ನಮ್ಮ ಮೆಟ್ರೋಗೆ ಸಾರ್ವಕಾಲಿಕ ದಾಖಲೆ

ಮೆಟ್ರೋ
ಮೆಟ್ರೋ
Published on

ಪ್ರಮುಖ ಮುಖ್ಯಾಂಶಗಳು

  • ಒಂದೇ ದಿನ 11.19 ಲಕ್ಷ ಬೋರ್ಡಿಂಗ್​!
  • ಹಳದಿ ಮಾರ್ಗದ ಪ್ರಯಾಣಿಕರ ಸಂಖ್ಯೆ ಹೆಚ್ಚಳ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಜೀವನಾಡಿಯಾಗಿರುವ ನಮ್ಮ ಮೆಟ್ರೋ ಹೊಸ ದಾಖಲೆ ಬರೆದಿದೆ. ಆ.10ರಂದು (ಸೋಮವಾರ) ಮೆಟ್ರೋ ರೈಲುಗಳಲ್ಲಿ ಒಟ್ಟು 11,19,815 ಬೋರ್ಡಿಂಗ್​ಗಳು ದಾಖಲಾಗಿದ್ದು, ಈವರೆಗಿನ ಅತ್ಯಧಿಕ ದೈನಂದಿನ ಪ್ರಯಾಣಿಕ ಬಳಕೆಯ ದಾಖಲೆ ನಿಮಾರ್ಣವಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​) ಮಾಹಿತಿ ನೀಡಿದೆ.
ಇದರಲ್ಲಿ ನೇರಳೆ ಮಾರ್ಗ 5,54,161 ಬೋರ್ಡಿಂಗ್​ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಹಸಿರು ಮಾರ್ಗ 4,22,315 ಮತ್ತು ಹಳದಿ ಮಾರ್ಗ 1,43,339 ಬೋರ್ಡಿಂಗ್​ಗಳನ್ನು ದಾಖಲಿಸಿವೆ. ಇನ್ನು ವಿವಿಧ ಮಾರ್ಗಗಳಿಗೆ ಬದಲಾಯಿಸಲು ಪ್ರಮುಖ ಇಂಟರ್​ಚೇಂಜ್​ ನಿಲ್ದಾಣಗಳನ್ನು ಬಳಸಿಕೊಂಡ ಪ್ರಯಾಣಿಕರ ಸಂಖ್ಯೆ 2,75,107 ರಷ್ಟಿದ್ದು, ಒಟ್ಟಾರೆಯಾಗಿ ದಿನದ ಕೊನೆಗೆ 11,19,815 ಬೋರ್ಡಿಂಗ್​ಗಳು ದಾಖಲಾಗಿವೆ.
ಹಳದಿ ಮಾರ್ಗ ಆರಂಭಗೊಂಡ ಬಳಿಕ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬರುತ್ತಿರುವುದು ಗಮನಾರ್ಹ. ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ, ರಸ್ತೆ ಪ್ರಯಾಣದ ಸಮಯ ಹಾಗೂ ಸಾರ್ವಜನಿಕ ಸಾರಿಗೆಯ ಮೇಲಿನ ಅವಲಂಬನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೆಟ್ರೋ ಬಳಕೆ ದಿನದಿನಕ್ಕೆ ವೃದ್ಧಿಸುತ್ತಿದೆ. ಹೆಚ್ಚುವರಿ ರೈಲುಗಳು ಮತ್ತು ಹೊಸ ಮಾರ್ಗಗಳ ಸೇರ್ಪಡೆಯೊಂದಿಗೆ ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.
ಈ ದಾಖಲೆಗೆ ಲಾಲ್​ಬಾಗ್​ ಫಲಪುಷ್ಪ ಪ್ರದರ್ಶನ, ಸೋಮವಾರದ ರಜೆ, ರಜಾದಿನದ ವಾತಾವರಣ ಹಾಗೂ ಹಳದಿ ಮಾರ್ಗದ ಹೆಚ್ಚುತ್ತಿರುವ ಬಳಕೆ ಪ್ರಮುಖ ಕಾರಣಗಳಾಗಿವೆ. ಆ.10ರಂದು ಲಾಲ್​ಬಾಗ್​ ಫಲಪುಷ್ಪ ಪ್ರದರ್ಶನಕ್ಕೆ ಭಾರಿ ಜನಸ್ತೋಮ ಹರಿದುಬಂದಿದ್ದು, ಮೆಟ್ರೋ ದಾಖಲೆಯ ಏರಿಕೆಗೆ ಇದು ಪ್ರಮುಖ ಕಾರಣವಾಗಿದೆ.
ಸೋಮವಾರದ ದಿನ ಸಾಮಾನ್ಯವಾಗಿ ಪ್ರಯಾಣಿಕರ ದಟ್ಟಣೆ ಹೆಚ್ಚಿದ್ದು, ಅದೂ ಪೂರಕವಾಗಿದೆ. ವಾರದ ಆರಂಭದಲ್ಲಿ ಉದ್ಯೋಗ, ಶಿಕ್ಷಣ ಹಾಗೂ ವಾಣಿಜ್ಯ ಉದ್ದೇಶಗಳಿಗಾಗಿ ನಗರಾದ್ಯಂತ ಸಂಚಾರ ಹೆಚ್ಚಾಗುತ್ತದೆ. ಇದಕ್ಕೆ ಫಲಪುಷ್ಪ ಪ್ರದರ್ಶನದ ಪ್ರವಾಸಿಗರು ಸೇರ್ಪಡೆಯಾಗಿದ್ದರಿಂದ ಮೆಟ್ರೋಗೆ ಹೆಚ್ಚುವರಿ ಪ್ರಯಾಣಿಕರು ಬಂದಿದ್ದಾರೆ ಎನ್ನಬಹುದು. 

