ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಐದು ಪಾಲಿಕೆಗಳ ಸಿದ್ಧತೆ

ಜಿಬಿಎ
ಜಿಬಿಎ
Published on

ಪ್ರಮುಖ ಮುಖ್ಯಾಂಶಗಳು

  • ಪಿಒಪಿ, ರಾಸಾಯನಿಕ ಬಣ್ಣಕ್ಕೆ ಬ್ರೇಕ್​
  • ಅನುಮತಿಗೆ ಏಕಗವಾಕ್ಷಿ ವ್ಯವಸ್ಥೆ
ಬೆಂಗಳೂರು: ಗಣೇಶೋತ್ಸವವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಗ್ರೇಟರ್​ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳು ಸಿದ್ಧತೆ ಕೈಗೊಂಡಿವೆ. ಗಣೇಶ ಮೂರ್ತಿ ತಯಾರಿಕೆಯಲ್ಲಿ ಪ್ಲಾಸ್ಟರ್​ ಆಫ್​ ಪ್ಯಾರಿಸ್​ (ಪಿಒಪಿ), ರಾಸಾಯನಿಕ ಬಣ್ಣ ಹಾಗೂ ಥರ್ಮಕೋಲ್​ ಬಳಕೆಗೆ ನಿರ್ಬಂಧ ವಿಧಿಸಲಾಗಿದ್ದು, ಸಾರ್ವಜನಿಕ ಗಣೇಶೋತ್ಸವಗಳಿಗೆ ಅನುಮತಿ ನೀಡುವ ಪ್ರಕ್ರಿಯೆಯನ್ನು ಸರಳಗೊಳಿಸಲು ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಲಾಗಿದೆ. ಪೊಲೀಸ್​, ಬೆಸ್ಕಾಂ, ಅಗ್ನಿಶಾಮಕ ಸೇರಿ ಸಂಬಂಧಪಟ್ಟ ಇಲಾಖೆಗಳ ಸಮನ್ವಯದಲ್ಲಿ ಅನುಮತಿ ನೀಡಲು ನೋಡಲ್​ ಅಧಿಕಾರಿಗಳನ್ನು ನೇಮಿಸಲಾಗಿದೆ.
ನಿಷೇಧಿತ ವಸ್ತು ಬಳಕೆ ಕಂಡರೆ ಕ್ರಮ:
ಪಿಒಪಿ, ರಾಸಾಯನಿಕ ಬಣ್ಣ ಹಾಗೂ ಥರ್ಮಕೋಲ್​ ಬಳಸಿ ಗಣೇಶ ಮೂರ್ತಿ ತಯಾರಿಸುವುದು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸ್ಥಳ ಪರಿಶೀಲನೆ ನಡೆಸಿ ದಂಡ ವಿಧಿಸುವ ಜತೆಗೆ ಕ್ರಿಮಿನಲ್​ ಮೊಕದ್ದಮೆ ದಾಖಲಿಸಲು ಹಾಗೂ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
24 ಗಂಟೆಯೊಳಗೆ ಅನುಮತಿ:
ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಪಡೆಯಲು ವಾರ್ಡ್​ವಾರು ನೋಡಲ್​ ಅಧಿಕಾರಿಗಳನ್ನು ನೇಮಿಸಲಾಗಿದೆ. ಪೊಲೀಸ್​, ಬೆಸ್ಕಾಂ, ಅಗ್ನಿಶಾಮಕ ಹಾಗೂ ಇತರ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಅರ್ಜಿಗಳನ್ನು ಪರಿಶೀಲಿಸಿ, ಅಗತ್ಯ ದಾಖಲೆಗಳು ಪೂರ್ಣಗೊಂಡಿದ್ದರೆ 24 ಗಂಟೆಯೊಳಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ವಿಳಂಬ ಅಥವಾ ತೊಂದರೆ ಎದುರಾದಲ್ಲಿ ಸಂಬಂಧಪಟ್ಟ ಇಲಾಖೆಯಿಂದ ವರದಿ ಪಡೆದು ಅದೇ ದಿನ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ.
ಕೆರೆಗಳಿಗೆ ವಿಸರ್ಜನೆ ಬೇಡ
