ಬೆಂಗಳೂರು: ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಅಂಗವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) 5 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಭಾನುವಾರ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಕಾರ್ಯಕ್ರಮ ಪ್ರಾರಂಭವಾಗಿದ್ದು, 2ನೇ ದಿನಕ್ಕೆ ಒಟ್ಟು ಶೇ. 99.4 ಲಸಿಕೆ ಹಾಕಲಾಗಿದೆ.
ಜಿಬಿಎ ವ್ಯಾಪ್ತಿಯಲ್ಲಿ ಒಟ್ಟು ಲಸಿಕೆ ನೀಡಬೇಕಿದ್ದ ಮಕ್ಕಳ ಸಂಖ್ಯೆ- 11,47,872 ಇದ್ದು, ಅದರಲ್ಲಿ 11,40,585 ಮಕ್ಕಳಿಗೆ ಪೋಲಿಯೋ ಹನಿ ನೀಡಲಾಯಿತು.
ನಗರದಾದ್ಯಂತ ಸ್ಥಾಪಿಸಲಾಗಿದ್ದ ಲಸಿಕಾ ಕೇಂದ್ರಗಳು, ಸಂಚಾರಿ ತಂಡಗಳು ಹಾಗೂ ಟ್ರಾನ್ಸಿಟ್ ಪಾಯಿಂಟ್ಗಳ ಮೂಲಕ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಾಯಿತು.
ಪಾಲಿಕೆಯ ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯಕಿಯ ಸಿಬ್ಬಂದಿ ಹಾಗೂ ಸ್ವಯಂಸೇವಕರ ಸಹಕಾರದಿಂದ ಕಾರ್ಯಕ್ರಮ ಜರುಗಿತು.
ನಗರ ಪಾಲಿಕೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಕಾರ್ಯಕ್ರಮವನ್ನು ಜು.1ರ ವರೆಗೆ ಆಯೋಜಿಸಿರುವುದರ ಜತೆಗೆ ನಗರ ಪಾಲಿಕೆಯ ಯಾವುದೇ ಮಗು ಪೋಲಿಯೋ ಹನಿಯಿಂದ ವಂಚಿತವಾಗದಂತೆ ಕ್ರಮ ವಹಿಸುವ ಸಲುವಾಗಿ ಲಸಿಕಾ ಕೇಂದ್ರಕ್ಕೆ ಭೇಟಿ ನೀಡದ ಮಕ್ಕಳನ್ನು ಗುರುತಿಸಲು ಆರೋಗ್ಯ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಲಿದ್ದಾರೆ.