ಡ್ಯಾಶ್​ ಕ್ಯಾಮ್​ಗಳ ಮೂಲಕ ರಸ್ತೆಗಳ ಸಮೀಕ್ಷೆ ನಡೆಸಿ

ಜಿಬಿಎ
ಜಿಬಿಎ
Published on

ಪ್ರಮುಖ ಮುಖ್ಯಾಂಶಗಳು

  • ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್​ ಸೂಚನೆ
ಬೆಂಗಳೂರು: ಗ್ರೇಟರ್​ ಬೆಂಗಳೂರು ಪ್ರಾಧಿಕಾರ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿರುವ ಆರ್ಟಿರಿಯಲ್​ ಹಾಗೂ ಸಬ್​-ಆರ್ಟಿರಿಯಲ್​ ರಸ್ತೆಗಳ ಸಮೀಕ್ಷೆಯನ್ನು ಡ್ಯಾಶ್​ ಕ್ಯಾಮರಾಗಳ ಮೂಲಕ ನಡೆಸಿ, ಕೂಡಲೇ ವರದಿ ಸಲ್ಲಿಸುವಂತೆ ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್​ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಬಿಎ ವ್ಯಾಪ್ತಿಯಲ್ಲಿರುವ ಆರ್ಟಿರಿಯಲ್​ ಹಾಗೂ ಸಬ್​-ಆರ್ಟಿರಿಯಲ್​ ರಸ್ತೆಗಳ ಗುಣಮಟ್ಟವನ್ನು ಕಾಪಾಡುವ ನಿಟ್ಟಿನಲ್ಲಿ ಗುರುವಾರ ನಡೆದ ವರ್ಚುವಲ್​ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಇಂಜಿನಿಯರ್​ಗಳ ವಾಹನಗಳಿಗೆ ಡ್ಯಾಶ್​ ಕ್ಯಾಮ್​ಗಳನ್ನು ಅಳವಡಿಸಿ, ವೀಡಿಯೋ ದಾಖಲಾತಿಗಳ ಆಧಾರದ ಮೇಲೆ ರಸ್ತೆಗಳ ಗುಣಮಟ್ಟದ ಕುರಿತು ಸಮಗ್ರ ವರದಿಯನ್ನು ಶೀಘ್ರದಲ್ಲೇ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅಧಿಕಾರಿಗಳ ವಾಹನಗಳಿಗೆ ಅಳವಡಿಸಲಾಗಿರುವ ಡ್ಯಾಶ್​ ಕ್ಯಾಮ್​ಗಳ ಮೂಲಕ ಪ್ರತಿದಿನ ಬೆಳಗ್ಗೆ 7ರಿಂದ 9 ಗಂಟೆಯವರೆಗೆ ರಸ್ತೆ ಸಮೀಕ್ಷೆ ನಡೆಸಬೇಕು. ಈ ಅವಧಿಯಲ್ಲಿ ವಾಹನಗಳ ಸಂಚಾರ ಕಡಿಮೆ ಇರುವುದರಿಂದ ಹೆಚ್ಚಿನ ರಸ್ತೆಗಳನ್ನು ಸಮೀಕ್ಷೆ ಮಾಡಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಡ್ಯಾಶ್​ ಕ್ಯಾಮ್​ಗಳ ಮೂಲಕ ಸೆರೆಹಿಡಿಯಲಾದ ರಸ್ತೆಗಳ ದೃಶ್ಯಾವಳಿಗಳನ್ನು ಸಂಬಂಧಿತ ಪಾಲಿಕೆಗಳ ಮಾಹಿತಿ ತಂತ್ರಜ್ಞಾನ ವಿಭಾಗಕ್ಕೆ ಸಲ್ಲಿಸಬೇಕು. ದೃಶ್ಯಾವಳಿಗಳ ದತ್ತಾಂಶವನ್ನು ಕೂಲಂಕಷವಾಗಿ ಪರಿಶೀಲಿಸಿ, ವರದಿ ಸಿದ್ಧಪಡಿಸಿ ಕೂಡಲೇ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮೊದಲ ಹಂತದಲ್ಲಿ ಆರ್ಟಿರಿಯಲ್​ ಹಾಗೂ ಸಬ್​-ಆರ್ಟಿರಿಯಲ್​ ರಸ್ತೆಗಳ ಸಮೀಕ್ಷೆಯನ್ನು ಡ್ಯಾಶ್​ ಕ್ಯಾಮ್​ಗಳ ಮೂಲಕ ನಡೆಸಬೇಕು. ನಂತರ ಹಂತ ಹಂತವಾಗಿ ವಾರ್ಡ್​ ರಸ್ತೆಗಳನ್ನು ಸಹ ಇದೇ ವಿಧಾನದಲ್ಲಿ ಪರಿಶೀಲಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ವಿಶೇಷ ಆಯುಕ್ತ ನಿತೀಶ್​, ನಗರ ಪಾಲಿಕೆಗಳ ಆಯುಕ್ತರಾದ ಜಿ. ಜಗದೀಶ್​, ಡಾ.ಕೆ.ವಿ. ರಾಜೇಂದ್ರ, ಅಪರ ಆಯುಕ್ತರಾದ ಕವಿತಾ ರಾಜರಾಂ, ಲೋಖಂಡೆ ಸ್ನೇಹಲ್​ ಸುಧಾಕರ್​, ವೆಂಕಟಾ ಚಲಪತಿ, ನವೀನ್​ ಕುಮಾರ್​ ರಾಜು, ಇಂಜಿನಿಯರಿಂಗ್​ ವಿಭಾಗದ ಮುಖ್ಯಸ್ಥ ಪ್ರಹ್ಲಾದ್​ ಇದ್ದರು.
ಗುತ್ತಿಗೆದಾರರೇ ದುರಸ್ತಿಪಡಿಸಲಿ
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿರುವ ದೋಷ ಹೊಣೆಗಾರಿಕೆ ಅವಧಿಯಲ್ಲಿರುವ ಹಾಗೂ ಡಿಎಲ್​ಪಿ ಅವಧಿ ಮುಕ್ತಾಯಗೊಂಡಿರುವ ರಸ್ತೆಗಳ ಪ್ರತ್ಯೇಕ ಪಟ್ಟಿಯನ್ನು ಸಿದ್ಧಪಡಿಸಬೇಕು. ಡಿಎಲ್​ಪಿ ಅವಧಿಯಲ್ಲಿರುವ ರಸ್ತೆಗಳಲ್ಲಿ ಕಂಡುಬರುವ ದೋಷಗಳನ್ನು ಸಂಬಂಧಿತ ಗುತ್ತಿಗೆದಾರರಿಂದಲೇ ದುರಸ್ತಿಪಡಿಸಬೇಕು ಎಂದು ಮಹೇಶ್ವರ ರಾವ್​ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net