ಬೆಂಗಳೂರು: ಭಾರತ ಸರ್ಕಾರದ ಸಂಸತಿ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾದ ಸಂಗೀತ ನಾಟಕ ಅಕಾಡೆಮಿ ಆಯೋಜಿಸಿದ್ದ ರಾಷ್ಟ್ರೀಯ ರಂಗಮಹೋತ್ಸವದಲ್ಲಿ ಬೆಂಗಳೂರಿನ ಯಕ್ಷಕಲಾ ಅಕಾಡೆಮಿ ಪ್ರಸ್ತುತಪಡಿಸಿದ "ರಾಣಿ ಕಿತ್ತೂರು ಚೆನ್ನಮ್ಮ' ಯಕ್ಷಗಾನ ಪ್ರಸಂಗ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ವಂದೇಮಾತರಂ ಗೀತೆಗೆ 150ನೇ ವರ್ಷ ಸಂಭ್ರಮ ಹಾಗೂ ಮಹಾಕವಿ ಕಾಳಿದಾಸ ಜಯಂತಿ ಅಂಗವಾಗಿ ದೇಶಾದ್ಯಂತ ನಡೆದ ಮಹೋತ್ಸವದಲ್ಲಿ 150ಕ್ಕೂ ಹೆಚ್ಚು ವೇದಿಕೆಗಳಲ್ಲಿ, 39ಕ್ಕೂ ಅಧಿಕ ಭಾರತೀಯ ಭಾಷೆಗಳಲ್ಲಿ 4,000ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿ ಭಾರತೀಯ ರಂಗಪರಂಪರೆಯ ವೈವಿಧ್ಯವನ್ನು ಅನಾವರಣಗೊಳಿಸಿದರು.
ಎನ್.ಆರ್. ಕಾಲನಿಯ ಡಾ.ಸಿ. ಅಶ್ವತ್ಥ್ ಕಲಾಮಂದಿರದಲ್ಲಿ ನಡೆದ ಪ್ರದರ್ಶನದಲ್ಲಿ ಡಿ.ಎಸ್. ಶ್ರೀಧರ್ ರಚನೆಯ ಪ್ರಸಂಗವನ್ನು ಯುವ ನಿರ್ದೇಶಕಿ ಚಿತ್ಕಲಾ ಕೆ. ತುಂಗ ಸಮರ್ಥವಾಗಿ ರಂಗರೂಪಕ್ಕೆ ತಂದರು.
ಕಿತ್ತೂರಿನ ಅರಸ ಮಲ್ಲಸರ್ಜ ದೇಸಾಯಿ ಹಾಗೂ ಚೆನ್ನಮ್ಮಳ ಭೇಟಿಯಿಂದ ಆರಂಭವಾಗುವ ಕಥಾನಕ, ಅವರ ವಿವಾಹ, ಅರಮನೆಯ ಬೆಳವಣಿಗೆಗಳು, ಬ್ರಿಟಿಷರ ದೌರ್ಜನ್ಯ, ದತ್ತು ಪುತ್ರನ ಉತ್ತರಾಧಿಕಾರ ವಿವಾದ ಹಾಗೂ ಸ್ವಾತಂತ್ರ್ಯ ಹೋರಾಟದ ಘಟನೆಗಳನ್ನು ಪರಿಣಾಮಕಾರಿಯಾಗಿ ತೆರೆದಿಟ್ಟಿತು.
ಬ್ರಿಟಿಷರ ವಿರುದ್ಧದ ಕಿತ್ತೂರಿನ ಹೋರಾಟ, ಕಲೆಕ್ಟರ್ ಥ್ಯಾಕರೆಯ ವಿರುದ್ಧದ ಸಮರ, ಸಂಗೊಳ್ಳಿ ರಾಯಣ್ಣನ ಶೌರ್ಯ ಹಾಗೂ ಮಲ್ಲಪ್ಪ ಶೆಟ್ಟಿ& ವೆಂಕಟರಾಯರ ದ್ರೋಹದ ಮೂಲಕ ಚೆನ್ನಮ್ಮಳ ಬಂಧನದ ಪ್ರಸಂಗಗಳು ಪ್ರೇಕ್ಷಕರಲ್ಲಿ ವಿಚಾರ ಪ್ರೇರೇಪಿಸಿದವು. ಕೊನೆಯಲ್ಲಿ ಸಂಗೊಳ್ಳಿ ರಾಯಣ್ಣನ ಹೋರಾಟದ ಸಂಕಲ್ಪ ಹಾಗೂ ಚೆನ್ನಮ್ಮಳ ತ್ಯಾಗಮಯ ಜೀವನಗಾಥೆ ಮನಮುಟ್ಟುವ ರೀತಿಯಲ್ಲಿ ಮೂಡಿಬಂತು.
ಚೆನ್ನಮ್ಮಳ ಪಾತ್ರದಲ್ಲಿ ಪೂಜಾ ಆಚಾರ್ಯ ಭಾವಪೂರ್ಣ ಅಭಿನಯ ಮತ್ತು ಸಂಭಾಷಣೆಯ ಮೂಲಕ ಗಮನಸೆಳೆದರು. ಮಲ್ಲಸರ್ಜನ ಪಾತ್ರದಲ್ಲಿ ರಾಘವೇಂದ್ರ ಐತಾಳ್ ಹಾಗೂ ಸಂಗೊಳ್ಳಿ ರಾಯಣ್ಣನಾಗಿ ಅಭಿನವ ತುಂಗ ತಮ್ಮ ನೃತ್ಯ, ರಂಗಸಾನ್ನಿಧ್ಯ ಮತ್ತು ಅಭಿನಯದಿಂದ ಮೆಚ್ಚುಗೆ ಗಳಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ಹದಿನಾರು ಕಲಾವಿದರು "ವಂದೇಮಾತರಂ' ಗೀತೆಗೆ ನೀಡಿದ ಸಮೂಹ ಅಭಿನಯ ವಿಶೇಷ ಆಕರ್ಷಣೆಯಾಗಿತ್ತು.