ಎರಡು ವರ್ಷ ಟೆಂಡರ್​ ವಿಳಂಬ ಸಂಚಾರ ಸಿಕ್ಕಿಗೆ ಮುಕ್ತಿ ಯಾವಾಗ?

ಮೆಟ್ರೋ
ಮೆಟ್ರೋ
Published on

ಪ್ರಮುಖ ಮುಖ್ಯಾಂಶಗಳು

  • ಕಿತ್ತಳೆ ಮಾರ್ಗಕ್ಕೆ ಮತ್ತೆ ಟೆಂಡರ್​
  • ಡಬಲ್​ಡೆಕ್ಕರ್​ 44.65 ರಿಂದ 11 ಕಿ.ಮೀ.ಗೆ ಇಳಿಕೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಗರದಲ್ಲಿ ಒಂದೆಡೆ ವಾಹನಗಳ ಸಂಖ್ಯೆ ಹೆಚ್ಚಳ, ಮತ್ತೊಂದೆಡೆ ರಸ್ತೆಗಳಲ್ಲಿ ದಿನದಿನಕ್ಕೆ ಉಲ್ಬಣಿಸುತ್ತಿರುವ ಸಂಚಾರ ದಟ್ಟಣೆ. ಇದಕ್ಕೆ ಪರಿಹಾರ ನೀಡಬೇಕಿದ್ದ ಮೆಟ್ರೋ ವಿಸ್ತರಣೆಯೇ ವಿಳಂಬದ ಸುಳಿಯಲ್ಲಿ ಸಿಲುಕಿದೆ.
ಕೇಂದ್ರ ಸರ್ಕಾರ ಅನುಮೋದನೆ ನೀಡಿ ಎರಡು ವರ್ಷ ಕಳೆದರೂ ನಮ್ಮ ಮೆಟ್ರೋ ಹಂತ-&3ರ ಪ್ರಮುಖ ನಾಗರಿಕ ಕಾಮಗಾರಿಗಳಿಗೆ ಕಾರ್ಯಾದೇಶ ಇನ್ನೂ ಹೊರಬಿದ್ದಿಲ್ಲ. ಇದೀಗ ವಿನ್ಯಾಸ ಬದಲಾವಣೆಯ ಕಾರಣ ಈಗಾಗಲೇ ಕರೆದಿರುವ ಟೆಂಡರ್​ಗಳನ್ನು ಹಿಂಪಡೆದು, ಮುಂದಿನ 30 ರಿಂದ 45 ದಿನಗಳಲ್ಲಿ ಹೊಸ ಟೆಂಡರ್​ ಕರೆಯಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​) ಸಿದ್ಧತೆ ನಡೆಸಿದೆ.
ಬೆಂಗಳೂರಿನ ಪಶ್ಚಿಮ ಭಾಗದ ಸಂಚಾರ ದಟ್ಟಣೆಗೆ ಪರಿಹಾರದ ನಿರೀಕ್ಷೆ ಮೂಡಿಸಿದ್ದ 44.65 ಕಿ.ಮೀ. ಉದ್ದದ ಕಿತ್ತಳೆ ಮಾರ್ಗದ ಯೋಜನೆ ವಿಳಂಬವಾಗುತ್ತಿರುವುದು ಪ್ರಯಾಣಿಕರ ಆತಂಕ ಹೆಚ್ಚಿಸಿದೆ. ಜೆ.ಪಿ. ನಗರ 4ನೇ ಹಂತದಿಂದ ಕೆಂಪಾಪುರದವರೆಗೆ 32 ಕಿಮೀ ಹಾಗೂ ಹೊಸಹಳ್ಳಿಯಿಂದ ಕಡಬಗೆರೆಯವರೆಗೆ 12.5 ಕಿ.ಮೀ. ಉದ್ದದ ಎರಡು ಮಾರ್ಗಗಳು ನಿಮಾರ್ಣವಾಗಬೇಕಿವೆ. ಒಟ್ಟು 31 ನಿಲ್ದಾಣಗಳನ್ನು ಒಳಗೊಂಡಿರುವ ಯೋಜನೆಗೆ 15,611 ಕೋಟಿ ರೂ. ವೆಚ್ಚ ನಿಗದಿಯಾಗಿದೆ.
ಟ್ರಾಫಿಕ್​ ಜಂಕ್ಷನ್​ಗಳಲ್ಲೇ ಪರಿಹಾರ?:
ಸೀಮಿತ ರಸ್ತೆ ಜಾಗ ಮತ್ತು ಭೂಸ್ವಾಧಿನದ ವೆಚ್ಚ ತಪ್ಪಿಸಲು ರಾಜ್ಯ ಸರ್ಕಾರ ಇಡೀ ಮಾರ್ಗವನ್ನು ಡಬಲ್​ಡೆಕ್ಕರ್​ ಮಾದರಿಯಲ್ಲಿ ನಿರ್ಮಿಸಲು ಮುಂದಾಗಿತ್ತು. ಆದರೆ, ಸಂಪೂರ್ಣ ಮಾರ್ಗದಲ್ಲಿ ರಸ್ತೆ ಮೇಲ್ಸೇತುವೆ ಹಾಗೂ ಅದರ ಮೇಲ್ಭಾಗದಲ್ಲಿ ಮೆಟ್ರೋ ನಿರ್ಮಿಸುವ ಪ್ರಸ್ತಾವನೆ ಆರ್ಥಿಕವಾಗಿ ಕಾರ್ಯಸಾಧ್ಯವೇ ಎಂಬುದು ಸೇರಿ ಹಲವು ವಿಚಾರಗಳ ಕುರಿತು ಕೇಂದ್ರದ ಪರಿಶೀಲನೆಗೆ ಒಳಪಟ್ಟಿದೆ. ಜತೆಗೆ, ಇಂತಹ ಸಮಾನಾಂತರ ರಸ್ತೆ ಮೂಲಸೌಕರ್ಯವು ಮೆಟ್ರೋ ಪ್ರಯಾಣಿಕರ ಸಂಖ್ಯೆಯ ಮೇಲೂ ಪರಿಣಾಮ ಬೀರಬಹುದೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.
