ಮೆಟ್ರೋ ಪ್ರಯಾಣ ದರ ಮತ್ತೆ ಏರಿಕೆ ಇಲ್ಲ! |metro

ಮೆಟ್ರೋ
ಮೆಟ್ರೋ
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​)ನ ದರ ನಿಗದಿ ಸಮಿತಿ (ಎಫ್​ಎಫ್​ಸಿ) ಪ್ರತಿವರ್ಷ ಶೇ.5 ಹೆಚ್ಚಳಗೊಳಿಸಲು ಶಿಫಾರಸು ನೀಡಿದ್ದರೂ, ಸದ್ಯಕ್ಕೆ ಮೆಟ್ರೋ ಪ್ರಯಾಣ ದರ ಬದಲಾವಣೆ ಇಲ್ಲ ಎಂದು ಬಿಎಂಆರ್​ಸಿಎಲ್​ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ದರ ನಿಗದಿ ಸಮಿತಿ ಶಿಫಾರಸು ಮಾಡಿದೆಯಾದರೂ ದರ ಏರಿಕೆಗೆ ಸಂಬಂಧಿಸಿದಂತೆ ಯಾವುದೇ ಪ್ರಕ್ರಿಯೆಯನ್ನು ಆರಂಭಿಸಿಲ್ಲ. ಸದ್ಯಕ್ಕೆ ಏರಿಕೆ ಮಾಡುವುದಿಲ್ಲ. ಮುಂದೆ ಏರಿಕೆ ಮಾಡಲು ನಿರ್ಧರಿಸಿದಾಗ ಮಾಹಿತಿ ನೀಡಲಾಗುವುದು ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
2017ರಲ್ಲಿ ದರ ಪರಿಷ್ಕರಣೆ ಮಾಡಲಾಗಿತ್ತು. ಆಗ ಮೊದಲ ಎರಡು ಕಿ.ಮೀ.ಗೆ ಕನಿಷ್ಠ ದರ 10 ರೂ. ಹಾಗೂ ಗರಿಷ್ಠ ಅಂದರೆ 22 ಕಿ.ಮೀ.ನಿಂದ 30 ಕಿ.ಮೀ. ವರೆಗೆ 60 ರೂ. ನಿಗದಿಯಾಗಿತ್ತು. ಅದಾಗಿ 7.5 ವರ್ಷ ಆಗಿರುವುದರಿಂದ ವೇತನ ಹೆಚ್ಚಳ, ಸಾಮಗ್ರಿಗಳ ಬೆಲೆ ಹೆಚ್ಚಳ, ಸಾಲ ಹೆಚ್ಚಳ ಹೀಗೆ ಎಲ್ಲವೂ ಅಧಿಕವಾಗಿರುವುದರಿಂದ ಶೇ.105.5 ಹೆಚ್ಚಳ ಮಾಡಬೇಕು ಎಂದು ಬಿಎಂಆರ್​ಸಿಎಲ್​ ಬೇಡಿಕೆ ಮುಂದಿಟ್ಟಿತ್ತು. ಪ್ರಯಾಣಿಕರಿಂದ ಪ್ರತಿಭಟನೆ ಎದುರಾದ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದರು. ದುಪ್ಪಟ್ಟು ಇರುವಲ್ಲಿ ದರ ಇಳಿಕೆ ಮಾಡಲು ಕ್ರಮ ಕೈಗೊಂಡಿತ್ತು. ಕೊನೆಗೆ ಗರಿಷ್ಠ ಹೆಚ್ಚಳವನ್ನು ಶೇ.71.5ಕ್ಕೆ ಇಳಿಸಿತ್ತು. ಮತ್ತೆ ದರ ಹೆಚ್ಚಿಸಿದರೆ ಪ್ರಯಾಣಿಕರಿಂದ ವಿರೋಧ ವ್ಯಕ್ತವಾಗುವ ಭಯದಿಂದಲೇ ಬಿಎಂಆರ್​ಸಿಎಲ್​ ಜಾಣಮೌನ ತಾಳಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net