ಮೆಟ್ರೋ ವಿಸ್ತರಣೆ ಆಸ್ತಿಗಳಿಗೆ ಆಕರ್ಷಣೆ | METRO

ಮೆಟ್ರೋ
ಮೆಟ್ರೋ
Published on

ಪ್ರಮುಖ ಮುಖ್ಯಾಂಶಗಳು

  • ರಿಯಲ್​ ಎಸ್ಟೇಟ್​ ಕ್ಷೇತ್ರಕ್ಕೆ ಹೊಸ ಚೈತನ್ಯ
  • ನಿಲ್ದಾಣಗಳ ಸುತ್ತಮುತ್ತ ಹೂಡಿಕೆದಾರರ ಚಿತ್ತ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ರಾಜಧಾನಿಯ ಸಾರಿಗೆ ವ್ಯವಸ್ಥೆಗೆ ಜೀವನಾಡಿ ಎನಿಸಿರುವ ನಮ್ಮ ಮೆಟ್ರೋ, ಇದೀಗ ನಗರದ ರಿಯಲ್​ ಎಸ್ಟೇಟ್​ ಕ್ಷೇತ್ರಕ್ಕೂ ಹೊಸ ಚೈತನ್ಯ ತುಂಬುತ್ತಿದೆ. ವರ್ಷದಿಂದ ವರ್ಷಕ್ಕೆ ವಿಸ್ತರಿಸುತ್ತಿರುವ ಮೆಟ್ರೋ ಜಾಲವು ನಗರದ ವಿವಿಧ ಭಾಗಗಳ ಸಂಪರ್ಕವನ್ನು ಸುಧಾರಿಸುತ್ತಿದ್ದು, ನಿಲ್ದಾಣಗಳ ಸುತ್ತಮುತ್ತಲಿನ ಪ್ರದೇಶಗಳು ಮನೆ ಖರೀದಿದಾರರು ಹಾಗೂ ಹೂಡಿಕೆದಾರರ ಪ್ರಮುಖ ಆಯ್ಕೆಯಾಗಿ ಹೊರಹೊಮ್ಮಿವೆ.
ನಗರಾಭಿವೃದ್ಧಿಯ ಹೊಸ ಪರಿಕಲ್ಪನೆಯಾದ ಟ್ರಾನ್ಸಿಟ್​ ಓರಿಯಂಟೆಡ್​ ಡೆವಲಪ್​ಮೆಂಟ್​ಗೆ (ಟಿಒಡಿ) ನಮ್ಮ ಮೆಟ್ರೋ ವೇಗ ನೀಡುತ್ತಿದೆ. ಮೆಟ್ರೋ ಕೇಂದ್ರಗಳ ಸುತ್ತಲೂ ವಸತಿ, ವಾಣಿಜ್ಯ ಮತ್ತು ಸಾಮಾಜಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಖಾಸಗಿ ವಾಹನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಇದರಿಂದ ಜೀವನಮಟ್ಟ ಸುಧಾರಣೆಯಾಗುವುದರ ಜತೆಗೆ ಆಸ್ತಿ ಮೌಲ್ಯವೂ ಹೆಚ್ಚುತ್ತಿದೆ.
ನಗರದ ಪ್ರಮುಖ ಉದ್ಯೋಗ ಕೇಂದ್ರಗಳನ್ನು ವಸತಿ ಪ್ರದೇಶಗಳೊಂದಿಗೆ ಸಂಪರ್ಕಿಸುವ ಮೆಟ್ರೋ ಯೋಜನೆ, ದೀರ್ಘಾವಧಿಯ ಹೂಡಿಕೆಗೆ ಉತ್ತಮ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಹೀಗಾಗಿ ನಮ್ಮ ಮೆಟ್ರೋ ಮಾರ್ಗಗಳ ಸಮೀಪದ ಪ್ರದೇಶಗಳು ಇಂದು ಮನೆ ಖರೀದಿ ಹಾಗೂ ಆಸ್ತಿ ಹೂಡಿಕೆಗೆ ಭರವಸೆಯ ತಾಣಗಳಾಗಿ ಗುರುತಿಸಿಕೊಳ್ಳುತ್ತಿವೆ.
ಆರ್ಥಿಕ ಅಭಿವೃದ್ಧಿಗೆ ವೇಗ:
ಮೆಟ್ರೋ ವಿಸ್ತರಣೆಯ ಪರಿಣಾಮ ಕೇವಲ ಸಂಚಾರ ವ್ಯವಸ್ಥೆಗೆ ಮಾತ್ರ ಸೀಮಿತವಾಗಿಲ್ಲ. ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೂ ಇದು ಪ್ರಮುಖ ಚಾಲಕ ಶಕ್ತಿಯಾಗಿ ಪರಿಣಮಿಸಿದೆ. ಹೊಸ ಮೆಟ್ರೋ ಮಾರ್ಗಗಳು ಘೋಷಣೆಯಾಗುತ್ತಿದ್ದಂತೆಯೇ ಆ ಭಾಗಗಳಲ್ಲಿ ವಸತಿ ಯೋಜನೆಗಳು, ವಾಣಿಜ್ಯ ಸಂಕೀರ್ಣಗಳು, ಕಚೇರಿ ಕಟ್ಟಡಗಳು ಹಾಗೂ ಚಿಲ್ಲರೆ ವ್ಯಾಪಾರ ಕೇಂದ್ರಗಳ ಅಭಿವೃದ್ಧಿ ವೇಗ ಪಡೆಯುತ್ತಿದೆ. ಇದರ ಪರಿಣಾಮವಾಗಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿದ್ದು, ಸ್ಥಳಿಯ ಆರ್ಥಿಕ ಚಟುವಟಿಕೆಗಳು ಚುರುಕುಗೊಳ್ಳುತ್ತಿವೆ.
