ಅಭಿವೃದ್ಧಿ ಕಾಮಗಾರಿಗಳೇ ಶಿಕ್ಷೆಯಂತಾದಾಗ...| GBA road problem

ಚಾಮರಾಜಪೇಟೆಯ 5ನೇ ಮುಖ್ಯರಸ್ತೆಯಲ್ಲಿ ಕಟ್ಟಡ ಅವಶೇಷಗಳು ಹಾಕಿರುವುದು
ಚಾಮರಾಜಪೇಟೆಯ 5ನೇ ಮುಖ್ಯರಸ್ತೆಯಲ್ಲಿ ಕಟ್ಟಡ ಅವಶೇಷಗಳು ಹಾಕಿರುವುದು
Published on

ಪ್ರಮುಖ ಮುಖ್ಯಾಂಶಗಳು

  • ಮುಗಿಯುತ್ತಿಲ್ಲ ಚಾಮರಾಜಪೇಟೆ ಗೋಳು
  • ಹಲವೆಡೆ ನಿಧಾನಗತಿಯ ಕಾಮಗಾರಿಯಿಂದ ನಾಗರಿಕರಿಗೆ ಸಮಸ್ಯೆ
  • ವಾಹನ ಸಂಚಾರದ ವೇಳೆ ಧೂಳಿನ ಮಜ್ಜನ
ಪವನ್​ ಆಚಾರ್ಯ ನೀರ್ಚಾಲು ಬೆಂಗಳೂರು
ಚಾಮರಾಜಪೇಟೆ ಈಗ ಹಿಂದಿನಂತಿಲ್ಲ. ಅಲ್ಲಿಗೆ ತೆರಳಲು ಅಥವಾ ಅಲ್ಲಿಂದ ಹಾದುಹೋಗುವ ಮುನ್ನ ವಾಹನಸವಾರರು ಹಲವು ಬಾರಿ ಯೋಚಿಸುವಂತಾಗಿದೆ. ಕಾರಣ, ರಸ್ತೆ ಕಾಮಗಾರಿಗಳ ಗುಮ್ಮ! ಮುಖ್ಯರಸ್ತೆ, ಅಡ್ಡರಸ್ತೆ ಎನ್ನದೆ ಎಲ್ಲೆಂದರಲ್ಲಿ ಕಾಮಗಾರಿ ಕೈಗೆತ್ತಿಕೊಂಡಿರುವ ಕಾರಣ ನಾಗರಿಕರಿಗೆ ಅಡಿಗಡಿಗೂ ಸಮಸ್ಯೆ ಎದುರಿಸುವಂತಾಗಿದೆ.
ಪಂಪ ಮಹಾಕವಿ ರಸ್ತೆಯಲ್ಲಿ ವೈಟ್​ ಟಾಪಿಂಗ್​ ಕಾಮಗಾರಿ ಮುಗಿದು ನಿರಾಳತೆಯ ನಿಟ್ಟುