ಎರಡೇ ವರ್ಷಕ್ಕೆ ರಸ್ತೆ ಕಿತ್ತೊದ್ರೆ ಅದೇ ರೋಡು ಅದೇ ಬಿಲ್​....!

ಜಿಬಿಎ
ಜಿಬಿಎ
Published on

ಪ್ರಮುಖ ಮುಖ್ಯಾಂಶಗಳು

  • ಒಮ್ಮೆ ನಿರ್ಮಿಸಿದರೆ ಏಳೆಂಟು ವರ್ಷ ಬಾಳಿಕೆ ಬರಬೇಕಲ್ಲವೆ
  • ಜಿಬಿಎ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ತರಾಟೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮಾಡೋ ಕೆಲಸ ನೆಟ್ಟಗೆ ಮಾಡಿದ್ರೆ, ಒಮ್ಮೆ ನಿರ್ಮಿಸಿದ ರಸ್ತೆ ಕನಿಷ್ಠ ಎಂಟು ವರ್ಷ ಬಾಳಿಕೆ ಬರಬೇಕು. ಆಗ ಕೊಟ್ಟ ಹಣಕ್ಕೂ ಸಾರ್ಥಕ. ಎರಡೆರಡು ವರ್ಷಕ್ಕೆ ರಸ್ತೆ ಕಿತ್ತು ಹೋದ್ರೆ ಎಷ್ಟು ಹಣ ಕೊಟ್ಟರು ಸಾಲಲ್ಲ. ಅದೇ ರೋಡು ಅದೇ ಬಿಲ್ಲು. ನೀವು ರಸ್ತೆ ಮಾಡುವಾಗಲೇ ಕಳಪೆ ಕಾಮಗಾರಿ ಮಾಡೋದು, ಎರಡು ವರ್ಷಕ್ಕೆ ಮತ್ತೆ ರಿಪೇರಿ ಹೆಸರಲ್ಲಿ 50 ಕೋಟಿ ಕೇಳೋದು.....ಸಚಿವ ಕೃಷ್ಣ ಬೈರೇಗೌಡ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿ ಇದು. 
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 2026&-27ನೇ ಸಾಲಿನ ಮೊದಲನೇ ತೆಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಒಂದು ಸಲ ಮಾಡಿದ ರಸ್ತೆ ಕನಿಷ್ಠ ಏಳೆಂಟು ವರ್ಷ ಬಾಳಿಕೆ ಬರಬೇಕಲ್ವ? ರಸ್ತೆ ನಿರ್ಮಾಣಕ್ಕೆ ನಾವು ಬೇರೆ ರಾಜ್ಯಕ್ಕಿಂತ ಕಡಿಮೆ ಹಣ ನೀಡುತ್ತಿದ್ದೇವೆಯೇ? ಎಲ್ಲೋ ಒಂದು ಕಡೆ ವಾಹನ ಸಾಂದ್ರತೆ ಅಧಿಕವಾಗಿ ರಸ್ತೆ ಕಿತ್ತು ಹೋಗಿರಬಹುದು. ಆದರೆ, ಆ ಒಂದೇ ಪ್ರಕರಣವನ್ನು ಇಡೀ ರಾಜ್ಯಕ್ಕೆ ಅನ್ವಯಿಸಲಾಗುತ್ತಾ? ನಮಗೆ ನಿಮ್ಮಷ್ಚು ಬುದ್ದಿ ಇಲ್ಲ. ಆದರೆ, ಕಾಮನ್ಸ್​ ಸೆನ್ಸ್​ ಇದೆ. ನಿಮ್ಮ ಬುದ್ದಿಯನ್ನ ನಮ್ಮ ಮೇಲೆ ಪ್ರಯೋಗಿಸಬೇಡಿ ಎಂದು ಬೆಂಗಳೂರಿನ ಕಳಪೆ ರಸ್ತೆಗಳ ಬಗ್ಗೆ ಅಧಿಕಾರಿಗಳ ವಿರುದ್ಧ ಕೃಷ್ಣ ಬೈರೇಗೌಡ ಕಿಡಿಕಾರಿದರು. 
ಒಂದೂವರೆ ವರ್ಷದಿಂದ ರಸ್ತೆ ಯೋಜನೆಗಳನ್ನು ಸರಿಪಡಿಸಿ, ರಾಜಧಾನಿಯ ಸುತ್ತ ಬಿಎಂಆರ್​ಡಿ  ವ್ಯಾಪ್ತಿಯಲ್ಲಿ ಹೊಸ ರಸ್ತೆಗಳನ್ನು ಗುರುತಿಸಲಾಗಿದೆ. ಕೆಲವು ರಸ್ತೆಗಳನ್ನು ವಿಸ್ತರಿಸಲಾಗುವುದು. ಈ ಮಧ್ಯೆ ಅಧಿಕಾರಿಗಳ ರ್ನಿಲಕ್ಷ$್ಯ ಅಥವಾ ನಿಯಮ ಉಲಂಘನೆ ಕಂಡು ಬಂದಲ್ಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. 
