ಗಂಗರು ಪೂಜಿಸುತ್ತಿದ್ದ ಭಗವಾನ್ ಸೂರ್ಯನಾರಾಯಣನ ಮೂರ್ತಿಗೆ ಪುಷ್ಪಗಳನ್ನು ಅರ್ಪಿಸುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿರುವುದು ವಿಶೇಷ. ಗಂಗ ದೊರೆಗಳ ಬಲಿಷ್ಠ ಗಜಸೇನೆ, ಯುದ್ಧದ ಸನ್ನಿವೇಶಗಳು, ಪ್ರದರ್ಶನದ ಒಂದು ಭಾಗವನ್ನು ಸುಂದರ ರಣರಂಗದಂತೆ ಬಿಂಬಿಸಿದರೆ, ಮತ್ತೊಂದು ಭಾಗ ಶ್ರವಣಬೆಳಗೊಳದ ಬಾಹುಬಲಿ ಪ್ರತಿಮೆ ಹಾಗೂ ತಲಕಾಡಿನ ದೇವಾಲಯಗಳ ಪ್ರತಿಕೃತಿಗಳನ್ನು ಹೂಗಳಿಂದ ನಿರ್ಮಿಸಿರುವುದು, ಗಂಗರ ಶಿಲ್ಪಕಲಾ ಪ್ರೌಢಿಮೆಯನ್ನು ಎತ್ತಿ ತೋರಿಸುತ್ತಿದೆ. ಗಂಗರ ಕಾಲದ ನಗರೇಶ್ವರ ದೇವಾಲಯವು ಸರಳ ಹಾಗೂ ಸುಂದರವಾದ ಚೌಕಾಕಾರದ ಗರ್ಭಗುಡಿ ಮತ್ತು ಮುಖಮಂಟಪವನ್ನು ಹೊಂದಿದ್ದು, ದೇವಾಲಯದ ಆವರಣದಲ್ಲಿ ಸುಂದರವಾದ ಕೆತ್ತನೆಗಳುಳ್ಳ ಕಂಬಗಳು, ವೀರಗಲ್ಲುಗಳು ಮತ್ತು ಪ್ರಾಚಿನ ಶಿಲ್ಪಗಳು ಗತವೈಭವವನ್ನು ಸ್ಮರಿಸುತ್ತದೆ. ವೀರನಾಗಿದ್ದ ಗಂಗ ಅರಸರಲ್ಲಿ ಅಗ್ರಗಣ್ಯ ಎನಿಸಿಕೊಂಡಿದ್ದ ಶ್ರೀಪುರುಷ ಆನೆಯೊಂದಿಗಿರುವ ಪ್ರತಿಮೆ ಕಣ್ಮನ ಸೆಳೆಯುತ್ತಿದೆ.