ಕೆಐಎ ಮಾರ್ಗದ ಕೊನೆಯ ಟ್ರಾಫಿಕ್​ ಸಿಗ್ನಲ್​ಗೆ ಮುಕ್ತಿ

ಜಿಬಿಎ
ಜಿಬಿಎ
Published on

ಪ್ರಮುಖ ಮುಖ್ಯಾಂಶಗಳು

  • ಸಾದಹಳ್ಳಿ ಅಂಡರ್​ಪಾಸ್​ ಕಾಮಗಾರಿಗೆ ಮುಂದಿನ ವಾರ ಚಾಲನೆ
  • 2027ರ ಏರೋ ಇಂಡಿಯಾಗೆ ಮುನ್ನ ಪೂರ್ಣಗೊಳಿಸುವ ಗುರಿ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ತಲುಪುವ ವಾಹನ ಸವಾರರ ಬಹುಕಾಲದ ನಿರೀಕ್ಷೆಗೆ ಕೊನೆಗೂ ತೆರೆ ಬೀಳುತ್ತಿದೆ. ಹೆಬ್ಬಾಳ&ವಿಮಾನ ನಿಲ್ದಾಣ ಕಾರಿಡಾರ್​ನಲ್ಲಿದ್ದ ಏಕೈಕ ಟ್ರಾಫಿಕ್​ ಸಿಗ್ನಲ್​ ಆಗಿರುವ ಸಾದಹಳ್ಳಿ ಜಂಕ್ಷನ್​ಗೂ ವಿದಾಯ ಹೇಳುವ ದಿನಗಳು ಸಮೀಪಿಸಿದ್ದು, ಇಲ್ಲಿ ನಿಮಾರ್ಣಗೊಳ್ಳಲಿರುವ 6 ಪಥಗಳ ಅಂಡರ್​ಪಾಸ್​ ಕಾಮಗಾರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್​ಎಚ್​ಎಐ) ಮುಂದಿನ ವಾರ ಚಾಲನೆ ನೀಡಲಿದೆ.
35 ಕೋಟಿ ರೂ. ವೆಚ್ಚದಲ್ಲಿ 700 ಮೀ. ಉದ್ದದ ಅಂಡರ್​ಪಾಸ್​ ನಿಮಾರ್ಣವಾಗಲಿದ್ದು, ಯೋಜನೆ ಪೂರ್ಣಗೊಂಡ ಬಳಿಕ ಹೆಬ್ಬಾಳದಿಂದ ವಿಮಾನ ನಿಲ್ದಾಣದವರೆಗೆ ಸಂಪೂರ್ಣ ಸಿಗ್ನಲ್​ಮುಕ್ತ ಸಂಚಾರಕ್ಕೆ ಅವಕಾಶ ದೊರೆಯಲಿದೆ. ದಶಕಕ್ಕೂ ಹೆಚ್ಚು ಕಾಲ ನನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಇದೀಗ ಅಂತಿಮವಾಗಿ ಜೀವ ಬಂದಂತಾಗಿದೆ. ಕಾಮಗಾರಿಗೆ ಅನುಕೂಲವಾಗುವಂತೆ ಬೆಂಗಳೂರು ಸಂಚಾರಿ ಪೊಲೀಸರು ಎನ್​ಎಚ್​ಎಐಗೆ ಅನುಮತಿ ನೀಡಿದ್ದು, ಮುಂದಿನ 15 ತಿಂಗಳು ಪ್ರತಿದಿನ ರಾತ್ರಿ 11ರಿಂದ ಬೆಳಗ್ಗೆ 5 ಗಂಟೆಯವರೆಗೆ ಕಾಮಗಾರಿ ನಡೆಸಲು ಅವಕಾಶ ಕಲ್ಪಿಸಲಾಗಿದೆ.
