ಖೋಟಾ ರಿಜಿಸ್ಟ್ರೇಷನ್‌ಗೆ ಜಿಲ್ಲಾ ನೋಂದಣಾಧಿಕಾರಿ ಅಂಕುಶ

ವಿಧಾನಸೌಧ
ವಿಧಾನಸೌಧ
Published on
ಬೆಂಗಳೂರು: ಅಮಾಯಕರ ಸ್ಥಿರಾಸ್ತಿಗಳಿಗೆ ಖೋಟಾ, ತಿರುಚಿದ, ಬೋಗಸ್ ದಾಖಲೆಗಳನ್ನು ಸೃಷ್ಟಿಸಿ ಭೂಮಿ ಕಬ್ಜ ಮಾಡುತ್ತಿದ್ದವರಿಗೆ ಕಡಿವಾಣ ಹಾಕಲು ಕಂದಾಯ ಇಲಾಖೆ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ.
ಆಸ್ತಿ ವಾರಸುದಾರರು ಅಲದಿದ್ದರೂ ಸಬ್‌ರಿಜಿಸ್ಟ್ರಾರ್ ಕಚೇರಿಗೆ ನಕಲಿ (Fake) ದಾಖಲೆ ಸಲ್ಲಿಸಿ ಕ್ರಯ, ಕರಾರು, ವಿಲ್ ಇನ್ನಿತರ ಪತ್ರ ವ್ಯವಹಾರ ನಡೆಸಿದರೆ ಅಂತಹ ದಸ್ತಾವೇಜುಗಳನ್ನು ರದ್ದುಪಡಿಸುವ ಅಧಿಕಾರ ಜಿಲ್ಲಾ ನೋಂದಣಾಧಿಕಾರಿಗೆ(district-registrar) (ಡಿಆರ್) ವಹಿಸಲಾಗಿದೆ.
ಇದು ಕೇವಲ ನಾಗರಿಕರ ಆಸ್ತಿಗಳಿಗೆ ಅಲ್ಲದೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ಜಪ್ತಿ ಮಾಡಿರುವ ಆಸ್ತಿಗೂ ಅನ್ವಯ ಆಗಲಿದೆ. ಡಿ.21ರಿಂದಲೇ ಕಾನೂನು ಜಾರಿಗೆ ಬಂದಿದ್ದು, ಪಿತ್ರಾರ್ಜಿತ ಆಸ್ತಿಗಳ ಹಕ್ಕುಗಳ ಮೇಲಿನ ವ್ಯಾಜ್ಯಗಳಿಗೆ ಅನ್ವಯ ಆಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಕಾನೂನುಬಾಹಿರವಾಗಿ ನೋಂದಣಿ ಮಾಡಿಸಿದರೆ ಅಂತಹ ದಸ್ತಾವೇಜುಗಳನ್ನು ರದ್ದುಪಡಿಸುವ ಅಧಿಕಾರವನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಜಿಲ್ಲಾ ನೋಂದಣಾಧಿಕಾರಿಗೆ (ಡಿಆರ್) ವಹಿಸಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ.
ಈ ಮೊದಲು ನಕಲಿ ದಾಖಲೆ, ವ್ಯಕ್ತಿಗಳು ನೋಂದಣಿ ಮಾಡಿಸಿದ್ದರೆ ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋಗಬೇಕಿತ್ತು. ಇದೀಗ ಡಿಆರ್ ಸ್ವಯಂಪ್ರೇರಿತ ಅಥವಾ ಸಂತ್ರಸ್ತರಿಂದ ದೂರು ಸ್ವೀಕರಿಸಿ ನೋಂದಣಿ ರದ್ದುಪಡಿಸುವ ಅಧಿಕಾರವನ್ನು ಭಾರತೀಯ ನೋಂದಣಿ ಕಾಯ್ದೆ 1908ರಲ್ಲಿ ಅನ್ವಯ ಕರ್ನಾಟಕ ನೋಂದಣಿ ನಿಯಮಾವಳಿ 1965ರ ಪ್ರಕರಣ 22ಸಿ ಅನ್ವಯ ನೀಡಲಾಗಿದೆ.
ರಾಜ್ಯಾದ್ಯಂತ ಸಬ್‌ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕೆಲ ಭೂಗಳ್ಳರು, ಬೇರೆಯವರ ಆಸ್ತಿಗಳಿಗೆ ತಿರುಚಿದ ದಾಖಲೆ ಸಲ್ಲಿಸಿ ಅಥವಾ ಬದಲಿ ವ್ಯಕ್ತಿಗಳು ಸಬ್‌ರಿಜಿಸ್ಟ್ರಾರ್ ಕಚೇರಿಗೆ ಹಾಜರಾಗಿ ನೋಂದಣಿ ಮಾಡಿಸಿ ಕಬ್ಜ ಮಾಡುತ್ತಿದ್ದರು. ಇಂತಹ ನೋಂದಣಿ ಪ್ರಕ್ರಿಯೆ ರದ್ದುಪಡಿಸುವ ಅಧಿಕಾರ ಇಲಾಖೆಗೆ ಇರಲಿಲ್ಲ. ಪೊಲೀಸ್ ಠಾಣೆ ಅಥವಾ ಕೋರ್ಟ್ ಮೆಟ್ಟಿಲೇರಿ ನ್ಯಾಯದಾನಕ್ಕೆ ಮೊರೆ ಇಡಬೇಕಿತ್ತು. ಇದರ ನಡುವೆ ಭೂಗಳ್ಳರು, ರಾಜೀಸಂಧಾನ ನೆಪದಲ್ಲಿ ಅಸಲಿ ವಾರಸುದಾರರಿಗೆ ತೊಂದರೆ ಕೊಡುತ್ತಿದ್ದರು. ಇದನ್ನು ತಪ್ಪಿಸುವ ಸಲುವಾಗಿ ಈ ಕ್ರಮ ಕೈಗೊಂಡಿರುವುದರಿಂದ ನ್ಯಾಯದಾನ ಶೀಘ್ರದಲ್ಲಿ ಸಿಗಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಬ್ ರಿಜಿಸ್ಟ್ರಾರ್‌ಗಳಿಗೂ ಬಲ

