ಳಿ ಜೊತೆಗೆ ನೆಲಮಂಗಲ- ಕುಣಿಗಲ್ ರಸ್ತೆಯಲ್ಲಿ ಸ್ಥಳವನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ.
ಈ ಪೈಕಿ ಒಂದನ್ನು ಅಂತಿಮ ಮಾಡುವ ಕಾರ್ಯದಲ್ಲಿ ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿದೆ. ಒಂದು ವೇಳೆ ತಮಿಳುನಾಡು ಹೊಸೂರು ಸಮೀಪ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಮಾಡಿದರೆ ಬೆಂಗಳೂರು ವಿಮಾನ ನಿಲ್ದಾಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳು ಇವೆ ಎಂದು ಚರ್ಚೆಗಳು ಕೇಳಿಬಂದಿದ್ದವು.
ಈ ಬಗ್ಗೆಯೂ ಅಧ್ಯಯನ ನಡೆಯುತ್ತಿದೆ. ಹೊಸೂರಿನಲ್ಲಿ ಪ್ರಸ್ತಾವಿತ ವಿಮಾನ ನಿಲ್ದಾಣ ಸ್ಥಾಪನೆ ಮಾಡುವುದರಿಂದ ಅಸ್ತಿತ್ವದಲ್ಲಿರುವ ಬೆಂಗಳೂರು ಅಥವಾ ಸೇಲಂ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದರ ಬಗ್ಗೆ ಅಧ್ಯಯನ ವರದಿಯನ್ನು ಕೇಳಲಾಗಿದೆ. ಇದನ್ನು ತಮಿಳುನಾಡು ಕೈಗಾರಿಕಾ ಅಭಿವೃದ್ಧಿ ನಿಗಮ ಮಾಡಿ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಸಲ್ಲಿಸಬೇಕು ಎಂದು ಮೂಲಗಳು ತಿಳಿಸಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net