ಗ್ರಾಮ ಪಂಚಾಯತಿಗಳ (Gram Panchayat )ಸ್ವಂತ ಸಂಪನ್ಮೂಲ ಹೆಚ್ಚಿಸುವ ಉದ್ದೇಶದೊಂದಿಗೆ ಅಕ್ರಮ ಲೇಔಟ್‌ಗಳ ನಿವೇಶನಗಳಿಗೆ ಇ-ಖಾತಾ(E-Swathu) ನೀಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಅಭಿವೃದ್ಧಿಪಡಿಸಿರುವ ಇ-ಸ್ವತ್ತು 2.0 ತಂತ್ರಾಂಶಕ್ಕೆ ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಚಾಲನೆ ನೀಡಿದರು.
ಗ್ರಾಮಠಾಣಗಳ ಹೊರಗೆ ಭೂಪರಿವರ್ತನೆ ಮಾಡಿಸದೆ, ಮನೆ ನಿರ್ಮಿಸಿಕೊಂಡು ನೆಲೆಸಿರುವ ಜನರಿಗೆ ಕುಡಿಯುವ ನೀರು, ಬೀದಿ ದೀಪ, ರಸ್ತೆ, ಚರಂಡಿ ಇತ್ಯಾದಿ ನಾಗರಿಕ ಸೌಲಭ್ಯಗಳನ್ನು ನೀಡಲಾಗಿದೆ. ಇದರಿಂದಾಗಿ ಗ್ರಾಮ ಪಂಚಾಯತಿಗಳಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ.
ಈ ಕಾರಣದಿಂದಾಗಿ ರಾಜ್ಯ ಸರ್ಕಾರ ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್‌ರಾಜ್ ಅಧಿನಿಯಮ-1993 ಪ್ರಕರಣ 199ಕ್ಕೆ ತಿದ್ದುಪಡಿ ತಂದು ಪ್ರಕರಣ 199ಬಿ ಮತ್ತು 199ಸಿ ಸೇರಿಸಿ ಏ.7ರಂದು ಅಧಿಸೂಚನೆ ಹೊರಡಿಸಿದೆ. ಇದರನ್ವಯ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಶುಲ್ಕ) ನಿಯಮ-2025ನ್ನು ರೂಪಿಸಿದೆ.
ಹೊಸ ಆಸ್ತಿಗಳ ತೆರಿಗೆ ವ್ಯಾಪ್ತಿಗೆ ಕ್ರಮಗಳು, ತೆರಿಗೆ ನಿರ್ಧರಣಾ ವಿಧಾನಗಳ ಬಗ್ಗೆ ನಿಯಮಗಳಲ್ಲಿ ವಿವರವಾಗಿ ತಿಳಿಸಲಾಗಿದೆ. ಪಂಚಾಯತಿ ವ್ಯಾಪ್ತಿಯಲ್ಲಿ ಹೊಸ ಬಡಾವಣೆಗಳ ಅನುಮೋದನೆಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆಯೂ ಉಲ್ಲೇಖಿಸಲಾಗಿದೆ. ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಅಧಿಕಾರಿಗಳ ಜವಾಬ್ದಾರಿ, ಕಾಲಾವಧಿ, ಅಪೀಲು ಹೀಗೆ ಪ್ರತಿಯೊಂದು ವಿಷಯದಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದ ಇಲ್ಲದಂತೆ ವಿವರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನೂತನ ನಿಯಮಗಳ ಬಗ್ಗೆ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ, ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಪೂರಕವಾಗಿ ಪಂಚತಂತ್ರ ತಂತ್ರಾಂಶದಲ್ಲಿ ಅಗತ್ಯ ಮಾರ್ಪಾಡು ಮಾಡಲಾಗಿದೆ. ಗ್ರಾಮೀಣ ಭಾಗದ ಜನರು ತಮ್ಮ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸುಲಭವಾಗಿ ಮತ್ತು ಡಿಜಿಟಲ್ ರೂಪದ ಇ-ಸ್ವತ್ತು ಪಡೆಯಲು ಸುವರ್ಣಾವಕಾಶ ಕಲ್ಪಿಸಿದೆ.
