ಯಲಹಂಕ ಪುಟ್ಟೇನಹಳ್ಳಿ ಕೆರೆಗೆ ಕೊಳಚೆ ನೀರು ಹರಿವು ತಡೆಗೆ ಜಲಮಂಡಳಿ ಯೋಜನೆ

ಜಿಬಿಎ
ಜಿಬಿಎ
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಯಲಹಂಕ ಪುಟ್ಟೇನಹಳ್ಳಿ ಕೆರೆಗೆ ಸೇರುತ್ತಿದ್ದ ಕೊಳಚೆ ನೀರಿನ ಹರಿವನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್​ಎಸ್​ಬಿ) ಮಹತ್ವದ ಕ್ರಮ ಕೈಗೊಂಡಿದೆ.
ಕೆರೆಯ ವಾಕಿಂಗ್​ ಟ್ರ್ಯಾಕ್​ ಸಮೀಪ 700 ಮಿ.ಮೀ. ವ್ಯಾಸದ ಭೂಗತ ಒಳಚರಂಡಿ ಪೈಪ್​ಲೈನ್​ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದ್ದು, ಇದರಿಂದ ಕೆರೆಗೆ ಹರಿದು ಬರುತ್ತಿದ್ದ ಕೊಳಚೆ ನೀರನ್ನು ಸಮೀಪದ ಒಳಚರಂಡಿ ಶುದ್ಧೀಕರಣ ಘಟಕಕ್ಕೆ (ಎಸ್​ಟಿಪಿ) ತಿರುಗಿಸಲಾಗುತ್ತದೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್​ಜಿಟಿ)ಗೆ ಸಲ್ಲಿಸಿರುವ ವರದಿಯಲ್ಲಿ ಈ ಮಾಹಿತಿ ನೀಡಿರುವ ಬಿಡಬ್ಲ್ಯೂಎಸ್​ಎಸ್​ಬಿ, 2051ರ ವರೆಗೆ (ಮುಂದಿನ 25 ವರ್ಷ) ಈ ಪ್ರದೇಶದಲ್ಲಿ ಉತ್ಪತ್ತಿಯಾಗಲಿರುವ ಕೊಳಚೆ ನೀರಿನ ಪ್ರಮಾಣವನ್ನು ನಿರ್ವಹಿಸುವ ಸಾಮರ್ಥ್ಯ ಈ ಪೈಪ್​ಲೈನ್​ಗೆ ಇದೆ ಎಂದು ತಿಳಿಸಿದೆ.
ವಿಶ್ವ ಬ್ಯಾಂಕ್​ ನೆರವಿನ ಯೋಜನೆಯಡಿ ನಿಮಾರ್ಣವಾಗುತ್ತಿರುವ ಲ್ಯಾಟರಲ್​ ಸೀವರ್​ ಜಾಲಕ್ಕೆ ಈ ಪೈಪ್​ಲೈನ್​ ಸಂಪರ್ಕ ಕಲ್ಪಿಸಲಾಗುತ್ತದೆ. ಅಲ್ಲಿಂದ ಕೊಳಚೆ ನೀರು ಯಲಹಂಕ ಒಳಚರಂಡಿ ಶುದ್ಧೀಕರಣ ಘಟಕಕ್ಕೆ ಹರಿಯಲಿದ್ದು, ಘಟಕದ ನಾಗರಿಕ ಕಾಮಗಾರಿ ಅಂತಿಮ ಹಂತದಲ್ಲಿದೆ. 2026ರ ಸೆಪ್ಟೆಂಬರ್​ ಅಂತ್ಯದೊಳಗೆ ಪ್ರಾಯೋಗಿಕ ಕಾರ್ಯಾಚರಣೆ ಆರಂಭಿಸುವ ಗುರಿ ಹೊಂದಲಾಗಿದೆ.
ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶವಾಗಿ ಘೋಷಿತವಾಗಿರುವ ಯಲಹಂಕ ಪುಟ್ಟೇನಹಳ್ಳಿ ಕೆರೆ, ಸುತ್ತಮುತ್ತಲಿನ ಪ್ರದೇಶಗಳಿಂದ ಹರಿದು ಬರುತ್ತಿದ್ದ ಕೊಳಚೆ ನೀರಿನಿಂದ ತೀವ್ರ ಮಾಲಿನ್ಯಕ್ಕೆ ಒಳಗಾಗಿತ್ತು. ಇದೀಗ ಕೈಗೊಂಡಿರುವ ಈ ಯೋಜನೆಯಿಂದ ಕೆರೆಯ ಪರಿಸರ ಸಂರಕ್ಷಣೆ ಹಾಗೂ ನೀರಿನ ಗುಣಮಟ್ಟ ಸುಧಾರಣೆಗೆ ನೆರವಾಗುವ ನಿರೀಕ್ಷೆಯಿದೆ.
ಮುಖ್ಯಾಂಶಗಳು
* 2051ರವರೆಗಿನ ಕೊಳಚೆ ನೀರಿನ ಪ್ರಮಾಣ ನಿರ್ವಹಿಸುವ ಸಾಮರ್ಥ್ಯದ ಒಳಚರಂಡಿ ಪೈಪ್​ಲೈನ್​ ಪೂರ್ಣ
* ಸೆಪ್ಟೆಂಬರ್​ ಅಂತ್ಯದೊಳಗೆ ಎಸ್​ಟಿಪಿ ಪ್ರಾಯೋಗಿಕ ಕಾರ್ಯಾಚರಣೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net