ಗುಲಾಬಿ ಮಾರ್ಗಕ್ಕೆ ಮೊದಲ ರೈಲು ಶ್ರೀಘ್ರ | PINK METRO

ಪಿಂಕ್​ ಮೆಟ್ರೋ
ಪಿಂಕ್​ ಮೆಟ್ರೋ
Published on

ಪ್ರಮುಖ ಮುಖ್ಯಾಂಶಗಳು

  • ಮೆಟ್ರೋ 3ಎ ಹಂತದ ಕಾಮಗಾರಿ ಚುರುಕು
  • 2026ರ ಮೇಗೆ ಕಾರ್ಯಾಚರಣೆ ಸಾಧ್ಯತೆ
ಪವನ್​ ಆಚಾರ್ಯ ನೀರ್ಚಾಲು ಬೆಂಗಳೂರು
ಕಾಳೇನ ಅಗ್ರಹಾರದಿಂದ ನಾಗವಾರ ತನಕ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋದ 3ಎ ಹಂತದ ಯೋಜನೆ ಪಿಂಕ್​ ಮಾರ್ಗದ ಕಾಮಗಾರಿಗಳು ದಿನದಿಂದ  ದಿನಕ್ಕೆ ಚುರುಕಾಗುತ್ತಿದ್ದು, ಈ ಮಾರ್ಗ ಎರಡು ಹಂತಗಳಲ್ಲಿ ಪ್ರಾರಂಭಗೊಳ್ಳಲಿದೆ ಎಂದು ಬಿಎಂಆರ್​ಸಿಎಲ್​ ತಿಳಿಸಿದೆ.
ಒಟ್ಟು 21.26 ಕಿಮೀ ಉದ್ದವಿರುವ ಈ ಮಾರ್ಗದಲ್ಲಿ ಭಾರತ್​ ಅರ್ಥ್​ ಮೂವರ್ಸ್​ ನಿಯಮಿತ (ಬಿಇಎಂಎಲ್​) ತನ್ನ ಮೊದಲ ಮಾದರಿ ರೈಲು ಬೋಗಿಯನ್ನು ಡಿಸೆಂಬರ್​ನಲ್ಲಿ ಹೊರ ತರಲಿದೆ ಎಂದು ಮೂಲಗಳು ತಿಳಿಸಿವೆ. ಕಾಳೇನ ಅಗ್ರಹಾರ ಮತ್ತು ತಾವರೆಕೆರೆ ನಡುವಿನ 7.5 ಕಿಮೀ ಎತ್ತರಿಸಿದ ಮಾರ್ಗದ ವಿಭಾಗವು 2026ರ ಮೇ ವೇಳೆಗೆ ಕಾರ್ಯಾಚರಣೆ ಪ್ರಾರಂಭಿಸುವ ನಿರೀಕ್ಷೆ ಇದೆ. ಡೈರಿ ಸರ್ಕಲ್​ನಿಂದ ನಾಗವಾರದವರೆಗಿನ ಉಳಿದ 13.76 ಕಿಮೀ ಸುರಂಗ ಮಾರ್ಗವು 2026ರ ಡಿಸೆಂಬರ್​ ವೇಳೆಗೆ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ ಎಂದು ಬಿಎಂಆರ್​ಸಿಎಲ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಿಂಕ್​ ಎತ್ತರಿಸಿದ ಮಾರ್ಗದ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದೆ. ಉದ್ಘಾಟನೆಗೆ ಮೊದಲು ಸಣ್ಣಪುಟ್ಟ ಕೆಲಸಗಳು ಮಾತ್ರ ಉಳಿದಿವೆ. ಬನ್ನೇರುಘಟ್ಟ ರಸ್ತೆಯ ಉದ್ದಕ್ಕೂ ಸಾಗುವ ಈ ವಿಭಾಗವು ಆರು ನಿಲ್ದಾಣಗಳನ್ನು (ತಾವರೆಕೆರೆ, ಜಯದೇವ ಆಸ್ಪತ್ರೆ, ಜೆಪಿ ನಗರ 4ನೇ ಹಂತ, ಐಐಎಂಬಿ, ಹುಳಿಮಾವು ಮತ್ತು ಕಾಳೇನ ಅಗ್ರಹಾರ) ಹೊಂದಿರುತ್ತದೆ. ದಕ್ಷಿಣ ಭಾರತದ ಅತಿ ಎತ್ತರದ ಮೆಟ್ರೋ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ ಜಯದೇವ ಆಸ್ಪತ್ರೆ ಮೆಟ್ರೋ ನಿಲ್ದಾಣವು ಇಂಟರ್​ಚೇಂಜ್​ ನಿಲ್ದಾಣವಾಗಿ ಈ ಮಾರ್ಗದಲ್ಲಿ ಕಾರ್ಯನಿರ್ವಹಿಸಲಿದೆ. 2024ರ ಡಿಸೆಂಬರ್​ನಲ್ಲಿ ಸುರಂಗ ಮಾರ್ಗ ಪೂರ್ಣಗೊಂಡರೂ ಕಾಮಗಾರಿಗಳು ಇನ್ನೂ ನಡೆಯುತ್ತಿದೆ. ಡೈರಿ ಸರ್ಕಲ್​, ಎಂಜಿ ರಸ್ತೆ ಮತ್ತು ನಾಗವಾರ ಮೂಲಕ ಹಾದುಹೋಗುವ 13.76 ಕಿಮೀ ಕಾರಿಡಾರ್​ 12 ನಿಲ್ದಾಣಗಳನ್ನು ಒಳಗೊಂಡಿದ್ದು, ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣವು ನಗರದ ನಾಲ್ಕನೇ ಇಂಟರ್​ಚೇಂಜ್​ ನಿಲ್ದಾಣವಾಗಲಿದೆ ಎಂದು ಬಿಎಂಆರ್​ಸಿಎಲ್​ ತಿಳಿಸಿದೆ.
ಸುಲಭ ಸಂಪರ್ಕ: ಗುಲಾಬಿ ಮಾರ್ಗವು ನೇರಳೆ, ಹಳದಿ ಹಾಗೂ ನೀಲಿ ಮಾರ್ಗಗಳೊಂದಿಗೆ ಇಂಟರ್​ಚೇಂಜ್​ಗಳನ್ನು ಹೊಂದಿರುವುದರಿಂದ, ಯಾವುದೇ ಕೊನೆಯ ನಿಲ್ದಾಣದಿಂದ ಬೇರೆ ಮಾರ್ಗಕ್ಕೆ ಸ್ಥಳಾಂತರ ಸುಲಭವಾಗಲಿದೆ. ಈ ಯೋಜನೆ ಪೂರ್ಣಗೊಂಡರೆ ಸಾರ್ವಜನಿಕ ಸಂಪರ್ಕ ವ್ಯವಸ್ಥೆ ಬಳಕೆದಾರರಿಗೆ ಹೊಸ ಅನುಭವ ನೀಡಲಿದೆ. ದಕ್ಷಿಣ ಬೆಂಗಳೂರು ಭಾಗದ ಬಡಾವಣೆಗಳಿಂದ ನಗರದ ಕೇಂದ್ರ ವ್ಯಾಪಾರ ಮತ್ತು ಉದ್ಯೋಗ ವಲಯಗಳಿಗೆ ನೇರ ಸಂಪರ್ಕ ಸಿಗಲಿದೆ.

