ಪೊಲೀಸ್​ ಠಾಣೆಗಳಲ್ಲಿರುವ 11,341 ವಾಹನಗಳ ಸ್ಥಳಾಂತರ

 ಜಯನಗರ ಪೊಲೀಸ್​ ಠಾಣೆಯಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಪಟ್ಟು ವಶಪಡಿಸಿಕೊಂಡಿರುವ ವಾಹನಗಳ ಸ್ಥಳಾಂತರಕ್ಕೆ ಸಚಿವ ಕೃಷ್ಣ ಬೈರೇಗೌಡ ಚಾಲನೆ ನೀಡಿದರು. ಶಾಸಕ ಸಿ.ಕೆ. ರಾಮಮೂರ್ತಿ, ಜಿಬಿಎ ದಣ ಪಾಲಿಕೆ ಆಯುಕ್ತ ಕೆ.ಎನ್​. ರಮೇಶ್​,  ನಗರ ಪೊಲೀಸ್​ ಆಯುಕ್ತ ಸೀಮಂತ್​ ಕುಮಾರ್​ ಸಿಂಗ್​, ಸಂಚಾರ ವಿಭಾಗದ ಜಂಟಿ ಪೊಲೀಸ್​ ಆಯುಕ್ತ ಕಾರ್ತಿಕ್​ ರೆಡ್ಡಿ ಇತರರು ಇದ್ದರು.
ಜಯನಗರ ಪೊಲೀಸ್​ ಠಾಣೆಯಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಪಟ್ಟು ವಶಪಡಿಸಿಕೊಂಡಿರುವ ವಾಹನಗಳ ಸ್ಥಳಾಂತರಕ್ಕೆ ಸಚಿವ ಕೃಷ್ಣ ಬೈರೇಗೌಡ ಚಾಲನೆ ನೀಡಿದರು. ಶಾಸಕ ಸಿ.ಕೆ. ರಾಮಮೂರ್ತಿ, ಜಿಬಿಎ ದಣ ಪಾಲಿಕೆ ಆಯುಕ್ತ ಕೆ.ಎನ್​. ರಮೇಶ್​, ನಗರ ಪೊಲೀಸ್​ ಆಯುಕ್ತ ಸೀಮಂತ್​ ಕುಮಾರ್​ ಸಿಂಗ್​, ಸಂಚಾರ ವಿಭಾಗದ ಜಂಟಿ ಪೊಲೀಸ್​ ಆಯುಕ್ತ ಕಾರ್ತಿಕ್​ ರೆಡ್ಡಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಯನಗರದಲ್ಲಿ ಸಚಿವ ಕೃಷ್ಣ ಬೈರೇಗೌಡ ಚಾಲನೆ
  • ಹತ್ತಾರು ವರ್ಷಗಳಿಂದ ನಿಂತಿರುವ ಪ್ರಕರಣ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಗ್ರೇಟರ್​ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಎಲ್ಲ ಪೊಲೀಸ್​ ಠಾಣೆಗಳಲ್ಲಿ ಅಪಘಾತ ಇತ್ಯಾದಿ ಪ್ರಕರಣ ಸಂಬಂಧಪಟ್ಟ ಸುಮಾರು 11,341 ವಾಹನಗಳನ್ನು ನಗರದ ವಿವಿಧ ಭಾಗಗಳಲ್ಲಿ ಇರುವ ಜಾಗಕ್ಕೆ ಸ್ಥಳಾಂತರಿಸಲು ಗ್ರೇಟರ್​ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಜಯನಗರ ಪೊಲೀಸ್​ ಠಾಣೆಯಲ್ಲಿ ಬುಧವಾರ ಚಾಲನೆ ನೀಡಿದರು.
ಬಳಿಕ ವರದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಂಗಳೂರು ಜನರಿಗೆ ಕಾಡುವ ಹಳೇ ಸಮಸ್ಯೆಗಳಲ್ಲಿ ಇದೂ ಒಂದು. ಈಗಾಗಲೇ ಪಾದಚಾರಿ ಮಾರ್ಗ ತೆರವು, ಖಾಲಿ ನಿವೇಶನಗಳ ಸ್ವಚ್ಛತೆ ಹಾಗೂ ಇತರ ನಗರ ಸೌಂದರೀಕರಣ ಕೆಲಸಗಳು ನಡೆಯುತ್ತಿದೆ. ಪೊಲೀಸ್​ ಹಾಗೂ ಕಂದಾಯ ಇಲಾಖೆಗಳ ಸಹಕಾರದಿಂದ ನಗರದ ಪೊಲೀಸ್​ ಠಾಣೆಯ ಸುತ್ತಮುತ್ತ ಹತ್ತಾರು ವರ್ಷಗಳಿಂದ ನಿಂತಿರುವ ಪ್ರಕರಣಗಳ ಸಂಬಂಧ ಜಪ್ತಿ ಮಾಡಿರುವ ವಾಹನಗಳು, ಅಪಘಾತಕ್ಕೆ ಒಳಪಟ್ಟು ವಶಪಡಿಸಿಕೊಂಡಿರುವ ವಾಹನಗಳನ್ನು ಸ್ಥಳಾಂತರಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಪೊಲೀಸ್​ ಠಾಣೆಗಳಲ್ಲಿರುವ ವಾಹನಗಳು ತುಕ್ಕು ಹಿಡಿದಿದ್ದು, ರಾತ್ರಿ ವೇಳೆ ಬಿಡಿಭಾಗಗಳ ಕಳವು ಇತ್ಯಾದಿ ಅಕ್ರಮ ಚಟುವಟಿಕೆಗಳಿಗೂ ತುತ್ತಾಗುತ್ತಿದ್ದು, ಜನರು ರಸ್ತೆಗಳಲ್ಲಿ ಓಡಾಡಲು ಅಡ್ಡಿಯಾಗುತ್ತಿದೆ ಎಂದು ಜನಪ್ರತಿನಿಧಿಗಳ ಆದಿಯಾಗಿ ಹಲವರಿಂದ ದೂರು ಬರುತ್ತಿರುವ ಹಿನ್ನೆಲೆ ಕ್ರಮ ಕೈಗೊಳ್ಳಲಾಗುತ್ತಿದೆ. ರಾಗಿಗುಡ್ಡ ಸೇರಿ ಜಿಬಿಎ ವ್ಯಾಪ್ತಿಯ ವಿವಿಧ 7 ಭಾಗಗಳಲ್ಲಿ ಸ್ಥಳಾಂತರಕ್ಕೆ ಜಾಗ ನಿಗದಿ ಮಾಡಿದ್ದು, ಇದಕ್ಕಾಗಿ ಕಂದಾಯ ಇಲಾಖೆ 26 ಎಕರೆ ಜಾಗವನ್ನು ನೀಡಿದೆ ಎಂದು ತಿಳಿಸಿದರು.
