ರಾಜಧಾನಿಯಲ್ಲಿ ಎಷ್ಟೇ ಮಳೆ ಸುರಿದರೂ ಪ್ರಯೋಜನವಿಲ್ಲ. ನೀರಿನ ಸಂಗ್ರಹವಾಗುವುದಿಲ್ಲ. ಇತ್ತೀಚೆಗೆ ಭಾರಿ ಮಳೆಯಿಂದ ನಗರದ ಹಲವು ರಸ್ತೆಗಳು ಜಲಾವೃತಗೊಂಡು, ರಾಜಕಾಲುವೆಗಳು ತುಂಬಿ ಹೋಗಿದ್ದರೂ, ಮಳೆಯ ನೀರು ವ್ಯರ್ಥವಾಗಿ ಹರಿದು ಹೋಗುತ್ತಿರುವುದೇ ನಗರಕ್ಕೆ ಎದುರಾಗಿರುವ ದೊಡ್ಡ ಸಮಸ್ಯೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಂದಾಜು ನಗರಕ್ಕೆ ಸುಮಾರು 20ರಿಂದ 22 ಮಿಲಿಯನ್ ಕ್ಯೂಬಿಕ್ ಮೀಟರ್ ನೀರು ಲಭಿಸಿದೆ. ಆದರೆ ಈ ಪೈಕಿ ಅತಿ ಕಡಿಮೆ ಪ್ರಮಾಣದ ನೀರು ಮಾತ್ರ ಭೂಗರ್ಭ ಜಲಮಟ್ಟ ಹೆಚ್ಚಿಸಲು ನೆರವಾಗಿದ್ದು, ಉಳಿದ ಬಹುಪಾಲು ನೀರು ಅಂದರೆ ಶೇ.90 ಕಾಂಕ್ರೀಟ್ ರಸ್ತೆಗಳು, ಕಟ್ಟಡ ಪ್ರದೇಶಗಳು ಹಾಗೂ ಚರಂಡಿಗಳ ಮೂಲಕ ಹರಿದು ಹೋಗಿದೆ.
ನಗರದಲ್ಲಿ ಮಳೆನೀರು ಸಂಗ್ರಹ ವ್ಯವಸ್ಥೆ ಕಡ್ಡಾಯಗೊಳಿಸಿ 15 ವರ್ಷಗಳು ಕಳೆದಿದ್ದರೂ, ಸಂಗ್ರಹವಾಗುವ ನೀರಿಗಿಂತ ವ್ಯರ್ಥವಾಗುವ ನೀರಿನ ಪ್ರಮಾಣವೇ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕಟ್ಟಡಗಳಲ್ಲಿ ನಿಯಮ ಉಲ್ಲಂಘನೆ:
ಬೆಂಗಳೂರು ಜಲಮಂಡಳಿಯ ಮಾಹಿತಿಯ ಪ್ರಕಾರ, ನಗರದಲ್ಲಿ ಸುಮಾರು 2.4 ಲಕ್ಷ ಮಳೆನೀರು ಸಂಗ್ರಹ ವ್ಯವಸ್ಥೆಗಳಿವೆ. ಆದರೂ 49,958 ಆಸ್ತಿಗಳು ಇನ್ನೂ ನಿಯಮ ಪಾಲನೆ ಮಾಡಿಲ್ಲ. ಈ ಕಟ್ಟಡಗಳಿಂದ ದಂಡ ರೂಪದಲ್ಲಿ ಪ್ರತಿ ತಿಂಗಳು ಸುಮಾರು 4.5 ಕೋಟಿ ರೂ.ಆದಾಯ ಜಲಮಂಡಳಿಗೆ ಬರುತ್ತಿದೆ.
