ರಾಜಧಾನಿಯಲ್ಲಿ ಕೆರೆಗಳ ಅಭಿವೃದ್ಧಿಗೆ ಚಿಂತನೆ| bwssb

ಜಲಮಂಡಳಿ
ಜಲಮಂಡಳಿ
Published on

ಪ್ರಮುಖ ಮುಖ್ಯಾಂಶಗಳು

  • ಬೇಸಿಗೆ ಸಮಸ್ಯೆಗಳನ್ನು ತಪ್ಪಿಸಲು ವಿಶೇಷ ಯೋಜನೆ
  • ಜಲಮಂಡಳಿಯಿಂದ ಮುನ್ನೆಚ್ಚರಿಕೆ ಕ್ರಮ
ಪವನ್​ ಆಚಾರ್ಯ ನೀರ್ಚಾಲು ಬೆಂಗಳೂರು
ಬೇಸಿಗೆಯಲ್ಲಿ ನಗರ ನಿವಾಸಿಗಳಿಗೆ ನೀರು ಪೂರೈಕೆಗೆ ಸಮಸ್ಯೆಯಾಗದಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್​ಎಸ್​ಬಿ) ಹತ್ತು ಹಲವು ವಿಶೇಷ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಮುಖ್ಯವಾಗಿ ಕೆರೆಗಳನ್ನು ತುಂಬಿಸುವುದರಲ್ಲಿ ಆಸಕ್ತಿ ತೋರಿದೆ. ಈಗಾಗಲೇ 37 ಕೆರೆಗಳನ್ನು ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಈ ವರ್ಷ ಇನ್ನೂ 19 ಕೆರೆಗಳನ್ನು ತುಂಬಿಸಲು ಯೋಜನೆ ರೂಪಿಸಿದೆ.
ಹಿಂದೆ ಸಾವಿರ ಕೆರೆಗಳ ನಗರ ಎಂಬ ಖ್ಯಾತಿಯಿಂದ ಕೆರೆಗಳಿಂದಲೇ ಪ್ರಸಿದ್ಧಿ ಪಡೆದಿದ್ದ ಬೆಂಗಳೂರಿನಲ್ಲಿ ಈ ಯೋಜನೆ ತೀರ ಅನಿವಾರ್ಯ ಎನಿಸಿದೆ. ನಗರದಲ್ಲಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಮಾಡಲು ಜಲಮಂಡಳಿ ದೂರದಷ್ಟಿಯನ್ನು ಇರಿಸಿದ್ದು, ಹಲವು ಮುನ್ನೆಚ್ಚರಿಕಾ ಕ್ರಮಗಳ ಜತೆಗೆ ಇಂತಹ ಯೋಜನೆಗಳು ಮಹತ್ವವನ್ನು ಪಡೆದಿದೆ. ನೀರಿನ ಸಂಗ್ರಹ, ಪೂರೈಕೆ ಮತ್ತು ಸಂರಕ್ಷಣೆ ಸೇರಿ ವಿವಿಧ ಮಟ್ಟಗಳಲ್ಲಿ ವಿಶೇಷ ಯೋಜನೆಗಳನ್ನು ಜಾರಿಗೆ ತಂದು ನಗರವಾಸಿಗಳಿಗೆ ನಿರಂತರ ನೀರು ಒದಗಿಸುವತ್ತ ಕಾರ್ಯನಿರ್ವಹಿಸುತ್ತಿದೆ.
ಏರಿಯೇಟರ್​ ಅಳವಡಿಕೆ: ನಗರ ವ್ಯಾಪ್ತಿಯಲ್ಲಿ 12 ಲಕ್ಷಕ್ಕೂ ಅಧಿಕ ಏರಿಯೇಟರ್​ಗಳನ್ನು ಈಗಾಗಲೇ ಅಳವಡಿಸಿದ್ದು, ಈ ಬಾರಿ ಬೇಸಿಗೆಯಲ್ಲಿ ನೀರಿನ ಸಂರಕ್ಷಣೆಗಾಗಿ 2 ಲಕ್ಷ ಏರಿಯೇಟರ್​ಗಳನ್ನು ಅಳವಡಿಸಲಿದೆ. 