ಸಭೆಯಲ್ಲಿ ಬೆಂಗಳೂರು ದಕ್ಷಿಣ ಶಾಸಕ ಎಂ.ಕೃಷ್ಣಪ್ಪ , ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಋತ್ವಿಕ್​ ರಂಜನ್​ ಪಾಂಡೆ, ಬೆಂಗಳೂರು ನಗರ ಜಿಲ್ಲಾಧಿಕಾರಿ ಪಿ.ಎಸ್​. ಕಾಂತರಾಜು, ಜಿಪಂ ಸಿಇಒ ಆರ್​. ಯತೀಶ್​ ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕುಡಿಯುವ ನೀರಿಗೆ ಆದ್ಯತೆ ಇರಲಿ
ಮೂಲ ಸೌಕರ್ಯಗಳಲ್ಲಿ ಕುಡಿಯುವ ನೀರಿನ ಸೌಲಭ್ಯಕ್ಕೆ ಶಾಶ್ವತ ವ್ಯವಸ್ಥೆಗೆ ಆದ್ಯತೆ ನೀಡಬೇಕು. ಬೆಂಗಳೂರು ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಕೂಡಲೇ ಗ್ರಾಮ ಪಂಚಾಯಿತಿಯ ಅನುದಾನ ಪೂರ್ಣವಾಗಿ ಬಳಕೆ ಮಾಡಿ, ಪರಿಹಾರ ಕಲ್ಪಿಸಬೇಕು. ಹೊಸ ಬೋರ್​ವೆಲ್​ ಕೊರೆಯಲು ಅನುದಾನ ಕೋರುವ ಹಲವಾರು ಪ್ರಸ್ತಾವನೆ ಬರುತ್ತಿವೆ. ಈಗಾಗಲೇ ವರ್ಷಗಳಿಂದ ನಿಷ್ಕ್ರಿಯಗೊಂಡಿರುವ ಸಾವಿರಕ್ಕೂ ಹೆಚ್ಚು ಕೊಳವೆ ಬಾವಿಗಳಿಗೆ ಅಳವಡಿಸಿರುವ ಆರ್​.ಆರ್​. ಸಂಖ್ಯೆಯನ್ನೇ ನೂತನ ಸಂಪರ್ಕಗಳಿಗೆ ವರ್ಗಾವಣೆ ಮಾಡಿ ಎಂದು ಸಚಿವರು ಸೂಚಿಸಿದರು. ಮುಂದಿನ ಸಭೆಯೊಳಗಾಗಿ ಈ ಕಾರ್ಯವನ್ನು ಪೂರ್ಣಗೊಳಸಲಾಗುವುದು ಎಂದು ಜಿ.ಪಂ. ಸಿಇಒ ಆರ್​. ಯತೀಶ್​ ಭರವಸೆ ನೀಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಉದ್ಯಾನವನ, ಆಟದ ಮೈದಾನ ಮತ್ತು ಕ್ರೀಡಾಂಗಣದ ಅವಶ್ಯಕತೆ ಇದ್ದು, ಪಂಚಾಯಿತಿ ಭಾಗದಲ್ಲಿ ಖಾಲಿ ಇರುವ ನಿವೇಶನವನ್ನು ಹಸ್ತಾಂತರಿಸಿ ಆದ್ಯತೆ ಮೇರೆಗೆ ತಡೆಗೋಡೆಯನ್ನು ನಿರ್ಮಿಸಿ ಅನುದಾನದ ಲಭ್ಯತೆ ಆಧರಿಸಿ ಅಭಿವೃದ್ಧಿಪಡಿಸಬೇಕು ಎಂದು ಕೃಷ್ಣಬೈರೇಗೌಡ ತಿಳಿಸಿದರು.
ಕಸ ನಿರ್ವಹಣೆ ಅಸಮರ್ಪಕ
ಕಸ ನಿರ್ವಹಣೆ ವಿಚಾರದಲ್ಲಿ ಇತರೆ ರಾಜ್ಯಗಳನ್ನು ಗಮನಿಸಿದರೆ ನಮಗೆ ಬೇಸರವಾಗುತ್ತದೆ. ನಮ್ಮಲ್ಲಿ ಹಣಕ್ಕೆ ಯಾವುದೇ ಕೊರತೆ ಇಲ್ಲ, ಆದರೆ ವೈಜ್ಞಾನಿಕ ಮನಸ್ಥಿತಿಯ ಕೊರತೆಯಿದೆ ಎಂದು  ಸಚಿವರು ಬೇಸರ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿಗಳಿಗೆ ಬರುವ ಅನುದಾನದ ಒಂದು ಪಾಲನ್ನು ಕಡ್ಡಾಯವಾಗಿ ಶಾಶ್ವತ ನಿಮಾರ್ಣ ಕಾರ್ಯಗಳಿಗೆ, ವಿಶೇಷವಾಗಿ ನೀರು ಮತ್ತು ಕಸ ನಿರ್ವಹಣೆಗೆ ಮೀಸಲಿಡಬೇಕು ಕೃಷ್ಣ ಬೈರೇಗೌಡ ತಿಳಿಸಿದರು.