ಹಿಂದಿನ ದಾಖಲೆ ಎಷ್ಟು?

ಇದಕ್ಕೂ ಮೊದಲು 2026ರ ಮಾರ್ಚ್​ 18ರಂದು 10.73 ಲಕ್ಷ ಪ್ರಯಾಣಿಕರು ಮೆಟ್ರೋ ಬಳಸಿದ್ದು, ಅದು ಸಾರ್ವಕಾಲಿಕ ಗರಿಷ್ಠ ದಾಖಲೆಯಾಗಿತ್ತು. ಇದೀಗ ಆ ದಾಖಲೆಯನ್ನು ಆ.10ರ 11.19 ಲಕ್ಷ ಬೋರ್ಡಿಂಗ್​ಗಳು ಮೀರಿಸಿವೆ. ನಮ್ಮ ಮೆಟ್ರೋಗೆ ಹಳದಿ ಮಾರ್ಗ ಸೇರ್ಪಡೆಯಾದ ಬಳಿಕವೇ ಮೊದಲ ಬಾರಿಗೆ ದೈನಂದಿನ ಪ್ರಯಾಣಿಕರ ಸಂಖ್ಯೆ 10 ಲಕ್ಷದ ಗಡಿ ದಾಟಿತ್ತು. 2025ರ ಆ.11ರಂದು ಹಳದಿ ಮಾರ್ಗ ಕಾರ್ಯಾರಂಭದ ಸಂದರ್ಭದಲ್ಲಿ 10,48,031 ಬೋರ್ಡಿಂಗ್​ಗಳು ದಾಖಲಾಗಿದ್ದವು. ಆ ದಿನ ಹಳದಿ ಮಾರ್ಗವೊಂದರಲ್ಲೇ 52,215 ಪ್ರಯಾಣಿಕರು ಪ್ರಯಾಣಿಸಿದ್ದರು. ಈ ಬಾರಿ ಹಳದಿ ಮಾರ್ಗದ ಬಳಕೆ ಮತ್ತಷ್ಟು ಹೆಚ್ಚಿದ್ದು, ಆ.10ರಂದು 1,43,339 ಬೋರ್ಡಿಂಗ್​ಗಳು ದಾಖಲಾಗಿವೆ. ಅಂದರೆ, ಹಳದಿ ಮಾರ್ಗ ಆರಂಭವಾದ ಒಂದು ವರ್ಷದೊಳಗೆ ಅದರ ದಿನನಿತ್ಯದ ಬಳಕೆ ಗಣನೀಯವಾಗಿ ವೃದ್ಧಿಸಿರುವುದು ಗಮನಾರ್ಹವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net