ಆರ್​ಒ ಘಟಕಗಳ ಮೇಲ್ವಿಚಾರಣೆಗೆ ತಂಡ: ಬೇಸಿಗೆ ಹಿನ್ನೆಲೆಯಲ್ಲಿ ನಗರದಲ್ಲಿನ ಎಲ್ಲ ವಲಯಗಳಲ್ಲಿ ಒಟ್ಟು 1,137 ಸಿಂಟೆಕ್ಸ್​ ಟ್ಯಾಂಕ್​ಗಳ ಅಗತ್ಯವನ್ನು ಮಂಡಳಿ ಗುರುತಿಸಿದ್ದು, ಈಗಾಗಲೇ ಮಂಡಳಿಯ ಬಳಿ 1,500 ಸಿಂಟೆಕ್ಸ್​ ಟ್ಯಾಂಕ್​ಗಳು ಲಭ್ಯವಿರುವುದರಿಂದ ಹೆಚ್ಚುವರಿ ಸಂಗ್ರಹ ಸಾಮರ್ಥ್ಯ ಇದೆ. ನಗರದಲ್ಲಿನ ಆರ್​ಒ ಘಟಕಗಳನ್ನೂ ಸಂಪೂರ್ಣವಾಗಿ ಪರಿಶೀಲಿಸಲಾಗಿದ್ದು, ಅವು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಘಟಕಗಳ ಕಾರ್ಯಕ್ಷಮತೆಯನ್ನು 24 ಗಂಟೆಗಳ ಕಾಲ ಮೇಲ್ವಿಚಾರಣೆ ಮಾಡಲು ವಿಶೇಷ ತಂಡವನ್ನೂ ರಚಿಸಲಾಗಿದೆ.
ಜಲ ಕೊರತೆ ಉಂಟಾಗುವ ಪ್ರದೇಶಗಳಿಗೆ ನೀರು ಪೂರೈಸಲು ಒಟ್ಟು 182 ಟ್ಯಾಂಕರ್​ಗಳ ಅಗತ್ಯವಿದೆ ಎಂದು ಮಂಡಳಿ ಅಂದಾಜಿಸಿದೆ. ಈಗಾಗಲೇ ಮಂಡಳಿಯ ಬಳಿ 115 ಟ್ಯಾಂಕರ್​ಗಳು (ಹಳೆಯ 55 ಹಾಗೂ ಹೊಸದಾಗಿ ಖರೀದಿಸಿದ 60) ಲಭ್ಯವಿದ್ದು, ಹೆಚ್ಚುವರಿಯಾಗಿ 67 ಟ್ಯಾಂಕರ್​ಗಳನ್ನು ಖರೀದಿಸುವ ಯೋಜನೆ ರೂಪಿಸಲಾಗಿದೆ.
ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆಗಳಿಗೆ ಸರಿಯಾಗಿ ಉತ್ತರಕೊಡುವ ನಿಟ್ಟಿನಲ್ಲಿ ಪತ್ಯಾಸ್ತ್ರಗಳನ್ನು ಜಲಮಂಡಳಿ ಸಿದ್ಧಪಡಿಸಿಕೊಂಡಿದೆ. ಈ ಬೇಸಿಗೆ ಮಾತ್ರವಲ್ಲ ಮುಂದಿನ ವರ್ಷಗಳಲ್ಲಿ ಎಂದಿಗೂ ನೀರಿನ ಕೊರತೆಯಾಗದಿರಲು ಕೆರೆ ತುಂಬಿಸುವಂತಹ ದೀರ್ಕಾಲದ ಪರಿಹಾರಗಳನ್ನು ಕಂಡುಕೊಂಡಿರುವುದು ಗಮನಾರ್ಹವಾಗಿದೆ.
