ಜನರಿಗೆ ಉದ್ಯೋಗ ಕಲ್ಪಿಸಿ ಗುಳೆ ತಪ್ಪಿಸಿ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಬರ ಪರಿಸ್ಥಿತಿ ಕುರಿತು ಸಭೆ ನಡೆಸಿದ ಡಿಸಿಎಂ ಡಾ.ಜಿ. ಪರಮೇಶ್ವರ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಬರ ಪರಿಸ್ಥಿತಿ ಕುರಿತು ಸಭೆ ನಡೆಸಿದ ಡಿಸಿಎಂ ಡಾ.ಜಿ. ಪರಮೇಶ್ವರ
Published on
ಬೆಂಗಳೂರು: ಬರಗಾಲದ ಪರಿಣಾಮ ಉದ್ಯೋಗಕ್ಕಾಗಿ ಜನರು ಗುಳೆ ಹೋಗುತ್ತಿದ್ದಾರೆ. ಜಿಲ್ಲಾ ಪಂಚಾಯಿತಿ ಸಿಇಒಗಳು ಕೂಡಲೇ ವಿಬಿ ಜಿ ರಾಮ್ಜಿ ಯೋಜನೆಯಡಿ ಜನರಿಗೆ ಉದ್ಯೋಗ ಕೊಟ್ಟು ಗುಳೆ ತಪ್ಪಿಸಿ ಎಂದು ಡಿಸಿಎಂ ಡಾ. ಜಿ. ಪರಮೇಶ್ವರ ಸೂಚಿಸಿದರು.
ಸಿಎಂ ಅಧ್ಯಕ್ಷತೆಯಲ್ಲಿ ಬರ ಪರಿಸ್ಥಿತಿ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಕೃಷಿ, ಚಟುವಟಿಕೆ ಹಾಗೂ ಉದ್ಯೋಗ ಕುರಿತು ಡಿಸಿ, ಸಿಇಒಗಳ ಜತೆ ವೀಡಿಯೋ ಕಾನ್ಫರೆನ್ಸ್ ನಡೆಸಿ ಸಲಹೆ-ಸೂಚನೆ ನೀಡಿದರು.
ವಿಜಯಪುರ ತಾಲೂಕಿನಲ್ಲಿ ಜಿ ರಾಮ್ಜಿ ಯೋಜನೆಯಡಿ 20 ಗ್ರಾಮ ಪಂಚಾಯಿತಿಗಳಲ್ಲಿ ಮಾತ್ರ ಜನರಿಗೆ ಕೆಲಸ ನೀಡಲಾಗುತ್ತಿದೆ. ಬರಗಾಲ ಕಾರಣ ಜನ ಗುಳೆ ಹೊರಡಿದ್ದಾರೆ ಎಂದು ವರದಿ ಆಗುತ್ತಿದೆ. ಕೂಡಲೇ ಊರುಗಳಲ್ಲಿ ಕೆಲಸ ನೀಡಿ, ತಪ್ಪಿಸಬೇಕು ಎಂದರು.
ರಾಜ್ಯವ್ಯಾಪಿ ಯೋಜನೆಯಡಿ ತಿಂಗಳಿಗೆ 1.10 ಕೋಟಿ ಮಾನವ ದಿನ ಸೃಜಿಸಲು ಟಾರ್ಗೆಟ್ ನೀಡಲಾಗಿದೆ. ಈವರೆಗೂ ಕೆಲಸ ಶುರು ಮಾಡಿಲ್ಲ ಎಂದರೇ ಗುರಿ ಮುಟ್ಟಲು ಹೇಗೆ ಸಾಧ್ಯ ಎಂದು ಅಧಿಕಾರಿಗಳನ್ನು ಡಿಸಿಎಂ ತರಾಟೆಗೆ ತೆಗೆದುಕೊಂಡರು.
ಬಳ್ಳಾರಿ, ಬಾಗಲಕೋಟೆ, ಹಾವೇರಿ, ಚಾಮರಾಜನಗರ, ವಿಜಯಪುರ ಸೇರಿ ವಿವಿಧ ಜಿಲ್ಲೆಗಳು ಯೋಜನೆಯಡಿ ಜನರಿಗೆ ಕೆಲಸ ನೀಡುವಲ್ಲಿ ತೀರ ಹಿಂದೆ ಬಿದ್ದಿವೆ. ಬಹುತೇಕ ಜಿಲ್ಲೆಗಳಲ್ಲಿ ಆರಂಭವೇ ಆಗಿಲ್ಲ. ಚಾಮರಾಜನಗರ ಜಿಲ್ಲೆಯ ಅಂಕಿ-ಅಂಶ ಗಮನಿಸಿದರೆ ಆಶ್ಚರ್ಯವಾಗುತ್ತದೆ. ಜನ ತಮಿಳುನಾಡು, ಬೆಂಗಳೂರಿಗೆ ವಲಸೆ ಹೋಗುತ್ತಿದ್ದಾರೆ ಎಂದು ಕಿಡಿಕಾರಿದರು.
"

