ಬಲು ದುಬಾರಿಯಾದ ನಮ್ಮ ಮೆಟ್ರೋ | metro

ಮೆಟ್ರೋ
ಮೆಟ್ರೋ
Published on

ಪ್ರಮುಖ ಮುಖ್ಯಾಂಶಗಳು

  • ಶೇ.5 ಪ್ರಯಾಣ ದರ ಹೆಚ್ಚಳ ಸೋಮವಾರದಿಂದ ಜಾರಿ
  • ಪ್ರಯಾಣಿಕರಿಂದ ವ್ಯಾಪಕ ಆಕ್ರೋಶ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
"ನಮ್ಮ ಮೆಟ್ರೋ' ಪ್ರಯಾಣ ದರ ಏರಿಕೆ ಮತ್ತೆ ನಡೆದಿದ್ದು, ವರ್ಷದ ಹಿಂದಷ್ಟೇ ಪ್ರಯಾಣ ದರವನ್ನು ಶೇ.71.5 ರಷ್ಟು ಹೆಚ್ಚಳ ಮಾಡಿತ್ತು. ಇಂತಹ ಭಾರಿ ಏರಿಕೆ ಭವಿಷ್ಯದಲ್ಲಿ ಬರಬಾರದೆಂಬ ನಿಟ್ಟಿನಲ್ಲಿ ವರ್ಷಂಪ್ರತಿ ಏರಿಕೆಗೆ ಮುಂದಾಗಿದ್ದೇವೆ ಎಂದು ಶೇ.5 ಪ್ರಯಾಣ ದರ ಹೆಚ್ಚಳವನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​) ಸಮರ್ಥಿಸಿಕೊಂಡಿದೆ.
ಕಳೆದ ವರ್ಷ ಭಾರಿ ಏರಿಕೆ ಸಂದರ್ಭ ಮೆಟ್ರೋ ವಿಸ್ತರಣೆ, ನಿರ್ವಹಣಾ ವೆಚ್ಚಕ್ಕೆ ಅನುಗುಣವಾಗಿ ದರ ಏರಿಕೆ ಮಾಡುತ್ತಿರುವುದಾಗಿ ಸ್ಪಷ್ಟನೆ ನೀಡಿತ್ತು, ಬಿಎಂಆರ್​ಸಿಎಲ್​ ಪ್ರತಿವರ್ಷ ಮಾಡಬಹುದು ಎಂದು ದರ ನಿಗದಿ ಸಮಿತಿ 2025ರಲ್ಲಿ ಶಿಫಾರಸು ಮಾಡಿತ್ತು. ಈ ಬಗ್ಗೆ ಎರಡು ದಿನಗಳ ಹಿಂದೆ ನಡೆದ ಬಿಎಂಆರ್​ಸಿಎಲ್​ ಮಂಡಳಿ ಸಭೆಯಲ್ಲಿ ಚರ್ಚೆ ನಡೆಸಿ ಶೇ.5 ಏರಿಸಲು ಅನುಮೋದನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಇದೀಗ ರಾಜ್ಯ ಸರ್ಕಾರ ಈ ಪ್ರಸ್ತಾಪಕ್ಕೆ ಅನುಮೋದನೆ ನೀಡಿದ್ದು, ಹೊಸ ದರ ಸೋಮವಾರದಿಂದ (ಫೆ.9) ಜಾರಿಗೆ ಬರಲಿದೆ. ಕನಿಷ್ಠ 1 ರೂ. ಹಾಗೂ ಗರಿಷ್ಠ 5 ರೂ. ಹೆಚ್ಚಳವಾಗಲಿದೆ. ಕನಿಷ್ಠ 10 ಇರುವ ದರ 11ಕ್ಕೆ, ಗರಿಷ್ಠ 90 ಇರುವ ದರ 95 ರೂ.ಗೆ ಏರಿಕೆಯಾಗಲಿದೆ.
ಕಳೆದ ಬಾರಿ ಶೇ.101.5 ಹೆಚ್ಚಳ ಮಾಡಿ 2025ರ ಫೆ.9 ರಂದು ಜಾರಿ ಮಾಡಿತ್ತು. ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ದಿಢೀರ್​ ಕುಸಿತವಾದ ಬೆನ್ನಲ್ಲೇ ನಾಲ್ಕು ದಿನಗಳ ಬಳಿಕ ದರವನ್ನು ಶೇ.30 ಇಳಿಸಲಾಗಿತ್ತು.
