ಬೆಂಗಳೂರು: ನಮ್ಮ ಮೆಟ್ರೋ ಹಸಿರು ಮಾರ್ಗದ ನಾಗಸಂದ್ರ ನಿಲ್ದಾಣದಲ್ಲಿ ಭಾನುವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದ್ದು, ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ನಿಲ್ದಾಣದ ತುರ್ತು ನಿರ್ಗಮನ ಪ್ರದೇಶದ ಸಮೀಪ ಅಳವಡಿಸಲಾಗಿದ್ದ ಸೂಚನಾ ಫಲಕದಲ್ಲಿ ಮಧ್ಯಾಹ್ನ 1.30ರ ಹೊತ್ತಿಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿತ್ತು. ಇದರಿಂದ ಆತಂಕಗೊಂಡ ಪ್ರಯಾಣಿಕರು ಮೆಟ್ರೋ ರೈಲು ನಿಲ್ದಾಣದ ಸಿಬ್ಬಂದಿಗೆ ತಿಳಿಸಿದ್ದು, ಕೂಡಲೇ ಎಚ್ಚೆತ್ತುಕೊಂಡ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು. ವಾಹನಸಮೇತ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದರು.