ಆನ್​ಲೈನ್​ ಪ್ರಕ್ರಿಯೆಯಿಂದ ಇ-ಖಾತಾ ಸುಲಭ | e khatha

ಜಿಬಿಎ
ಜಿಬಿಎ
Published on

ಪ್ರಮುಖ ಮುಖ್ಯಾಂಶಗಳು

  • ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್​ ಮೌದ್ಗಿಲ್​ ಹೇಳಿಕೆ
  • ಕಂದಾಯ ಅಥವಾ ಇತರೆ ಕಚೇರಿಗಳಿಗೆ ಭೇಟಿ ಅಗತ್ಯವಿಲ್ಲ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಗ್ರೇಟರ್​ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಇ-&ಖಾತಾ ವಿತರಣೆಯನ್ನು ಸುಲಭಗೊಳಿಸುವ ಉದ್ದೇಶದಿಂದ ಸರಳವಾದ ಆನ್​ಲೈನ್​ ಪ್ರಕ್ರಿಯೆಯ ಮೂಲಕ ಇ-&ಖಾತಾ ಸೇವೆಗಳನ್ನು ಒದಗಿಸಲಾಗುತ್ತಿದೆ. ಇದರಿಂದ ನಾಗರಿಕರು ಯಾವುದೇ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ ಎಂದು ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್​ ಮೌದ್ಗಿಲ್​ ತಿಳಿಸಿದ್ದಾರೆ.
ನಗರದ ಸರ್​.ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ಥಳಿಯ ಖಾಸಗಿ ಉದ್ಯಮಿಗಳ ಮೂಲಕ ಇ-ಖಾತಾ ಸೇವೆಗಳ ಕುರಿತ ಓರಿಯೆಂಟೇಶನ್​ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇ-&ಖಾತಾ ಅರ್ಜಿಗಳನ್ನು ಆನ್​ಲೈನ್​ ಮೂಲಕ ತಪ್ಪಿಲ್ಲದಂತೆ ಸಲ್ಲಿಸಲು ಹಾಗೂ ನಾಗರಿಕರಿಗೆ ಡಿಜಿಟಲ್​ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಹಾಯ ಮಾಡುವಂತೆ ಉದ್ಯಮಿಗಳಿಗೆ ಸೂಚಿಸಿದರು. ನಾಗರಿಕರಿಗೆ ಸರಿಯಾದ ಮಾರ್ಗದರ್ಶನ ನೀಡಿ, ಅವರ ಅರ್ಜಿಗಳು ನಿಖರವಾಗಿ ಸಲ್ಲಿಕೆಯಾಗುವಂತೆ ಸಹಕರಿಸುವುದು ನಿಮ್ಮ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಮನವರಿಕೆ ಮಾಡಿದರು.
ಕಾರ್ಯಕ್ರಮದಲ್ಲಿ ಮಾಹಿತಿ ತಂತಜ್ಞಾನ(ಇ-&ಆಸ್ತಿ)ದ ಉಪ ಆಯುಕ್ತ ಸಿ.ಮದನ್​ ಮೋಹನ್​, ಕಂದಾಯ ವಿಭಾಗದ ಜಂಟಿ ಆಯುಕ್ತೆ ಲಕ್ಷ್ಮೀದೇವಿ ಇತರರಿದ್ದರು.
ಕಚೇರಿಗಳಿಗೆ ಭೇಟಿ, ಮಧ್ಯವರ್ತಿಗಳ ಅವಶ್ಯಕತೆ ಇಲ್ಲ
ಇ-&ಖಾತಾ ಸಂಬಂಧಿತ ವಿಷಯಗಳಿಗೆ ನಾಗರಿಕರು ಅಥವಾ ಎಲ್​ಪಿಇಗಳು ಯಾವುದೇ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ ಅಥವಾ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸುವ ಅಗತ್ಯವಿಲ್ಲ. ಇ-&ಖಾತಾ ವಿತರಣೆ ಸಂಪೂರ್ಣವಾಗಿ ಆನ್​ಲೈನ್​ ಮೂಲಕ ನಡೆಯುವುದರಿಂದ ಮಧ್ಯವರ್ತಿಗಳೊಂದಿಗೆ ಸಂಪರ್ಕ ಸಾಧಿಸುವುದನ್ನು ತಪ್ಪಿಸಿಕೊಳ್ಳುವಂತೆ ಸೂಚಿಸಲಾಯಿತು. ಸರಾಸರಿಯಾಗಿ 3 ರಿಂದ 4 ದಿನಗಳೊಳಗೆ ನಾಗರಿಕರ ಇ-ಖಾತಾ ಅರ್ಜಿಗಳನ್ನು ಅನುಮೋದಿಸಲಾಗುತ್ತಿದೆ ಎಂದು ಮೌದ್ಗಿಲ್​ ತಿಳಿಸಿದರು.
ಕಾಲಮಿತಿಯಲ್ಲಿ ಪರಿಶೀಲನೆ, ಸ್ವಯಂ ಅನುಮೋದನೆ
ಸುಮಾರು ಶೇ.99 ಇ-&ಖಾತಾ ಅರ್ಜಿಗಳನ್ನು ಪರಿಶೀಲಿಸಿ ಕಾಲಮಿತಿಯೊಳಗಾಗಿ ಅನುಮೋದಿಸಲಾಗುತ್ತಿದೆ. ಅಂತಿಮ ಇ-ಖಾತಾ ಅರ್ಜಿಯನ್ನು 5 ಕೆಲಸದ ದಿನಗಳೊಳಗೆ ಪರಿಶೀಲಿಸದಿದ್ದರೆ, ವ್ಯವಸ್ಥೆಯೇ ಸ್ವಯಂಚಾಲಿತವಾಗಿ ಅನುಮೋದನೆ ಪ್ರಕ್ರಿಯೆಯನ್ನು ಪ್ರಾರಂಭಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರಿಂದ ನಾಗರಿಕರ ಅರ್ಜಿಗಳನ್ನು ಯಾರೂ ತಡೆಹಿಡಿಯಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net