ಮೊದಲ ಹಂತದಲ್ಲಿ ಬ್ಯಾರಿಕೇಡ್​ ಅಳವಡಿಕೆ, ಸಂಚಾರ ಮಾರ್ಗ ಬದಲಾವಣೆ ಹಾಗೂ ಸರ್ವೀಸ್​ ರಸ್ತೆ ಅಗಲೀಕರಣ ಕೈಗೊಳ್ಳಲಾಗುತ್ತದೆ. ನಿಮಾರ್ಣದ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಎರಡೂ ಬದಿಯ ಎರಡು ಪಥಗಳ ಸರ್ವಿಸ್​ ರಸ್ತೆಗಳನ್ನು ನಾಲ್ಕು ಪಥಗಳಿಗೆ ವಿಸ್ತರಿಸುವ ಕಾರ್ಯವೂ ನಡೆಯಲಿದೆ.
ಮುಂಗಾರು ಹಿನ್ನೆಲೆಯಲ್ಲಿ ಜುಲೈ ಹಾಗೂ ಆಗಸ್ಟ್​ ತಿಂಗಳಲ್ಲಿ ಪೂರ್ವಸಿದ್ಧತಾ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದ್ದು, ಸೆಪ್ಟೆಂಬರ್​ನಿಂದ ಅಂಡರ್​ಪಾಸ್​ಗಾಗಿ ಭೂಮಿ ಅಗೆಯುವ ಪ್ರಮುಖ ಹಂತ ಆರಂಭವಾಗಲಿದೆ.
ಆರಂಭದಲ್ಲಿ ಇಲ್ಲಿ ಫ್ಲೈಓವರ್​ ನಿರ್ಮಿಸುವ ಪ್ರಸ್ತಾವವಿದ್ದರೂ, ವಾಹನ ಸಂಚಾರ ಸುಗಮಗೊಳಿಸುವುದು ಹಾಗೂ ಭೂಸ್ವಾಧಿನದ ಅಗತ್ಯ ಕಡಿಮೆ ಮಾಡುವ ಉದ್ದೇಶದಿಂದ ಯೋಜನೆಯನ್ನು ಅಂಡರ್​ಪಾಸ್​ಗೆ ಮರುವಿನ್ಯಾಸ ಮಾಡಲಾಯಿತು. ಸಾದಹಳ್ಳಿ ಹಾಗೂ ಸುತ್ತಮುತ್ತ ರಿಯಲ್​ ಎಸ್ಟೇಟ್​ ಅಭಿವೃದ್ಧಿ ವೇಗ ಪಡೆದಿರುವ ಹಿನ್ನೆಲೆಯಲ್ಲಿ ಈ ಯೋಜನೆ ಭವಿಷ್ಯದ ಸಂಚಾರ ನಿರ್ವಹಣೆಗೆ ಮಹತ್ವದ ಹೆಜ್ಜೆಯಾಗಿದೆ.
ಏರೋ ಇಂಡಿಯಾ ಮುನ್ನ ಪೂರ್ಣ
ಯೋಜನೆಯ ಗುತ್ತಿಗೆಯನ್ನು ವಿದ್ಯಾ ಇನ್​ಫ್ರಾಬಿಲ್ಟ್​ ಪ್ರೈ. ಲಿ. ಪಡೆದುಕೊಂಡಿದ್ದು, "ಕಟ್​ ಆ್ಯಂಡ್​ ಕವರ್​' ತಂತ್ರಜ್ಞಾನದಲ್ಲಿ ಅಂಡರ್​ಪಾಸ್​ ನಿಮಾರ್ಣವಾಗಲಿದೆ. 2027ರ ಫೆಬ್ರವರಿಯಲ್ಲಿ ನಡೆಯಲಿರುವ ಏರೋ ಇಂಡಿಯಾ ಪ್ರದರ್ಶನಕ್ಕೂ ಮುನ್ನ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸುವ ಗುರಿ ಹೊಂದಿರುವುದಾಗಿ ಎನ್​ಎಚ್​ಎಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net