ಮುಂದಿನ ದಶಕದಲ್ಲಿ ಬೆಂಗಳೂರು ಮೆಟ್ರೋ ಜಾಲ ಮತ್ತಷ್ಟು ವಿಸ್ತರಿಸಲಿರುವುದರಿಂದ ಈಗಿನಿಂದಲೇ ಮೆಟ್ರೋ ಕಾರಿಡಾರ್​ಗಳ ಸಮೀಪ ಹೂಡಿಕೆ ಮಾಡುವವರು ದೀರ್ಘಾವಧಿಯಲ್ಲಿ ಉತ್ತಮ ಲಾಭ ಗಳಿಸುವ ಸಾಧ್ಯತೆ ಇದೆ. ಈಗಾಗಲೇ ವೈಟ್​ಫೀಲ್ಡ್​, ಕೆಂಗೇರಿ, ನಾಗಸಂದ್ರ, ಯಲಹಂಕ, ಹೆಬ್ಬಾಳ ಹಾಗೂ ಸರ್ಜಾಪುರ ರಸ್ತೆ ಭಾಗಗಳಲ್ಲಿ ರಿಯಲ್​ ಎಸ್ಟೇಟ್​ ಚಟುವಟಿಕೆಗಳು ವೇಗ ಪಡೆದುಕೊಂಡಿವೆ. ಭವಿಷ್ಯದ ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಂಪರ್ಕ ವ್ಯವಸ್ಥೆಯ ಸುಧಾರಣೆಯಿಂದ ಈ ಪ್ರದೇಶಗಳು ನಗರದ ಹೊಸ ಹೂಡಿಕೆ ಕೇಂದ್ರಗಳಾಗಿ ರೂಪುಗೊಳ್ಳುವ ನಿರೀಕ್ಷೆ ಇದೆ. ಹೀಗಾಗಿ ಬೆಂಗಳೂರಿನಲ್ಲಿ ಆಸ್ತಿ ಖರೀದಿ ಅಥವಾ ಹೂಡಿಕೆ ಮಾಡಲು ಯೋಜಿಸುವವರು ಮೆಟ್ರೋ ಸಂಪರ್ಕವನ್ನು ಪ್ರಮುಖ ಮಾನದಂಡವಾಗಿ ಪರಿಗಣಿಸುತ್ತಿದ್ದಾರೆ ಎಂಬುದು ತಜ್ಞರ ಅಭಿಪ್ರಾಯ.
ಎಲ್ಲೆಲ್ಲಿ ಆಸ್ತಿ ದರ ಏರಿಕೆ?
ಮೆಟ್ರೋ ನಿಲ್ದಾಣದಿಂದ 500 ಮೀಟರ್​ ವ್ಯಾಪ್ತಿಯಲ್ಲಿರುವ ಪ್ರದೇಶಗಳಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಶೇ.20ರಿಂದ 40ರವರೆಗೆ ಆಸ್ತಿ ಮೌಲ್ಯ ಏರಿಕೆಯಾಗಿದೆ. ವೈಟ್​ಫೀಲ್ಡ್​ನಲ್ಲಿ ಶೇ.25-&35, ಎಲೆಕ್ಟ್ರಾನಿಕ್ಸ್​ ಸಿಟಿಯಲ್ಲಿ ಶೇ.30&-40 ಹಾಗೂ ಕೆ.ಆರ್​.ಪುರದಲ್ಲಿ ಶೇ.20&-30 ಮೌಲ್ಯವರ್ಧನೆ ದಾಖಲಾಗಿದೆ. ಹೆಬ್ಬಾಳ ಮತ್ತು ಸರ್ಜಾಪುರ ರಸ್ತೆ ಪ್ರದೇಶಗಳಲ್ಲೂ ಮುಂದಿನ ವರ್ಷಗಳಲ್ಲಿ ಗಣನೀಯ ಏರಿಕೆ ನಿರೀಕ್ಷಿಸಲಾಗಿದೆ ಎಂದು ರಿಯಲ್​ ಎಸ್ಟೇಟ್​ ತಜ್ಞರು ತಿಳಿಸಿದ್ದಾರೆ.
ಉತ್ತಮ ಆದಾಯದ ಅವಕಾಶ
ಐಟಿ ಉದ್ಯೋಗಿಗಳು ಮತ್ತು ಯುವ ವೃತ್ತಿಪರರು ಕಚೇರಿಗೆ ಸುಲಭವಾಗಿ ತಲುಪಲು ಮೆಟ್ರೋ ಸಂಪರ್ಕವಿರುವ ಪ್ರದೇಶಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದರಿಂದ ಬಾಡಿಗೆ ಮನೆಗಳ ಬೇಡಿಕೆಯೂ ಏರಿಕೆಯಾಗಿದ್ದು, ಆಸ್ತಿ ಮಾಲೀಕರಿಗೆ ಉತ್ತಮ ಆದಾಯದ ಅವಕಾಶಗಳು ಸೃಷ್ಟಿಯಾಗಿವೆ. ಮೆಟ್ರೋ ನಿಲ್ದಾಣದ ಸಮೀಪವಿರುವ ಅಪಾರ್ಟ್​ಮೆಂಟ್​ಗಳು ಮತ್ತು ವಾಣಿಜ್ಯ ಆಸ್ತಿಗಳು ಇತರ ಪ್ರದೇಶಗಳಿಗೆ ಹೋಲಿಸಿದರೆ ಹೆಚ್ಚು ವೇಗವಾಗಿ ಬಾಡಿಗೆದಾರರನ್ನು ಸೆಳೆಯುತ್ತಿವೆ ಎಂಬುದು ತಜ್ಞರ ಅಭಿಮತ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net