2033ಕ್ಕೆ ಮೆಟ್ರೋ ಟಿಕೆಟ್​ 126 ರೂ.?

ಮೆಟ್ರೋ
ಮೆಟ್ರೋ
Published on

ಪ್ರಮುಖ ಮುಖ್ಯಾಂಶಗಳು

  • ಪ್ರಯಾಣಿಕರ ಜೇಬಿಗೆ ಮತ್ತೆ ಬೀಳಲಿದೆಯೇ ಹೊರೆ!
  • 3ಎ ಹಂತದ ಡಿಪಿಆರ್​ನಲ್ಲಿ ದರ ಏರಿಕೆ ಲೆಕ್ಕಾಚಾರ
  • 3 ವರ್ಷಕ್ಕೊಮ್ಮೆ ಶೇ.12 ಹೆಚ್ಚಳದ ಮಾದರಿ ವಿಶ್ಲೇಷಣೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಬೆಂಗಳೂರಿನ ಮೆಟ್ರೋ ಪ್ರಯಾಣ ಮತ್ತಷ್ಟು ದುಬಾರಿಯಾಗುವ ಸುಳಿವು ಪರಿಷತ ವಿಸತ ಯೋಜನಾ ವರದಿ (ಡಿಪಿಆರ್​)ಯಿಂದ ಹೊರಬಿದ್ದಿದೆ. ನಮ್ಮ ಮೆಟ್ರೋ 3ಎ (ಸರ್ಜಾಪುರ-ಹೆಬ್ಬಾಳ) ಮಾರ್ಗದ ಡಿಪಿಆರ್​ನಲ್ಲಿ 3 ವರ್ಷಕ್ಕೊಮ್ಮೆ ಶೇ.12 ಪ್ರಯಾಣ ದರ ಹೆಚ್ಚಿಸುವ ಮಾದರಿಯನ್ನು ವಿಶ್ಲೇಷಿಸಲಾಗಿದ್ದು, ಅದರಂತೆ 2033ರ ವೇಳೆಗೆ ಗರಿಷ್ಠ ಮೆಟ್ರೋ ಟಿಕೆಟ್​ ದರ 126 ರೂ. ತಲುಪುವ ಸಾಧ್ಯತೆ ಉಲ್ಲೇಖಿಸಲಾಗಿದೆ. ಇದರಿಂದ ಭವಿಷ್ಯದಲ್ಲಿ ಪ್ರಯಾಣಿಕರ ಮೇಲಿನ ಆರ್ಥಿಕ ಹೊರೆ ಹೆಚ್ಚುವ ಆತಂಕ ವ್ಯಕ್ತವಾಗಿದೆ.
ಡಿಪಿಆರ್​ನಲ್ಲಿ ಯೋಜನೆಯ ಆರ್ಥಿಕ ಕಾರ್ಯಸಾಧ್ಯತೆ ಹೆಚ್ಚಿಸಲು ವಿವಿಧ ದರ ಪರಿಷ್ಕರಣೆ ಮಾದರಿಗಳ ವಿಶ್ಲೇಷಣೆ ನಡೆಸಲಾಗಿದೆ. ಮೂರು ವರ್ಷಕ್ಕೊಮ್ಮೆ ಶೇ.12 ದರ ಏರಿಸಿದರೆ ಆರ್ಥಿಕ ಆಂತರಿಕ ಆದಾಯದ ದರ (ಎಫ್​ಐಆರ್​ಆರ್​) ಶೇ.7.96 ಆಗಲಿದ್ದು, ಎರಡು ವರ್ಷಕ್ಕೊಮ್ಮೆ ಇದೇ ಪ್ರಮಾಣದಲ್ಲಿ ದರ ಹೆಚ್ಚಿಸಿದರೆ ಅದು ಶೇ.11.11ಕ್ಕೆ ಏರಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಾರ್ಷಿಕ ಶೇ.5 ದರ ಪರಿಷ್ಕರಣೆ ಮಾಡಿದರೆ ಎಫ್​ಐಆರ್​ಆರ್​ ಶೇ.10.41 ತಲುಪಲಿದೆ ಎಂಬ ಲೆಕ್ಕಾಚಾರವೂ ಇದೆ.
2025ರ ಫೆಬ್ರವರಿಯಲ್ಲಿ ಶೇ.51.55 ದರ ಏರಿಕೆಯ ಬಳಿಕ ಸಾರ್ವಜನಿಕರ ತೀವ್ರ ವಿರೋಧ ವ್ಯಕ್ತವಾಗಿತ್ತು. ನಂತರ ಪ್ರಸ್ತಾಪಿಸಲಾಗಿದ್ದ ಮತ್ತೊಂದು ದರ ಪರಿಷ್ಕರಣೆಯನ್ನು ಬಿಎಂಆರ್​ಸಿಎಲ್​ ಕೈಬಿಟ್ಟಿತ್ತು. ಈ ನಡುವೆ ಹೊಸ ಡಿಪಿಆರ್​ನಲ್ಲಿ ದರ ಏರಿಕೆಯ ಪರ್ಯಾಯ ಮಾದರಿಗಳನ್ನು ಉಲ್ಲೇಖಿಸಿರುವುದು ಮತ್ತೆ ಚರ್ಚೆಗೆ ಕಾರಣವಾಗಿದೆ. ಆದರೆ, ಡಿಪಿಆರ್​ನಲ್ಲಿನ ಈ ಲೆಕ್ಕಾಚಾರವೇ ಮುಂದಿನ ದರ ಪರಿಷ್ಕರಣೆಗೆ ಆಧಾರವಾಗುತ್ತದೆಯೇ ಎಂಬ ಬಗ್ಗೆ ಬಿಎಂಆರ್​ಸಿಎಲ್​ ಯಾವುದೇ ಸ್ಪಷ್ಟನೆ ನೀಡಿಲ್ಲ.
ಡಿಪಿಆರ್​ ಪ್ರಕಾರ 2033ರ ವೇಳೆಗೆ ಈ ಮಾರ್ಗದಲ್ಲಿ ಪ್ರತಿದಿನ 6.44 ಲಕ್ಷ ಪ್ರಯಾಣಿಕರು ಸಂಚರಿಸುವ ನಿರೀಕ್ಷೆ ಇದೆ. ಅಷ್ಟೇ ಅಲ್ಲದೆ, ಫೇರ್​ಬಾಕ್ಸ್​ನಿಂದ 1,837 ಕೋಟಿ ರೂ.ಹಾಗೂ ನಾನ್​ಫೇರ್​ಬಾಕ್ಸ್​ನಿಂದ 327 ಕೋಟಿ ರೂ.ಸೇರಿ ಒಟ್ಟು 2,164 ಕೋಟಿ ರೂ.ಆದಾಯದ ಗುರಿಯನ್ನೂ ನಿಗದಿಪಡಿಸಲಾಗಿದೆ.