ಸಬ್ ರಿಜಿಸ್ಟ್ರಾರ್‌ಗಳಿಗೆ ದಸ್ತಾವೇಜು ನೋಂದಣಿ ವೇಳೆ ದಾಖಲೆ ಪತ್ರಗಳ ನೈಜತೆ ಪರಿಶೀಲನೆಗೆ ಕಾನೂನಿನಲ್ಲಿ ಅವಕಾಶ ಇರಲಿಲ್ಲ. ಇದೀಗ ನೋಂದಣಿ ನಿಯಮಾವಳಿ 1965ರ 22-ಬಿಗೆ ತಿದ್ದುಪಡಿ ತಂದು ಅವರಿಗೆ ಕಾನೂನು ಬಲ ನೀಡಲಾಗಿದೆ. ತಿರುಚಿದ ದಾಖಲೆ, ಆನ್‌ಲೈನ್‌ನಲ್ಲಿ ಸಿಗದೇ ಇರುವ ದಾಖಲೆ, ಕೇಂದ್ರ, ರಾಜ್ಯ ಸರ್ಕಾರ ಜಪ್ತಿ ಮಾಡಿರುವ ಅಥವಾ ಸರ್ಕಾರದ ಆಸ್ತಿ ಆಗಿದ್ದರೆ ರಿಜಿಸ್ಟ್ರೇಷನ್ ಮಾಡಲು ನಿರಾಕರಿಸಬಹುದು.
ಐಜಿಆರ್‌ಗೆ ಮೇಲ್ಮನವಿ
ಡಿಆರ್ ರದ್ದುಪಡಿಸಿರುವ ದಸ್ತಾವೇಜುಗಳ ಪಕ್ಷಗಾರರು, 30 ದಿನಗಳ ಒಳಗಾಗಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತರಿಗೆ (ಐಜಿಆರ್) ಮೇಲ್ಮನವಿ ಸಲ್ಲಿಸಬೇಕು. ಜಿಲ್ಲಾ ನೋಂದಣಾಧಿಕಾರಿ ಆದೇಶವನ್ನು ದೃಢೀಕರಿಸಬಹುದು ಅಥವಾ ರದ್ದುಪಡಿಸುವ ಅಧಿಕಾರ ಐಜಿಆರ್‌ಗೆ ಇದೆ. ಮೇಲ್ಮನವಿ ಸ್ವೀಕರಿಸಿ ವಿಚಾರಣೆ ನಡೆಸಿ ವಿಲೇ ಮಾಡಬೇಕೆಂದು ಡಿಆರ್‌ಗೆ ಸೂಚಿಸಲಾಗಿದೆ.
ಡಿಆರ್‌ಗೆ ಇರುವ ಅಧಿಕಾರ
-ತಿರುಚಿದ, ಕಾಯ್ದೆ ಉಲ್ಲಂಘನೆ ಆಗಿದ್ದರೆ ಸ್ವಯಂಪ್ರೇರಿತ ದೂರು ದಾಖಲಿಸಬಹುದು
-ಖೋಟಾ ದಾಖಲೆ ಪಕ್ಷಗಾರರಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯುವ ಅಧಿಕಾರ
-ಸಂತ್ರಸ್ತ ಸೂಕ್ತ ದಾಖಲೆ, ನೋಟಿಸ್‌ಗೆ ಹೇಳಿಕೆ ನೀಡದೇ ಇದ್ದರೆ ಅರ್ಜಿ ತಿರಸ್ಕಾರ
-ಪಕ್ಷಕಾರರು ವಿಚಾರಣೆಗೆ ಹಾಜರಾಗದಿದ್ದರೆ ಪರ್ಯಾಯ ದಿನಾಂಕ ನೀಡಬೇಕು
-ಆದೇಶ ಪ್ರತಿಯ ತಳಭಾಗದಲ್ಲಿ ಟಿಪ್ಪಣಿ ಬರೆದು ಸಹಿ ಮಾಡುವುದು ಕಡ್ಡಾಯ

ದೂರು ಸಲ್ಲಿಸಲು ನಿಯಮ ಪಾಲನೆ

-ಡಿ.21ರ ಬಳಿಕ ನೋಂದಾಯಿತ ದಸ್ತಾವೇಜುಗಳಿಗೆ ಅನ್ವಯ
-ಬಾಧಿತರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು, 1 ರಿಂದ 10 ಸಾವಿರ ರೂ. ಶುಲ್ಕ
-ಆಧಾರ್, ಪಾನ್‌ಗೆ ಸೀಮಿತವಾಗಿಲ್ಲ, ಯಾವುದೇ ನಕಲಿ ದಾಖಲೆ ಆಗಿರಬಹುದು
-ಸಿವಿಲ್ ದಾವೆ, ವ್ಯವಹಾರ ಇಲ್ಲವೆಂದು ಅಫಿಡವಿಟ್ ಸಲ್ಲಿಸಬೇಕು
-ನಕಲಿ ದಾಖಲೆ ಎಂದು ೋಷಿಸುವ ಕೋರ್ಟ್ ಪ್ರತಿ, ಪ್ರಮಾಣೀಕೃತ ಪ್ರತಿ ನೀಡಬೇಕು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net