ಕೋರ್ಟ್​ ಪ್ರಕರಣಗಳು ಇತ್ಯರ್ಥ ಆಗುವ ತನಕ ನಗರದ ಪೊಲೀಸ್​ ಠಾಣೆಗಳಲ್ಲಿ ಬಿದ್ದಿರುವ ವಾಹನಗಳನ್ನು ವಿವಿಧ ಜಾಗಗಳಿಗೆ ಸ್ಥಳಾಂತರಿಸಲಾಗುವುದು. ಅಲ್ಲದೆ ಎಲ್ಲ ಸ್ಥಳಗಳಿಗೆ ಬೇಲಿ ಹಾಕಿ ರಕ್ಷಣೆ ನೀಡುವುದರ ಜತೆಗೆ ಸಿಸಿ ಕ್ಯಾಮರಾ ಕಣ್ಗಾವಲಲ್ಲಿ ಇರಿಸಲಾಗುವುದು. ಪೊಲೀಸ್​ ಬಂದೋಬಸ್ತ್​ ಕೂಡ ನೀಡಲಾಗುವುದು ಎಂದು ಹೇಳಿದರು.
ಶಾಸಕ ಸಿ.ಕೆ. ರಾಮಮೂರ್ತಿ, ಜಿಬಿಎ ದಣ ಪಾಲಿಕೆ ಆಯುಕ್ತ ಕೆ.ಎನ್​. ರಮೇಶ್​ ಮತ್ತಿತರರು ಇದ್ದರು. ಸಂಚಾರ ವಿಭಾಗದ ಜಂಟಿ ಪೊಲೀಸ್​ ಆಯುಕ್ತ ಕಾರ್ತಿಕ್​ ರೆಡ್ಡಿ ಹಾಗೂ ಪಶ್ಚಿಮ ವಲಯದ ಜಂಟಿ ಪೊಲೀಸ್​ ಆಯುಕ್ತ ವಂಶಿ ಕೃಷ್ಣ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಜಯನಗರದಿಂದ 111 ವಾಹನಗಳ ತೆರವು
ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯ ಭಾಗವಾಗಿ ಜಯನಗರ ಪೊಲೀಸ್​ ಠಾಣೆ ಮುಂಭಾಗದಲ್ಲಿ ನಿಲುಗಡೆ ಮಾಡಲಾಗಿದ್ದ ಒಟ್ಟು 111 ಹಳೇ ವಾಹನಗಳನ್ನು ರಾಗಿಗುಡ್ಡಕ್ಕೆ ಸ್ಥಳಾಂತರಿಸಲಾಯಿತು.

ಜಯನಗರವನ್ನು ಏಷ್ಯಾದಲ್ಲೇ ಅತ್ಯಂತ ಶ್ರೇಷ್ಠ ಬಡಾವಣೆ ಎಂದು ಗುರುತಿಸಲಾಗುತ್ತಿದೆ. ಅಂಥದ್ದರಲ್ಲಿ ಇಲ್ಲಿನ ಪೊಲೀಸ್​ ಠಾಣೆಯ ಸುತ್ತಮುತ್ತ ಹಳೇ ವಾಹನಗಳು ಬಿದ್ದು, ಅವ್ಯವಸ್ಥಿತವಾಗಿ ಕಾಣುತ್ತಿರುವುದು ಅಸಹ್ಯ. ಇದು ಈಗಿನ ಸಮಸ್ಯೆಯಲ್ಲ, 2 ದಶಕಗಳಿಂದ ಇರುವಂತದ್ದು. ಇಲ್ಲಿನ ವಾತಾವರಣವನ್ನು ಬದಲಾಯಿಸುವ ಉದ್ದೇಶದಿಂದ ವಾಹನಗಳನ್ನು ತೆರವುಗೊಳಿಸುವ ಮೂಲಕ ಸ್ವಚ್ಛ ಮಾಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net