ಪ್ರಯಾಣಿಕರ ವಿರೋಧ!

ಕಳೆದ ಬಾರಿ ಬೆಲೆ ಏರಿಕೆಗೆ ಶ್ರಮಿಸಿದಾಗ ಟಿಕೆಟೇತರ ಆದಾಯವನ್ನು ಹೆಚ್ಚಿಸುವಂತೆ ಬಿಎಂಆರ್​ಸಿಎಲ್​ ನೌಕರರಿಂದಲೇ ಸಲಹೆಗಳು ಬಂದಿತ್ತು. ಆದರೆ, ಕಾರ್ಯಾಚರಣೆಯ ಅನುಪಾತ ಸುಧಾರಿಸಲು ಹಾಗೂ ಕೆಲವರ್ಷ ಬಿಟ್ಟು ಏಕಾಏಕಿ ದರ ಏರಿಕೆ ಮಾಡುವ ಬದಲಾಗಿ ಪ್ರತಿವರ್ಷ ಶೇ. 5 ಏರಿಸಬೇಕು. ಇಲ್ಲದಿದ್ದರೆ ಬಿಎಂಆರ್​ಸಿಎಲ್​ ನಿವ್ವಳ ನಷ್ಟ 577 ಕೋಟಿ ರೂ. ಏರಿಕೆಯಾಗಲಿದೆ ಎಂದು ಎಫ್​ಎಫ್​ಸಿ ತಿಳಿಸಿತ್ತು. ಹೀಗಾಗಿ, ಮೆಟ್ರೋ ದರವನ್ನು ಫೆಬ್ರವರಿಯಲ್ಲಿ ಕನಿಷ್ಠ ದರ 11 ರೂ., ಗರಿಷ್ಠ ದರ 95 ರೂ. ಏರಿಕೆ ಮಾಡಲಾಗಿತ್ತು. ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ಬಿಎಂಆರ್​ಸಿಎಲ್​ ದರ ಏರಿಕೆ ಪ್ರಸ್ತಾವ ಕೈಬಿಟ್ಟಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net