ರೈಲು ಬಂತು... ಹಳಿ ಇಲ್ಲ!| metro

ಮೆಟ್ರೋ
ಮೆಟ್ರೋ
Published on

ಪ್ರಮುಖ ಮುಖ್ಯಾಂಶಗಳು

  • ನೀಲಿ ಮಾರ್ಗಕ್ಕೆ ಮತ್ತೆ ವಿಳಂಬದ ಭೀತಿ
  • ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆ ಪ್ರಯಾಣಿಕರ ನಿರೀಕ್ಷೆಗೆ ಮತ್ತೊಂದು ಹೊಡೆತ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಮ್ಮ ಮೆಟ್ರೋದ ಬಹುನಿರೀಕ್ಷಿತ ನೀಲಿ ಮಾರ್ಗಕ್ಕೆ ಮೊದಲ ಚಾಲಕರಹಿತ ರೈಲು ಸೆಟ್​ ಆಗಮಿಸಿರುವುದು ನಗರದ ಸಾರ್ವಜನಿಕರಲ್ಲಿ ಹೊಸ ಆಶಾಭಾವನೆ ಮೂಡಿಸಿದ್ದರೂ, ಕಾಮಗಾರಿ ಅಪೂರ್ಣವಾಗಿರುವುದು ಆ ನಿರೀಕ್ಷೆಗೆ ತಣ್ಣೀರು ಎರಚಿದೆ.
ಸಿಲ್ಕ್​ಬೋರ್ಡ್​ನಿಂದ ಕೆ.ಆರ್​.ಪುರಂವರೆಗಿನ ಮೊದಲ ಹಂತದ 2ಎ ಮಾರ್ಗದಲ್ಲಿ ಇನ್ನೂ ಪೂರ್ಣ ಪ್ರಮಾಣದ ಹಳಿ ಸಿದ್ಧವಾಗಿಲ್ಲದ ಕಾರಣ ಹೊಸ ರೈಲಿನ ಪರೀಕ್ಷಾ ಸಂಚಾರವೇ ಆರಂಭಿಸಲು ಸಾಧ್ಯವಾಗದ ಪರಿಸ್ಥಿತಿ ನಿಮಾರ್ಣವಾಗಿದೆ.
ಸಿಲ್ಕ್​ಬೋರ್ಡ್​ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ 58 ಕಿ.ಮೀ. ಉದ್ದದ ನೀಲಿ ಮಾರ್ಗ ಕಾಮಗಾರಿ ಹಲವು ವರ್ಷಗಳಿಂದ ಸಾಗುತ್ತಿದ್ದು, ಇನ್ನೂ ಸಂಪೂರ್ಣಗೊಳ್ಳಿಲ್ಲ. ಮೊದಲ ಹಂತದ 19.5 ಕಿ.ಮೀ. ಮಾರ್ಗದಲ್ಲಿ ಕೇವಲ ಶೇ.86ರಷ್ಟು ಕೆಲಸ ಮಾತ್ರ ಪೂರ್ಣಗೊಂಡಿದೆ. ಹೀಗಾಗಿ 2026ರ ಡಿಸೆಂಬರ್​ನಲ್ಲಿ ಉದ್ಘಾಟನೆ ಮಾಡುವ ಗುರಿ ಮತ್ತೊಮ್ಮೆ ಕೈತಪ್ಪುವ ಸಾಧ್ಯತೆ ಹೆಚ್ಚಾಗಿದೆ.
ನಗರದ ಅತ್ಯಂತ ದಟ್ಟ ಸಂಚಾರದ ಐಟಿ ಕಾರಿಡಾರ್​ಗಳಾದ ಹೊರವರ್ತುಲ ರಸ್ತೆ, ಮಾರತ್ತಹಳ್ಳಿ, ಮಹಾದೇವಪುರ, ಕೆ.ಆರ್​.ಪುರಂ ಹಾಗೂ ಎಚ್​ಎಸ್​ಆರ್​ ಭಾಗದ ಲಕ್ಷಾಂತರ ಜನರು ಈ ಮಾರ್ಗದ ಕಾರ್ಯಾಚರಣೆಯನ್ನು ಎದುರು ನೋಡುತ್ತಿದ್ದಾರೆ. ಆದರೆ ಬಾಕಿ ಉಳಿದಿರುವ ಸಿವಿಲ್​, ಟ್ರ್ಯಾಕ್​ ಹಾಗೂ ವ್ಯವಸ್ಥಾಪನಾ ಕಾಮಗಾರಿಗಳು ಪೂರ್ಣಗೊಳ್ಳಲು ಇನ್ನೂ ಹಲವು ತಿಂಗಳುಗಳು ಬೇಕಾಗುವ ಸಾಧ್ಯತೆ ಇದೆ.
ಪ್ರಯಾಣಿಕರಲ್ಲಿ ನಿರಾಸೆ
ರೈಲುಗಳ ತಪಾಸಣೆ, ಪ್ರಾಯೋಗಿಕ ಸಂಚಾರ ಹಾಗೂ ಸುರಕ್ಷತಾ ಪರೀಕ್ಷೆಗಳಿಗೆ ಕೂಡ ಸಾಕಷ್ಟು ಸಮಯದ ಅಗತ್ಯವಿದೆ. 13 ನಿಲ್ದಾಣಗಳ ನಿಮಾರ್ಣ ಮತ್ತು ಪ್ರಮುಖ ಗರ್ಡರ್​ ಅಳವಡಿಕೆ ಪೂರ್ಣಗೊಂಡಿದ್ದರೂ ಅಂತಿಮ ಹಂತದ ಕೆಲಸಗಳು ಬಾಕಿಯಿರುವುದರಿಂದ ನೀಲಿ ಮಾರ್ಗವು 2027ರ ಮೊದಲಾರ್ಧದಲ್ಲಿ ಮಾತ್ರ ಸಾರ್ವಜನಿಕರಿಗೆ ಮುಕ್ತವಾಗುವ ಸಾಧ್ಯತೆ ಕಾಣಿಸುತ್ತಿದೆ. ಬೆಂಗಳೂರಿನ ಸಂಚಾರ ಸಿಕ್ಕಿನ ಸಮಸ್ಯೆಗೆ ಪರಿಹಾರವೆಂದು ಪರಿಗಣಿಸಲಾದ ಈ ಮಹತ್ವಾಕಾಂಕ್ಷಿ ಯೋಜನೆ ಮತ್ತೊಮ್ಮೆ ವಿಳಂಬದ ಸುಳಿವು ನೀಡಿರುವುದು ಪ್ರಯಾಣಿಕರಲ್ಲಿ ನಿರಾಸೆ ಮೂಡಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net