ಮೆಟ್ರೋ ಹಸಿರು ಮಾರ್ಗಕ್ಕೆ ಮತ್ತೆ ಮೂರು ರೈಲುಗಳು|metro

ಮೆಟ್ರೋ
ಮೆಟ್ರೋ
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಆಗಸ್ಟ್​ನಿಂದ ಆರು ಕೋಚ್​ಗಳ (ಬೋಗಿ) ಮೂರು ಹೊಸ ರೈಲುಗಳನ್ನು ಕಾರ್ಯಾಚರಣೆಗೆ ಇಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​) ಮುಂದಾಗಿದೆ.
ಚೀನಾ ರೈಲ್ವೆ ರೋಲಿಂಗ್​ ಸ್ಟಾಕ್​ ಕಾಪೋರ್ರೇಷನ್​ (ಸಿಆರ್​ಆರ್​ಸಿ) ಹಾಗೂ ತಿತಾಗಢ ರೈಲ್​ ಸಿಸ್ಟಮ್ಸ್​ ಲಿಮಿಟೆಡ್​ (ಟಿಆರ್​ಎಸ್​ಎಲ್​) ಪೂರೈಸುತ್ತಿರುವ 23 ಹೊಸ ರೈಲುಗಳ ಪೈಕಿ ಪ್ರೊಟೋಟೈಪ್​ ಸೇರಿ ಮೂರು ರೈಲುಗಳು ಈಗಾಗಲೇ ಬೆಂಗಳೂರಿಗೆ ತಲುಪಿವೆ. ಇವು ಡಿಸ್ಟೆನ್ಸ್​- ಟು -ಗೋ (ಡಿಟಿಜಿ) ತಂತ್ರಜ್ಞಾನ ಹೊಂದಿದ್ದು, ಗ್ರೀನ್​ಲೈನ್​ನಲ್ಲಿ ಅಂತಿಮ ಹಂತದ ಪರೀಕ್ಷೆಗಳನ್ನು ಪೂರ್ಣಗೊಳಿಸುತ್ತಿವೆ.
ಹಸಿರು ಮಾರ್ಗದಲ್ಲಿ ಈಗಾಗಲೇ ವಾಣಿಜ್ಯ ಸಂಚಾರ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಮಾತ್ರ ಪರೀಕ್ಷಾ ಓಡಾಟ ನಡೆಸಬೇಕಾದ ಕಾರಣ ಪ್ರಕ್ರಿಯೆ ವಿಳಂಬವಾಗಿತ್ತು. ಆದರೂ ಆಸಿಲೇಷನ್​, ಸಿಗ್ನಲಿಂಗ್​ ಸೇರಿ ಪ್ರಮುಖ ಪರೀಕ್ಷೆಗಳು ಪೂರ್ಣಗೊಂಡಿದ್ದು, ರೈಲ್ವೆ ಮಂಡಳಿಯಿಂದ ರೋಲಿಂಗ್​ ಸ್ಟಾಕ್​ಗೆ ಅನುಮೋದನೆಯೂ ದೊರೆತಿದೆ. ಈಗ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ (ಸಿಎಂಆರ್​ಎಸ್​) ಅನುಮತಿ ದೊರೆತ ಬಳಿಕ ಆಗಸ್ಟ್​ನಲ್ಲೇ ಪ್ರಯಾಣಿಕರ ಸೇವೆಗೆ ಇಳಿಸುವ ಗುರಿ ಹೊಂದಲಾಗಿದೆ ಎಂದು ನಿಗಮ ತಿಳಿಸಿದೆ.
ಭಾರತದಲ್ಲಿ ಉತ್ಪಾದನಾ ಘಟಕ ಸ್ಥಾಪನೆ ವಿಳಂಬಗೊಂಡ ಕಾರಣ ಕೋಚ್​ಗಳ ತಯಾರಿಕೆ ಹಲವು ವರ್ಷಗಳ ಕಾಲ ನನೆಗುದಿಗೆ ಬಿದ್ದಿತ್ತು. 2019ರಲ್ಲಿ 1,578 ಕೋಟಿ ರೂ. ವೆಚ್ಚದಲ್ಲಿ 216 ಮೆಟ್ರೋ ಕೋಚ್​ಗಳನ್ನು ತಯಾರಿಸಲು ಸಿಆರ್​ಆರ್​ಸಿಗೆ ಬಿಎಂಆರ್​ಸಿಎಲ್​ ಗುತ್ತಿಗೆ ನೀಡಿತ್ತು. ಬಳಿಕ ತಿತಾಗಢ ರೈಲ್​ ಸಿಸ್ಟಮ್ಸ್​ ಜತೆಗಿನ ಪಾಲುದಾರಿಕೆಯಿಂದ ಯೋಜನೆಗೆ ಮರುಜೀವ ಸಿಕ್ಕಿದ್ದು, ಇದೀಗ ಹೊಸ ರೈಲುಗಳ ಸೇರ್ಪಡೆಗೆ ದಾರಿ ಸುಗಮವಾಗಿದೆ.
ನೇರಳೆ ಮಾರ್ಗಕ್ಕೂ ವರ್ಗಾವಣೆ
ಹೊಸ ರೈಲುಗಳು ಹಸಿರು ಮಾರ್ಗದಲ್ಲಿ ಕಾರ್ಯಾರಂಭಿಸಿದ ಬಳಿಕ ಅಲ್ಲಿನ ಹಾಲಿ ರೈಲುಗಳನ್ನು ಹೆಚ್ಚಿನ ಪ್ರಯಾಣಿಕರ ದಟ್ಟಣೆ ಇರುವ ನೇರಳೆ ಮಾರ್ಗಕ್ಕೆ ವರ್ಗಾಯಿಸಲಾಗುತ್ತದೆ. ಈ ಕ್ರಮದಿಂದ ಎರಡೂ ಮಾರ್ಗಗಳಲ್ಲಿ ರೈಲು ಸಂಚಾರದ ಆವರ್ತನ ಹೆಚ್ಚಲಿದ್ದು, ಜನದಟ್ಟಣೆ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net