ಮೆಟ್ರೋ ರೈಲ್ವೆ ಕಾಯ್ದೆ 2002ರ ಅಡಿಯಲ್ಲಿ ರಚಿಸಲಾದ "ಫೇರ್​ ಫಿಕ್ಸೇಶನ್​ ಕಮಿಟಿ' (ಎ್​ಎ್​ಸಿ) ಶಿಫಾರಸಿನಂತೆ ಈ ದರ ಪರಿಷ್ಕರಣೆ ಮಾಡಲಾಗಿದೆ. ಹೆಚ್ಚುತ್ತಿರುವ ಕಾರ್ಯಾಚರಣೆ ವೆಚ್ಚ ಸರಿದೂಗಿಸಲು ಈ ಕ್ರಮ ಅನಿವಾರ್ಯ ಎಂದು ಬಿಎಂಆರ್​ಸಿಎಲ್​ ತಿಳಿಸಿದೆ.
ಆರ್ಥಿಕ ಸುಸ್ಥಿರತೆ ಮತ್ತು ಸೇವಾ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ಈ ಅಲ್ಪ ವಾರ್ಷಿಕ ಪರಿಷ್ಕರಣೆಯನ್ನು ಮಾಡಲಾಗಿದೆ. ಈ ವಿಧಾನವು ಹಣದುಬ್ಬರ ಮತ್ತು ನಿರ್ವಹಣಾ ವೆಚ್ಚಗಳನ್ನು ಕ್ರಮೇಣವಾಗಿ ಸರಿದೂಗಿಸಲು ಅನುವು ಮಾಡಿಕೊಡುತ್ತದೆ. ಇದರಿಂದಾಗಿ ಪ್ರಯಾಣಿಕರನ್ನು ತೀವ್ರವಾದ ದರ ಏರಿಕೆಗಳಿಂದ ರಕ್ಷಿಸುತ್ತದೆ ಎಂದು ತಿಳಿಸಿದೆ.
ದೇಶದಲ್ಲೇ ದುಬಾರಿ!
ಬಿಎಂಆರ್​ಸಿಎಲ್​ನ ಬೆಲೆ ಏರಿಕೆ ರ್ನಿಣಯ ಸಾರ್ವಜನಿಕ ವಲಯದಲ್ಲಿ ಕಿಚ್ಚೆಬ್ಬಿಸಿದೆ.
ಸಾರ್ವಜನಿಕ ಸಂಪರ್ಕ ವ್ಯವಸ್ಥೆಯಲ್ಲಿ ಒಂದಾದ ಮೆಟ್ರೋ ಸೇವೆ ಸೇವಾ ಮನೋಭಾವವನ್ನು ಹೊಂದಿರಬೇಕಿದ್ದು, "ದೇಶದಲ್ಲೇ ಅತಿ ದುಬಾರಿ ಮೆಟ್ರೋ'ವಾಗಿ ಬದಲಾಗಿರುವ ಬಿಎಂಆರ್​ಸಿಎಲ್​ ಬಂಡವಾಳ ಕ್ರೋಢಿಕರಣಕ್ಕೆ ಮುಂದಾಗುತ್ತಿದೆ ಎಂಬ ಅರೋಪಗಳು ಕೇಳಿಬರುತ್ತಿದೆ.