ಗ್ರಾಮ ಪಂಚಾಯತಿ ವ್ಯಾಪ್ತಿಯ ಜನರ ಆಸ್ತಿಗಳಿಗೆ ತಂತ್ರಾಂಶದಲ್ಲಿ ಡಿಜಿಟಲ್ ಇ-ಸ್ವತ್ತು ಪ್ರಮಾಣ ಪತ್ರ(ನಮೂನೆ-11ಎ ಮತ್ತು ನಮೂನೆ 11ಬಿ) ವಿತರಣೆ ಆರಂಭಿಸಲಾಗುತ್ತಿದೆ. ಆಸ್ತಿ ಸಂಬಂಧಿತ ಸೇವೆಗಳನ್ನು ಪಾರದರ್ಶಕವಾಗಿ ಹಾಗೂ ತ್ವರಿತವಾಗಿ ಒದಗಿಸಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಲ್ ಸೆಂಟರ್ ಸೇವೆ ಲಭ್ಯ
ತಂತ್ರಾಂಶದ ಮೂಲಕ ಇ-ಸ್ವತ್ತು ಪಡೆಯಲು ಎದುರಾಗುವ ಎಲ್ಲಾ ಆಡಳಿತಾತ್ಮಕ ಮತ್ತು ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ನೀಡಲು ಇ-ಸ್ವತ್ತು ಸಹಾಯವಾಣಿ 94834 76000 ಸ್ಥಾಪಿಸಲಾಗಿದೆ.
ಯಶವಂತಪುರದಲ್ಲಿ ಸ್ಥಾಪಿತಗೊಂಡಿರುವ ಕಾಲ್ಸೆಂಟರ್‌ನ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗೆ ನೀಡಲಾಗಿದೆ. ಇವರ ಸಹಾಯಕ್ಕಾಗಿ 34 ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು (ಪಿಡಿಒ) ನಿಯೋಜಿಸಲಾಗಿದೆ. ತಾಂತ್ರಿಕ ಸಮಸ್ಯೆ ಪರಿಹರಿಸಲು ಮತ್ತು ಇ-ಸ್ವತು ದಾಖಲೆಗಳನ್ನು ನೀಡಲು ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ಮಾರ್ಗದರ್ಶನ ನೀಡಲಿದ್ದಾರೆ.
ಇಲ್ಲಿ ನಿಮ್ಮ ಸ್ವತ್ತಿನ ಕರಡು ಲಭ್ಯ
ಗ್ರಾಮೀಣ ಆಸ್ತಿ ಮಾಲೀಕರು https://eSwathu.karnataka.gov.in ಗೆ ಭೇಟಿ ನೀಡುವ ಮೂಲಕ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು. ಅಲ್ಲಿ ತಮ್ಮಕರಡು ಇ-ಖಾತಾವನ್ನು ವೀಕ್ಷಿಸಬಹುದು. ಆಸ್ತಿ ಮಾಲೀಕರ ಆಧಾರ್ ಸಂಖ್ಯೆ, ಮಾರಾಟ ಪತ್ರ ಸಂಖ್ಯೆ (ಕಾವೇರಿ 2.0ರ ವ್ಯವಸ್ಥೆಯಿಂದ ಸ್ವಯಂ-ಪಡೆಯಲಾಗಿದೆ), ಬೆಸ್ಕಾಂ ಖಾತೆ ಐಡಿ (ಖಾಲಿ ಪ್ಲಾಟ್‌ಗಳಿಗೆ ಐಚ್ಛಿಕ) ಮತ್ತು ಆಸ್ತಿಯ ಛಾಯಾಚಿತ್ರ ಸೇರಿದಂತೆ ಮೂಲ ವಿವರಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬೇಕು. ಈ ಎಲ್ಲ ಅಂಶಗಳು ಹೊಂದಾಣಿಕೆ ಆದರೆ ಅಂತಿಮವಾಗಿ ಇ-ಖಾತಾವನ್ನು ತಕ್ಷಣವೇ ನೀಡಲಾಗುತ್ತದೆ. ವ್ಯತ್ಯಾಸಗಳಿದ್ದರೆ ಪರಿಶೀಲನೆಗಾಗಿ ಸ್ಥಳೀಯ ಗ್ರಾಮ ಪಂಚಾಯತ್‌ಗೆ ಕಳುಹಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
15 ದಿನದಲ್ಲಿ ಸಿಗುತ್ತೆ ಖಾತಾ
ಅರ್ಜಿ ಸ್ವೀಕರಿಸಿದ ಬಳಿಕ ಗ್ರಾಮ ಪಂಚಾಯಿತಿ ಗ್ರೇಡ್-1/ಗ್ರೇಡ್-2 ಕಾರ್ಯದರ್ಶಿಗಳು ಸ್ಥಳ ಪರಿಶೀಲನೆ ನಡೆಸಿ 4 ಕರ್ತವ್ಯದ ದಿನಗಳಲ್ಲಿ ಪೂರ್ಣ ದಾಖಲೆ ಪರಿಶೀಲಿಸಬೇಕು. ತಂತ್ರಾಂಶದಲ್ಲಿ ಮಾಹಿತಿಯನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸಲ್ಲಿಸಬೇಕು. ಎರಡು ದಿನಗಳಲ್ಲಿ ಪಂಚಾಯಿತಿ ಅಧ್ಯಕ್ಷರ ಅನುಮೋದನೆಗೆ ಸಲ್ಲಿಸಿ ಅವರಿಂದ ಪ್ರಸ್ತಾವನೆ ಸ್ವೀಕರಿಸಿದ 4 ದಿನದ ಒಳಗಾಗಿ ತೀರ್ಮಾನಿಸಬೇಕು, ನಿಗದಿತ ದಾಖಲೆ ಸಲ್ಲಿಸಿದ್ದರೆ 15 ದಿನದ ಒಳಗೆ ಡಿಜಿಟಲ್ ಸಹಿ ಮಾಡಿ ಇ-ಖಾತಾ ವಿತರಿಸಬೇಕೆಂದು ಕಾನೂನು ರೂಪಿಸಲಾಗಿದೆ.