ಬೆಂಗಳೂರು ಪೂರ್ವ ಪಾಲಿಕೆ ವ್ಯಾಪ್ತಿಯಲ್ಲೂ ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆಯುಕ್ತ ಡಿ.ಎಸ್​. ರಮೇಶ್​ ತಿಳಿಸಿದ್ದಾರೆ. ಜಲಮೂಲಗಳ ಮಾಲಿನ್ಯ ತಡೆಗೆ ಕೆರೆ ಹಾಗೂ ಕಲ್ಯಾಣಿಗಳಲ್ಲಿ ನೇರವಾಗಿ ಗಣೇಶ ಮೂರ್ತಿ ವಿಸರ್ಜನೆ ಮಾಡುವುದನ್ನು ತಪ್ಪಿಸಲು ವಿವಿಧೆಡೆ ತಾತ್ಕಾಲಿಕ ವಿಸರ್ಜನಾ ಕಲ್ಯಾಣಿಗಳು ಹಾಗೂ ಮೊಬೈಲ್​ ಟ್ಯಾಂಕ್​ಗಳನ್ನು ವ್ಯವಸ್ಥೆ ಮಾಡಲಾಗಿದೆ. ದೊಡ್ಡ ಮೂರ್ತಿಗಳ ವಿಸರ್ಜನೆಗೆ ಗುರುತಿಸಿರುವ ಸ್ಥಳಗಳ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆ. ಅಗತ್ಯವಿರುವ ಕಡೆ ಸಂಚಾರಿ ವಾಹನಗಳ ಮೂಲಕವೂ ವಿಸರ್ಜನೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ವಿಸರ್ಜನೆ ಬಳಿಕ ತ್ಯಾಜ್ಯ ವಿಂಗಡಣೆ
ಗಣೇಶ ಮೂರ್ತಿ ವಿಸರ್ಜನೆಯಿಂದ ಉಂಟಾಗುವ ಮಣ್ಣು, ಪೂಜಾ ಹೂವು, ಪ್ಲಾಸ್ಟಿಕ್​ ಮತ್ತಿತರ ತ್ಯಾಜ್ಯವನ್ನು ಮೂಲದಲ್ಲೇ ವಿಂಗಡಿಸಲಾಗುವುದು. ಹಸಿ ತ್ಯಾಜ್ಯವನ್ನು ಸಂಸ್ಕರಣಾ ಘಟಕಗಳಿಗೆ ಹಾಗೂ ಒಣ ತ್ಯಾಜ್ಯವನ್ನು ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರಗಳಿಗೆ ಸಾಗಿಸಲು ಕ್ರಮ ಕೈಗೊಳ್ಳಲಾಗಿದೆ.
ಪ್ಲಾಸ್ಟಿಕ್​ ವಿರುದ್ಧ ತಪಾಸಣೆ
ಹಬ್ಬದ ಸಂದರ್ಭದಲ್ಲಿ ನಿಷೇಧಿತ ಪ್ಲಾಸ್ಟಿಕ್​ ಬಳಕೆ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಪ್ರತಿನಿತ್ಯ ತಪಾಸಣಾ ಕಾರ್ಯಾಚರಣೆ ನಡೆಸಲು ತಂಡಗಳನ್ನು ರಚಿಸಲಾಗಿದೆ. ನಿಷೇಧಿತ ಪ್ಲಾಸ್ಟಿಕ್​ ಮಾರಾಟ ಅಥವಾ ಬಳಕೆ ಕಂಡುಬಂದರೆ ದಂಡ ವಿಧಿಸಿ, ವಶಪಡಿಸಿಕೊಂಡ ಪ್ಲಾಸ್ಟಿಕ್​ ಮರುಬಳಕೆಯಾಗದಂತೆ ವಿಲೇವಾರಿ ಮಾಡಲಾಗುವುದು ಎಂದು ಆಯುಕ್ತರು ಎಚ್ಚರಿಸಿದ್ದಾರೆ.

ಪರಿಸರ ಹಾಗೂ ಜಲಮೂಲಗಳ ಸಂರಕ್ಷಣೆಗೆ ಸಾರ್ವಜನಿಕರು ಮತ್ತು ಹಬ್ಬದ ಆಯೋಜಕರು ಪಾಲಿಕೆಯೊಂದಿಗೆ ಸಹಕರಿಸಬೇಕು. ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನೇ ಪ್ರತಿಷ್ಠಾಪಿಸಿ, ಪಿಒಪಿ ಹಾಗೂ ರಾಸಾಯನಿಕ ಬಣ್ಣದ ಮೂರ್ತಿಗಳನ್ನು ತ್ಯಜಿಸಬೇಕು. ಪಾಲಿಕೆ ಮತ್ತು ಸಂಬಂಧಪಟ್ಟ ಇಲಾಖೆಗಳು ಹೊರಡಿಸುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಸುರಕ್ಷಿತ, ಸ್ವಚ್ಛ ಹಾಗೂ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net