2012ರ ಕರ್ನಾಟಕ ಭೂಗರ್ಭಜಲ ನಿಯಂತ್ರಣ ಮತ್ತು ನಿರ್ವಹಣಾ ಕಾಯ್ದೆಯಡಿ ಹೊಸ ಕಟ್ಟಡಗಳಲ್ಲಿ ಮಳೆನೀರು ಸಂಗ್ರಹ ವ್ಯವಸ್ಥೆ ಕಡ್ಡಾಯಗೊಳಿಸಲಾಗಿತ್ತು. ಕಟ್ಟಡದ ಮೇಲ್ಛಾವಣಿಯ ಪ್ರತಿ ಚದರ ಮೀಟರ್ಗೆ 60 ಲೀಟರ್ ಮತ್ತು ನೆಲದ ಪ್ರತಿ ಚದರ ಮೀಟರ್ಗೆ 30 ಲೀಟರ್ ಸಂಗ್ರಹ ಸಾಮರ್ಥ್ಯ ಇರಬೇಕು ಎಂದು ನಿಯಮಿಸಲಾಗಿದೆ.
ಕಾಂಕ್ರೀಟ್ ರಾಜಧಾನಿಯಾದ ಬೆಂಗಳೂರು:
ನಗರದಲ್ಲಿ ಅತಿಯಾದ ಕಾಂಕ್ರೀಟಿಕರಣದಿಂದ ಮಳೆಯ ನೀರು ಇಂಗುವಿಕೆ ಸಾಮರ್ಥ್ಯ ಕುಂಠಿತವಾಗಿದೆ. 2025ರ ಭೂಗರ್ಭಜಲ ಸಂಪನ್ಮೂಲ ವರದಿ ಪ್ರಕಾರ, ಕರ್ನಾಟಕದಲ್ಲಿ ವಾರ್ಷಿಕ ಭೂಗರ್ಭಜಲ ಮರುಪೂರಣದ ಶೇ.53ರಷ್ಟು ಮಳೆಯ ನೀರಿನಿಂದಲೇ ಆಗುತ್ತದೆ. ಆದರೂ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳು ರಾಜ್ಯದಲ್ಲೇ ಹೆಚ್ಚು ಒತ್ತಡದಲ್ಲಿರುವ ಪ್ರದೇಶಗಳಾಗಿ ಗುರುತಿಸಲ್ಪಟ್ಟಿವೆ.
ಬೆಂಗಳೂರು ನಗರ ಜಿಲ್ಲೆಯ ವಾರ್ಷಿಕ ಮರುಪೂರಣ ಪ್ರಮಾಣ 34,265 ಹೆಕ್ಟೇರ್ ಮೀಟರ್ ಇದ್ದರೂ, ಬಳಕೆ ಪ್ರಮಾಣ ಶೇ.177.3ಕ್ಕೆ ತಲುಪಿದೆ. ಗ್ರಾಮಾಂತರ ಪ್ರದೇಶದಲ್ಲಿ ಇದು ಶೇ.146.8ರಷ್ಟಿದೆ. ಜಲ ಸಂರಕ್ಷಣಾ ತಜ್ಞರ ಪ್ರಕಾರ, ನಗರದಲ್ಲಿನ ಸುಮಾರು ಶೇ.80ರಷ್ಟು ಪ್ರದೇಶ ಕಾಂಕ್ರೀಟ್ ಅಥವಾ ಡಾಂಬರಿನಿಂದ ಮುಚ್ಚಲ್ಪಟ್ಟಿದೆ. ಇದರಿಂದ ತೀವ್ರ ಮಳೆಯ ಸಂದರ್ಭ ನೀರು ನೆಲದೊಳಗೆ ಇಳಿಯಲು ಸಮಯ ಸಿಗುವುದಿಲ್ಲ.