ಎಲ್ಲೆಲ್ಲಿ ಎಷ್ಟೆಷ್ಟು?: ನಮ್ಮ ಮೆಟ್ರೋಕ್ಕಿಂತ ಕಡಿಮೆ ಸಂಪರ್ಕ ಜಾಲವಿರುವ ಕೋಲ್ಕತ್ತಾ (59ಕಿಮೀ)ದಲ್ಲಿ ಕನಿಷ್ಠ 5ರೂ. ಗರಿಷ್ಠ 25 ರೂ., ಮುಂಬೈ (60 ಕಿಮೀ)ನಲ್ಲಿ 10&80, ಹೈದರಾಬಾದ್​ (69 ಕಿಮೀ)ನಲ್ಲಿ 11&69, ಚೆನೈ (54 ಕಿಮೀ)ನಲ್ಲಿ ಕನಿಷ್ಠ 10 ರೂ. ಹಾಗೂ ಗರಿಷ್ಠ 50 ರೂ. ಇದೆ. ಅಲ್ಲದೆ, 395 ಕಿಮೀ ವಿಸ್ತರಣೆ ಇರುವ ದೆಹಲಿ ಮೆಟ್ರೋದಲ್ಲೂ ಕನಿಷ್ಠ 11ರೂ. ಹಾಗೂ ಗರಿಷ್ಠ 64 ರೂ. ಇದೆ. ಆದ್ದರಿಂದಲೇ ಈಗಷ್ಟೇ 100 ಕಿಮೀ ಸಮೀಪ ಬರುತ್ತಿರುವ ನಮ್ಮ ಮೆಟ್ರೋ ದೇಶದ ಬಲು ದುಬಾರಿ ಮೆಟ್ರೋ ಎಂದೆನಿಸಿಕೊಂಡಿದೆ.
ದೆಹಲಿ ಮೆಟ್ರೋ 2017ರಲ್ಲಿ 8 ವರ್ಷಗಳ ನಂತರ ಮೆಟ್ರೋ ಪ್ರಯಾಣ ದರದಲ್ಲಿ ಗಣನೀಯ ಹೆಚ್ಚಳ ಮಾಡಿತ್ತು. ಕನಿಷ್ಠ ದರ 8ರಿಂದ 10ಕ್ಕೆ, ಗರಿಷ್ಠ ದರ 30 ರಿಂದ 50&60ಕ್ಕೆ ಹೆಚ್ಚಿಸಿತ್ತು. ಆದರೆ, ನಮ್ಮ ಮೆಟ್ರೋಕ್ಕಿಂತ 4 ಪಟ್ಟು ಹೆಚ್ಚು ವಿಸ್ತರಣಾ ಜಾಲಹೊಂದಿರುವ ಡಿಎಂಆರ್​ಸಿಎಲ್​ ಬೆಲೆ ಹೆಚ್ಚಳಕ್ಕೂ ಇಷ್ಟೇ ಜನಾಕ್ರೋಶ ವ್ಯಕ್ತವಾಗಿತ್ತು. ನಿರ್ವಹಣೆ ವೆಚ್ಚ, ವೇತನ ವೆಚ್ಚ, ಇಂಧನ ವೆಚ್ಚ, ಸಾಮಾಗ್ರಿ ವೆಚ್ಚ ಪ್ರತಿ ವರ್ಷ ಹೆಚ್ಚುತ್ತಿರುವ ಆಧಾರದ ಮೇಲೆಯೇ ದರ ಏರಿಕೆ ಮಾಡುವುದಾದರೆ 92 ಕಿಮೀ ಸಂಪರ್ಕ ಜಾಲವಿರುವ ಬಿಎಂಆರ್​ಸಿಎಲ್​ ಪ್ರಯಾಣ ದರ ಪ್ರತಿವರ್ಷ ಏರಿಸಿರುವುದು ಅನ್ಯಾಯ ಎಂಬುದು ಜನರ ವಾದ. ಅದರಲ್ಲೂ ಬೆಂಗಳೂರು ನಗರವಾಸಿಗಳ ನಾಡಿ ಮಿಡಿತವಾಗಿರುವ "ನಮ್ಮ ಮೆಟ್ರೋ' ನಗರದ ಸಂಚಾರ ಸಿಕ್ಕಿನ ಸಮಸ್ಯೆಗಳಿಗೆ ರಾಮಭಾಣವಾಗಿದೆ. ವಿದ್ಯಾರ್ಥಿಗಳು, ಆಫೀಸಿಗೆ ಹೋಗುವವರು ಸೇರಿ ಅನೇಕ ಸಾರ್ವಜನಿಕರು ಸಂಚಾರ ಮಾಧ್ಯಮವಾಗಿ ಉಪಯೋಗಿಸುತ್ತಿರುವ ಮೆಟ್ರೋ ಸೇವೆ ದುಬಾರಿಯಾಗಿರುವುದು ಹಲವರಿಗೆ ಬೇಸರ ತರಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net