ಹೀಗಾಗಿ 44.65 ಕಿ.ಮೀ. ಮಾರ್ಗದ ಬದಲಿಗೆ ಸುಮಾರು 11 ಕಿ.ಮೀ. ವ್ಯಾಪ್ತಿಗೆ ಮಾತ್ರ ಡಬಲ್​ಡೆಕ್ಕರ್​ ವ್ಯವಸ್ಥೆ ಸೀಮಿತವಾಗಲಿದೆ. ಹೊರವರ್ತುಲ ರಸ್ತೆಯ ಕನಕಪುರ ರಸ್ತೆ ಜಂಕ್ಷನ್​ನಲ್ಲಿ 1.4 ಕಿ.ಮೀ. ಹಾಗೂ ಕಾಮಾಕ್ಯ ಜಂಕ್ಷನ್​ನಲ್ಲಿ 1.6 ಕಿ.ಮೀ. ಸೇರಿ 3 ಕಿ.ಮೀ. ಭಾಗದಲ್ಲಿ ಈಗಾಗಲೇ ಪ್ರಸ್ತಾವನೆ ಇದೆ. ಗೊರಗುಂಟೆಪಾಳ್ಯ ಸೇರಿ ಪ್ರಮುಖ ಸಂಚಾರ ದಟ್ಟಣೆ ಪ್ರದೇಶಗಳಲ್ಲಿ ಇನ್ನೂ 8 ಕಿ.ಮೀ. ಡಬಲ್​ಡೆಕ್ಕರ್​ ವ್ಯವಸ್ಥೆ ಪ್ರಸ್ತಾಪಿಸಲಾಗಿದೆ.
ಮತ್ತೆ ಟೆಂಡರ್​, ಮತ್ತೆ ಕಾಯುವಿಕೆ?
2026ರ ಜನವರಿಯಲ್ಲೇ ಆರೆಂಜ್​ ಲೈನ್​ನ 18.5 ಕಿ.ಮೀ. ಕಾಮಗಾರಿಗೆ ಮೂರು ಪ್ಯಾಕೇಜ್​ಗಳಲ್ಲಿ ಟೆಂಡರ್​ ಕರೆಯಲಾಗಿತ್ತು. ಇದೀಗ ವಿನ್ಯಾಸ ಬದಲಾವಣೆಯಿಂದ ಅವುಗಳನ್ನು ಹಿಂಪಡೆದು ಹೊಸ ಟೆಂಡರ್​ ಕರೆಯಬೇಕಾಗಿದೆ. ಇದಕ್ಕಾಗಿ ಯೋಜನಾ ಅಂದಾಜನ್ನೂ ಪರಿಷ್ಕರಿಸಬೇಕಿದೆ. 2025ರ ಆಗಸ್ಟ್​ನಲ್ಲಿ ಯೋಜನೆಗೆ ಶಂಕುಸ್ಥಾಪನೆ ನಡೆದಿದ್ದರೂ ಒಂದು ವರ್ಷದ ಬಳಿಕವೂ ಕಾಮಗಾರಿ ಆದೇಶ ಹೊರಬಾರದಿರುವುದು ವಿಳಂಬದ ಗಂಭೀರತೆಯನ್ನು ತೋರಿಸುತ್ತದೆ. ಈಗ ಹೊಸ ಟೆಂಡರ್​, ಪರಿಷ್ಕತ ಅಂದಾಜು ವೆಚ್ಚ ಹಾಗೂ ಅನುಮೋದನೆಗಳ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದೆ. ನಗರದಲ್ಲಿ ಪ್ರತಿದಿನ ಗಂಟೆಗಟ್ಟಲೆ ಟ್ರಾಫಿಕ್​ನಲ್ಲಿ ಸಿಲುಕುವ ಪ್ರಯಾಣಿಕರಿಗೆ ಮೆಟ್ರೋ ವಿಸ್ತರಣೆ ಯಾವಾಗ ನಿಜವಾದ ಪರ್ಯಾಯವಾಗಲಿದೆ ಎಂಬ ಪ್ರಶ್ನೆ ಮತ್ತೆ ಎದುರಾಗಿದೆ.
ಮುಖ್ಯಾಂಶಗಳು
* 2029ರೊಳಗೆ ಯೋಜನೆ ಪೂರ್ಣಗೊಳಿಸುವ ಗುರಿ ಇದ್ದರೂ, ಟೆಂಡರ್​ ಪ್ರಕ್ರಿಯೆಯಲ್ಲಿನ ಮತ್ತಷ್ಟು ವಿಳಂಬವು ಕಾಮಗಾರಿ ಅವಧಿ ಹಾಗೂ ವೆಚ್ಚದ ಮೇಲೂ ಪರಿಣಾಮ ಬೀರುವ ಸಾಧ್ಯತೆ
* ಇನ್ನು ಸರಿಯಾಗದ ಡಬಲ್​ ಡೆಕ್ಕರ್​ ಗೊಂದಲ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net