ಇ-ಖಾತೆಗೆ ಬೇಕಿರುವ ದಾಖಲೆ ಪತ್ರ
*ಕಟ್ಟಡ ನಿಯಮ ಉಲ್ಲಂಸಿ ಕೃಷಿ ಜಮೀನಿನಲ್ಲಿ ಅಥವಾ ಭೂ ಪರಿವರ್ತಿತ ಭೂಮಿಯಲ್ಲಿನ ಕಟ್ಟಡಗಳಿಗೆ ಇ-ಖಾತಾ ಪಡೆಯಲು ನೋಂದಾಯಿತ ಪ್ರಮಾಣ ಪತ್ರ/ತೆರಿಗೆ ಪಾವತಿ ರಶೀದಿ (2025ರ ಏಪ್ರಿಲ್ 7 ಪೂರ್ವದ್ದು), ವಿದ್ಯುತ್ ಬಿಲ್ (2025ರ ಏ.7 ಪೂರ್ವದ್ದು), ಪಹಣಿ, ಋಣಭಾರ ಪ್ರಮಾಣ ಪತ್ರ(ಇಸಿ) ಕಡ್ಡಾಯವಾಗಿದೆ. ಭೂ ಪರಿವರ್ತನೆ ಆದೇಶ ಐಚ್ಛಿಕ
*ಪರಿವರ್ತನೆ ಇಲ್ಲದ/ಕೃಷಿ ಜಮೀನಿನ ನಿವೇಶನಗಳಿಗೆ ನೋಂದಾಯಿತ ಪ್ರಮಾಣ ಪತ್ರ, ಪಹಣಿ, ಋಣಭಾರ ಪ್ರಮಾಣ ಪತ್ರ(ಇಸಿ) ಕಡ್ಡಾಯ. ಭೂ ಪರಿವರ್ತನೆ ಆದೇಶ ಐಚ್ಛಿಕ
*ಸಕ್ಷಮ ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆ ಪಡೆದು ಮಾದರಿ ಕಟ್ಟಡ ನಿಯಮ ಉಲ್ಲಂಘನೆ ಮಾಡಿರುವ ಆಸ್ತಿಗೆ ನೋಂದಾಯಿತ ಪ್ರಮಾಣ ಪತ್ರ, ಭೂ ಪರಿವರ್ತನೆ ಆದೇಶ, ಲೇಔಟ್ ವಿನ್ಯಾಸ, ನಿವೇಶನ ಬಿಡುಗಡೆ ಆದೇಶ, ಋಣಭಾರ ಪ್ರಮಾಣ ಪತ್ರ(ಇಸಿ) ಕಡ್ಡಾಯ
*ಲೇಔಟ್ ಪ್ಲ್ಯಾನ್ ಇಲ್ಲದೆ ಮೂಲಭೂತ ಸೌಕರ್ಯ ಒದಗಿಸಿ, ಪಾರ್ಕ್, ಸಿಎ ಸೈಟ್, ರಸ್ತೆಯನ್ನು ಗ್ರಾಮ ಪಂಚಾಯಿತಿಗೆ ಪರಿತ್ಯಾಜನಾ ಪತ್ರ ಮೂಲಕ ವರ್ಗಾಯಿಸಿರುವ ಕಂದಾಯ ಭೂಮಿ ಸೈಟ್‌ಗಳಿಗೆ ಪಹಣಿ, ನೋಂದಾಯಿತ ಪರಿತ್ಯಾಜನ ಪತ್ರ, ಭೂ ಪರಿವರ್ತಿತ ಆದೇಶ, ಇಸಿ ಕಡ್ಡಾಯ
*ಭೂ ಪರಿವರ್ತಿತ/ಭಾವಿತ ಭೂ ಪರಿವರ್ತಿತ ಜಮೀನುಗಳು(ಏಕ ನಿವೇಶನ/ಉಂಡೆ ಖಾತಾ) ಭೂ ಪರಿವರ್ತನೆ ಆದೇಶ/ಮಂಜೂರಾತಿ ಆದೇಶ ಕಡ್ಡಾಯ