3,177 ಕೋಟಿ ರೂ.ಯೋಜನೆ

ಗುರಾಬಿ ಮಾರ್ಗಕ್ಕೆ ಬಿಇಎಂಎಲ್​ ಸಂಸ್ಥೆ ಜತೆಗೆ ಬಿಎಂಆರ್​ಸಿಎಲ್​ 3,177 ಕೋಟಿ ರೂ. ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ. ಒಪ್ಪಂದದ ಪ್ರಕಾರ, 2026ರ ಮಾರ್ಚ್​ ವೇಳೆಗೆ 6 ಬೋಗಿಗಳ ಚಾಲಕರಹಿತ ಇಪ್ಪತ್ತು ರೈಲು ಸೆಟ್​ಗಳನ್ನು ತಯಾರಿಸಿ ನೀಡಬೇಕಿದೆ. ಆದರೆ, ಅಷ್ಟೊಂದು ಬೋಗಿಗಳು ಬರುವುದು ಇನ್ನೂ ತಡವಾಗಲಿದೆ. ಡಿಸೆಂಬರ್​ನಲ್ಲಿ ಮೊದಲ ಮಾದರಿ ರೈಲನ್ನು ನಿರೀಸಲಾಗಿದೆ. ಈ ಮಾರ್ಗ ಸುಮಾರು 21.26 ಕಿ.ಮೀ ಉದ್ದವಿದ್ದು, 18 ನಿಲ್ದಾಣಗಳನ್ನು ಒಳಗೊಂಡಿದೆ. ತಾವರೆಕೆರೆ, ಜಯದೇವ ಆಸ್ಪತ್ರೆ, ಡೇರಿ ಸರ್ಕಲ್​, ಎಂ.ಜಿ. ರಸ್ತೆ, ಕಾಳೇನ ಅಗ್ರಹಾರ, ನಾಗವಾರ ಮುಂತಾದ ಪ್ರಮುಖ ವಲಯಗಳನ್ನು ಸಂಪರ್ಕಿಸುತ್ತದೆ. ಈ ಮಾರ್ಗದ ಎತ್ತರಿಸಿದ ನಿಲ್ದಾಣಗಳ ನಿರ್ಮಾಣ ಬಹುತೇಕ ಪೂರ್ತಿಗೊಂಡಿದೆ. ಒಟ್ಟಾರೆ ಈ ಯೋಜನೆಯನ್ನು ದಕ್ಷಿಣ ಮತ್ತು ಉತ್ತರ ಬೆಂಗಳೂರನ್ನು ಸುಲಭದಲ್ಲಿ ಸಂಪರ್ಕಿಸುವ ಉದ್ದೇಶದಿಂದ ರೂಪಿಸಲಾಗಿದೆ.

318 ಕೋಚ್​ಗಳ ನಿರ್ಮಾಣ!

ನಿರ್ವಹಣಾ ಪರೀಕ್ಷೆಗಳಿಗೆ ಹಾಗೂ ಸುರಕ್ಷತಾ ಮೌಲ್ಯಮಾಪನಕ್ಕೆ ಶ್ರೀ ಬಿಇಎಂಎಲ್​ ತನ್ನ ಮೊದಲ ಮಾದರಿ ರೈಲು ಬೋಗಿಯನ್ನು ಹೊರತರುತ್ತದೆ. ಒಟ್ಟು 318 ಕೋಚ್​ಗಳನ್ನು ನಿರ್ಮಿಸಲಿದ್ದು, ಅದರಲ್ಲಿ 96 ಕೋಚ್​ಗಳು ಗುಲಾಬಿ ಮಾರ್ಗಕ್ಕೆ ಹಾಗೂ 222 ನೀಲಿ ಮಾರ್ಗಕ್ಕೆ ತಯಾರಾಗಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net