ನಗರದಲ್ಲಿ ಸುರಿಯುವ ಮಳೆಯ ನೀರನ್ನು ಸಮರ್ಪಕವಾಗಿ ಸಂಗ್ರಹಿಸಿ, ಕೆರೆಗಳ ಪುನಶ್ಚೇತನ, ಚರಂಡಿ ಮತ್ತು ಒಳಚರಂಡಿ ಪ್ರತ್ಯೇಕ ವ್ಯವಸ್ಥೆ, ನೀರು ಹೀರಿಕೊಳ್ಳುವ ವ್ಯವಸ್ಥೆ ಮಾಡಿದಾಗ ಮಾತ್ರ ಭವಿಷ್ಯದ ನೀರಿನ ಬಿಕ್ಕಟ್ಟಿಗೆ ಪರಿಹಾರ ಕೊಡಲು ಸಾಧ್ಯ.
17 ಲಕ್ಷ ಜನರಿಗೆ ನೀರು!
ಬೆಂಗಳೂರಿನಲ್ಲಿ ಸುರಿಯುವ ಮಳೆಯ ನೀರು ಶೇ.10 ಪ್ರಮಾಣ ಮಾತ್ರ ಭೂಗರ್ಭ ಸೇರುತ್ತಿದ್ದು, ಉಳಿಂದ ಶೇ.90 ಭಾಗ ಮೇಲ್ಮೈಯಲ್ಲಿ ಹರಿದು ಹೋಗುತ್ತಿದೆ. ನಗರದಲ್ಲಿ ಸರಾಸರಿ ವಾರ್ಷಿಕವಾಗಿ 830ರಿಂದ 900 ಮಿ.ಮೀ. ಮಳೆಯಾದರೂ ಅದರ ಸಂಪೂರ್ಣ ಪ್ರಯೋಜನ ಸಿಗುತ್ತಿಲ್ಲ.
ನಗರದಲ್ಲಿ ಹರಿದು ಹೋಗುತ್ತಿರುವ ನೀರನ್ನು ಸಮರ್ಪಕವಾಗಿ ಸಂರಕ್ಷಿಸಿದರೆ ಸುಮಾರು 17 ಲಕ್ಷ ಜನರ ನೀರಿನ ಅಗತ್ಯ ಪೂರೈಸಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಬೋರ್ವೆಲ್ ಅವಲಂಬನೆ ಹೆಚ್ಚಳ
ನಗರದಲ್ಲಿ ಚಾಲ್ತಿಯಲ್ಲಿರುವ ಬೋರ್ವೆಲ್ಗಳ ಸಂಖ್ಯೆ ಸುಮಾರು 3.7 ಲಕ್ಷಕ್ಕೆ ತಲುಪಿದ್ದು, ನಗರದ ಹೊರವಲಯಗಳಲ್ಲಿ ಹೊಸ ಬೋರ್ವೆಲ್ ತೆಗೆಯುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಮಳೆನೀರು ಸಂಗ್ರಹ ಮತ್ತು ಭೂಜಲ ಮರುಪೂರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರದಿದ್ದರೆ ಟ್ಯಾಂಕರ್ ನೀರು ಹಾಗೂ ಆಳದ ಬೋರ್ವೆಲ್ಗಳ ಅವಲಂಬನೆ ಇನ್ನಷ್ಟು ಹೆಚ್ಚಲಿದೆ.
ನಗರದ ದಕ್ಷಿಣ ಭಾಗದಲ್ಲಿ 60 ಮೈಕ್ರಾನ್ ಫಿಲ್ಟರ್ ಬಳಸಿ ಮಳೆನೀರಿನ ಗುಣಮಟ್ಟವನ್ನು ಕಾವೇರಿ ನೀರಿನ ಮಟ್ಟಕ್ಕೆ ತರುವ ಪ್ರಾಯೋಗಿಕ ಯೋಜನೆ ಯಶಸ್ವಿಯಾಗಿದೆ. ಈ ಯೋಜನೆಯನ್ನು ಮುಂದಿನ ದಿನಗಳಲ್ಲಿ ನಗರದೆಲ್ಲೆಡೆ ವಿಸ್ತರಿಸಲು ಚಿಂತನೆ ಇದೆ.