ಸೇವಾ ದಿವಸದ ಅಂಗವಾಗಿ ರೈಲ್ವೆ ಸಿಬ್ಬಂದಿಗೆ ಸನ್ಮಾನ

ರೈಲ್ವೆ
ರೈಲ್ವೆ
Published on

ಪ್ರಮುಖ ಮುಖ್ಯಾಂಶಗಳು

  • ಕೆಎಸ್​ಆರ್​ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಆಶೀರ್ವಾದದ ದೀಪ ಬೆಳಗಿಸಿದ ವಿ. ಸೋಮಣ್ಣ, ಪಿ.ಸಿ. ಮೋಹನ್​
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರು ಸಾರ್ವಜನಿಕ ಜೀವನದಲ್ಲಿ 25 ವರ್ಷ ಪೂರೈಸಿದ್ದು, ರಾಷ್ಟ್ರಸೇವೆಗೆ ನೀಡಿದ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಜನ್ಮದಿನವನ್ನು "ಸೇವಾ ದಿವಸ'ವಾಗಿ ಆಚರಿಸಲಾಗುತ್ತಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಆಚರಿಸಲಾಗುತ್ತಿರುವ "ಸೇವಾ ದಿವಸ'ದ ಪ್ರಯುಕ್ತ ಗುರುವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್​ಆರ್​) ಬೆಂಗಳೂರು ರೈಲು ನಿಲ್ದಾಣದಲ್ಲಿ ಮಾದರಿ ಸೇವೆ ಸಲ್ಲಿಸಿದ ರೈಲ್ವೆ ಸಿಬ್ಬಂದಿಯನ್ನು ಸನ್ಮಾನಿಸಿ, ಮಾತನಾಡಿದರು.
ರೈಲ್ವೆ ಕುಟುಂಬದ 200ಕ್ಕೂ ಅಧಿಕ ಸಿಬ್ಬಂದಿಯೊಂದಿಗೆ "ಆಶೀರ್ವಾದದ ದೀಪ' ಬೆಳಗಿಸುತ್ತಿರುವುದು ಸಂತಸದ ಸಂಗತಿ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಗುರಿಯೊಂದಿಗೆ ಪ್ರಧಾನಿ ಮೋದಿ ಅವರು ಯುವಜನರಿಗೆ ಸ್ಫೂರ್ತಿ ನೀಡುತ್ತಿದ್ದಾರೆ. ರೈಲ್ವೆ ಹಾಗೂ ಹೆದ್ದಾರಿಗಳು ದೇಶದ ಬೆನ್ನೆಲುಬಾಗಿದ್ದು, ಮೂಲಸೌಕರ್ಯಗಳ ನಿರಂತರ ಅಭಿವೃದ್ಧಿ ಅತ್ಯಗತ್ಯ ಎಂದರು.
ಬೆಂಗಳೂರು ಕಂಟೋನ್ಮೆಂಟ್​ ರೈಲು ನಿಲ್ದಾಣವನ್ನು 485 ಕೋಟಿ ರೂ. ವೆಚ್ಚದಲ್ಲಿ ಮರು ಅಭಿವೃದ್ಧಿಪಡಿಸಲಾಗುತ್ತಿದ್ದು, ಡಿಸೆಂಬರ್​ 2026ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಯಶವಂತಪುರ ರೈಲು ನಿಲ್ದಾಣವನ್ನು ಅಂದಾಜು 480 ಕೋಟಿ ರೂ. ವೆಚ್ಚದಲ್ಲಿ ಮರು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು. 
ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶುತೋಷ್​ ಕುಮಾರ್​ ಸಿಂಗ್​ ಮಾತನಾಡಿ, ಸೇವೆಯ ಪ್ರತಿಯೊಂದು ಕಾರ್ಯವೂ ಸಮಾಜದ ಒಳಿತಿಗೆ ಕೊಡುಗೆ ನೀಡುತ್ತದೆ. ರೈಲ್ವೆಗೆ "ಸೇವೆ' ಎಂಬುದು ಒಂದು ದಿನಕ್ಕೆ ಸೀಮಿತವಲ್ಲ, 24 ಗಂಟೆ, 365 ದಿನಗಳ ಜವಾಬ್ದಾರಿಯಾಗಿದೆ ಎಂದರು.
ಸೋಮಣ್ಣ ಹಾಗೂ ಪಿ.ಸಿ. ಮೋಹನ್​ ಅವರು "ಆಶೀರ್ವಾದ್​ ಕಾ ದಿಯಾ' ಬೆಳಗಿಸಿದರು. ವಂದೇ ಭಾರತ್​ ರೈಲುಗಳ ಸಿಬ್ಬಂದಿ ಸೇರಿ ರೈಲ್ವೆ ಸಿಬ್ಬಂದಿ ಸುಮಾರು 250 ದೀಪ ಬೆಳಗಿಸಿದರು. ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪರೀಕ್ಷಿತ್​ ಮೋಹನ್​ಪುರಿಯಾ, ಪ್ರವಿಣ್​ ಕಾತರಕಿ, ರೈಟ್ಸ್​ ಬೆಂಗಳೂರಿನ ಪ್ರಧಾನ ವ್ಯವಸ್ಥಾಪಕ ಎಂ.ಜಿ. ಸುದೀಪ್​ ಉಪಸ್ಥಿತರಿದ್ದರು.

ಭಾರತೀಯ ರೈಲ್ವೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಗಣನೀಯ ಅಭಿವೃದ್ಧಿಯಾಗಿದ್ದು, ರೈಲು ಮಾರ್ಗಗಳ ವಿದ್ಯುದ್ದೀಕರಣ ಬಹುತೇಕ ಪೂರ್ಣಗೊಂಡಿರುವುದು ಗಮನಾರ್ಹ ಬೆಳವಣಿಗೆ. ಕಳೆದ 12 ವರ್ಷಗಳಲ್ಲಿ ದೇಶದಲ್ಲಿ ಹೊಸ ವಿಮಾನ ನಿಲ್ದಾಣಗಳು, ಏಮ್ಸ್​ ಹಾಗೂ ಐಐಟಿಗಳ ಸ್ಥಾಪನೆಯೂ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net