ರಾಜ್ಯದ 5,958 ಗ್ರಾಪಂಗಳ ಪೈಕಿ 2,443 ಕಡೆ ಜಿ ರಾಮ್‌ಜಿ ಯೋಜನೆಯಡಿ ಯಾವುದೇ ಕೆಲಸ ಶುರು ಮಾಡಿಲ್ಲ. 3515 ಗ್ರಾಪಂನಲ್ಲಿ 7,484 ಕಾಮಗಾರಿ ಆರಂಭವಾಗಿವೆ. 5.07 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ

— ಡಾ.ಜಿ. ಪರಮೇಶ್ವರ, ಉಪಮುಖ್ಯಮಂತ್ರಿ


ರೈತರ ಬಳಿ ಇರುವ ಮೇವಿನ ಬಣವೆಗಳನ್ನು ಆಧರಿಸಿ ಸರ್ಕಾರಕ್ಕೆ ಮಾಹಿತಿ ನೀಡುವುದು ಸರಿಯಲ್ಲ. ರೈತರು ಸಂಗ್ರಹಿಸಿರುವುದು ನಮಗೆ ಲಭ್ಯ ಆಗುವುದಿಲ್ಲ. ನಿಮ್ಮಲ್ಲಿ ಲಭ್ಯತೆ ಇರುವುದನ್ನು ಮಾತ್ರ ಹೇಳಿ. ಜಾನವಾರುಗಳಿಗೆ ಮೇವು ಬೇಕು ಎಂದಾಗ ಒದಗಿಸುತ್ತೀರಾ ಎಂಬುದು ಮುಖ್ಯವಾಗುತ್ತದೆ ಎಂದು ಅಧಿಕಾರಿಗಳಿಗೆ ಕಿವಿ ಹಿಂಡಿದರು.

ಬರ ಮತ್ತಷ್ಟು ಹೆಚ್ಚಬಹುದು

ಎಲ್ ನಿನೋ ಬಂದಾಗಲೆಲ್ಲ ಸಮುದ್ರದಲ್ಲಿ 2 ಡಿಗ್ರಿ ಉಷ್ಣಾಂಶ ಹೆಚ್ಚಾಗುತ್ತದೆ. ರಾಜ್ಯದಲ್ಲಿ 4 ರಿಂದ 6 ಡಿಗ್ರಿ ತಾಪಮಾನ ಏರಿಕೆ ಆಗುತ್ತಿದೆ. ರಾಜ್ಯದಲ್ಲಿ ಶೇ.68 ಮಳೆ ಕೊರತೆ ಆಗಿದೆ. ಕೆಲವು ಕಡೆ ಶೇ.48 ಕೊರತೆಯಾಗಿದೆ. ಅಂತರ್ಜಲ ಮಟ್ಟ 88 ತಾಲೂಕಿನಲ್ಲಿ ಶೇ.-4 ಕುಸಿದಿದೆ ಎಂದು ಅಂಕಿ ಅಂಶಗಳು ಹೇಳುತ್ತದೆ. ಜಲಾಶಯಗಳಲ್ಲಿ ನೀರಿನ ಮಟ್ಟ ತೀರ ಕುಸಿದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬಿಗಡಾಯಿಸಬಹುದು. ಕೊಳವೆಬಾವಿ ಕೊರೆದರೂ ನೀರು ಸಿಗುತ್ತದೆ ಎಂಬ ಭರವಸೆ ಇಲ್ಲವಾಗುತ್ತಿದೆ ಎಂದು ಪರಮೇಶ್ವರ ಆತಂಕ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net