ರಾಜಧಾನಿಗೆ ಮಾಸ್ಟರ್​ ಪ್ಲ್ಯಾನ್​
ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದ ಭವಿಷ್ಯದ ಸಂಚಾರ ಅಗತ್ಯತೆಗಳಿಗೆ ತಕ್ಕಂತೆ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿಎಂಆರ್​ಡಿಎ) ವ್ಯಾಪ್ತಿಯಲ್ಲಿ ಹೊಸದಾಗಿ ರೋಡ್​ ಗ್ರಿಡ್​ ಗುರುತಿಸಿ, ಮಾಸ್ಟರ್​ ಪ್ಲ್ಯಾನ್​ ಅನ್ನು ಸಮಗ್ರವಾಗಿ ತಿದ್ದುಪಡಿ ಮಾಡಲಾಗಿದೆ. ಈ ಹಿಂದೆ ಇದ್ದ ಮಾಸ್ಟರ್​ ಪ್ಲ್ಯಾನ್​ ಇಂದಿನ ಬೆಳವಣಿಗೆ ಮತ್ತು ವಾಹನ ದಟ್ಟಣೆಯ ಅಗತ್ಯತೆಗಳಿಗೆ ಏನೇನೂ ಸಾಲದಾಗಿದೆ. ಹೀಗಾಗಿ ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಹೊಸ ರಸ್ತೆಗಳನ್ನು ಗುರುತಿಸುವುದರ ಜತೆಗೆ, ಹಾಲಿ ಇರುವ ರಸ್ತೆಗಳ ಅಗಲವನ್ನು ಗಣನೀಯವಾಗಿ ಹೆಚ್ಚಿಸಿ ಮಾಸ್ಟರ್​ ಪ್ಲ್ಯಾನ್​ಗೆ ತಿದ್ದುಪಡಿ ತರಲಾಗಿದೆ. ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಅಂತಿಮ ಅಧಿಸೂಚನೆ ಹೊರಬೀಳಲಿದೆ ಎಂದು ಕೃಷ್ಣಬೈರೇಗೌಡ ವಿವರಿಸಿದರು.
ಪಿಡಿಒಗಳಿಗೆ ಕಠಿಣ ಎಚ್ಚರಿಕೆ
ಮಾಸ್ಟರ್​ ಪ್ಲ್ಯಾನ್​ನಲ್ಲಿ ನಿಗದಿಪಡಿಸಿರುವ ರಸ್ತೆಯ ಅಗಲವನ್ನು ಕಡೆಗಣಿಸಿ ಮನಬಂದಂತೆ ಕಟ್ಟಡ ನಿರ್ಮಿಸಲು ಅವಕಾಶ ನೀಡಬಾರದು. ರಸ್ತೆಗೆ ಬಿಡಬೇಕಾದ ಜಾಗದಲ್ಲಿ ಶಾಶ್ವತ ಕಟ್ಟಡ ಮಾತ್ರವಲ್ಲ, ಯಾವುದೇ ರೀತಿಯ ತಾತ್ಕಾಲಿಕ ಅಥವಾ ಸ್ಟೀಲ್​ ಪಿಲ್ಲರ್​ ಸ್ಟ್ರಕ್ಚರ್​ ಕೂಡ ಹಾಕುವಂತಿಲ್ಲ. ಎಲ್ಲವೂ ನಿಯಮಬಾಹಿರವೇ ಆಗುತ್ತದೆ. ಉಪಗ್ರಹ ಚಿತ್ರಣ ಲಭ್ಯವಿದ್ದು, ಯಾವ ಕಟ್ಟಡ ಯಾವ ದಿನಾಂಕದಂದು ನಿರ್ಮಾಣವಾಗಿದೆ ಎಂಬುದು ಕರಾರುವಾಕ್ಕಾಗಿ ತಿಳಿಯುತ್ತದೆ. ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣಕ್ಕೆ ಅನುಮತಿಸಿದರೆ ಅಥವಾ ಕಣ್ಮುಚ್ಚಿ ಕುಳಿತರೆ ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ವಿರುದ್ಧ ನೇರ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಸಚಿವರು ಎಚ್ಚರಿಸಿದರು.
ಮುಖ್ಯಾಂಶಗಳು 
* ಹೋಬಳಿಗೊಂದು ಚಿತಾಗಾರ ನಿರ್ಮಾಣಕ್ಕೆ ಚಿಂತನೆ
* ಸ್ಮಶಾನಗಳಿಗೆ ಜಾಗ ಗುರುತು ಮಾಡಲು ಸಚಿವರ ಸೂಚನೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net