ತಂತ್ರಜ್ಞಾನ ಬಳಕೆ
ನಗರದಲ್ಲಿ ಇರುವ 15,565 ಬೋರ್​ವೆಲ್​ಗಳನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದೆ. ಇದರಲ್ಲಿ ಸುಮಾರು 3,000 ಬೋರ್​ವೆಲ್​ಗಳಿಗೆ ಸೆನ್ಸರ್​ ಹಾಗೂ ಐಒಟಿ ಸಾಧನಗಳನ್ನು ಅಳವಡಿಸಲಾಗಿದ್ದು, ನೀರಿನ ಅತಿಯಾದ ಬಳಕೆ ಮೇಲೆ ್ನು ನಿಗಾ ವಹಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಮೊಬೈಲ್​ ಅಪ್ಲಿಕೇಶನ್​ ಮೂಲಕ ಮೇಲ್ವಿಚಾರಣೆ ಮಾಡುವ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಮಂಡಳಿ ತಿಳಿಸಿದೆ.
ಕಾವೇರಿ ಕೇಂದ್ರಗಳಲ್ಲಿ ದುರಸ್ತಿ ಕಾರ್ಯ ಪೂರ್ಣ
ಕಾವೇರಿ ನೀರು ಪೂರೈಕೆ ಕೇಂದ್ರಗಳಲ್ಲಿ ಸೋರಿಕೆ ಪತ್ತೆಹಚ್ಚುವುದು ಹಾಗೂ ದುರಸ್ತಿ ಕಾರ್ಯಗಳನ್ನು ಕಳೆದ 2&3 ತಿಂಗಳಲ್ಲಿ ಪೂರ್ಣಗೊಳಿಸಲಾಗಿದೆ. ಬೇಸಿಗೆ ಸಮಯದಲ್ಲಿ ಅಡಚಣೆ ಉಂಟಾಗದಂತೆ ಈ ಕೆಲಸಗಳನ್ನು ಮುಂಚಿತವಾಗಿ ಮುಗಿಸಲಾಗಿದೆ. ಬೇಸಿಗೆಯಲ್ಲಿ ನಿರಂತರ ವಿದ್ಯುತ್​ ಪೂರೈಕೆ ಒದಗಿಸುವಂತೆ ಕೆಪಿಟಿಸಿಎಲ್​ಗೆ ಮನವಿ ಮಾಡಲಾಗಿದೆ. ಅದೇ ವೇಳೆ ಕೆಆರ್​ಎಸ್​ ಹಾಗೂ ಕಬಿನಿ ಜಲಾಶಯಗಳಲ್ಲಿ ಅಗತ್ಯ ಪ್ರಮಾಣದ ನೀರನ್ನು ಸಂಗ್ರಹಿಸಿಡಲು ಸಂಬಂಧಿತ ಅಧಿಕಾರಿಗಳಿಗೆ ಮಂಡಳಿ ಮನವಿ ಸಲ್ಲಿಸಿದೆ.

ಕುಡಿಯುವ ಉದ್ದೇಶವಲ್ಲದೆ ಕಾವೇರಿ ನೀರನ್ನು ಬಳಸಿದರೆ ದಂಡ ವಿಧಿಸುವ ಕ್ರಮ ಜಾರಿಯಲ್ಲಿರಲಿದೆ. ಜತೆಗೆ ಶುದ್ಧೀಕರಿಸಿದ ನೀರನ್ನು ವಾಣಿಜ್ಯ, ನಿಮಾರ್ಣ ಹಾಗೂ ಕೈಗಾರಿಕಾ ಉದ್ದೇಶಗಳಿಗೆ ಮರುಬಳಕೆ ಮಾಡಲು ಉತ್ತೇಜನ ನೀಡಲಾಗಿದೆ. ನೀರಿನ ಕೊರತೆ ಉಂಟಾಗುವ ಪ್ರದೇಶಗಳನ್ನು ನೋಡಿಕೊಳ್ಳಲು ವಿಶೇಷ ಕಾರ್ಯಪಡೆ ರಚಿಸಲಾಗಿದ್ದು, "ಅಮೃತ ಮಿತ್ರ' ಯೋಜನೆಯಡಿ 9 ಸಾವಿರಕ್ಕೂ ಹೆಚ್ಚು ಸ್ವಯಂಸೇವಕರು ನೀರು ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಬೇಸಿಗೆ ಕಾಲದಲ್ಲಿಯೂ ಬೆಂಗಳೂರಿಗೆ ನಿರಂತರ ನೀರು ಪೂರೈಸುವ ನಿಟ್ಟಿನಲ್ಲಿ ಜಲಮಂಡಳಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net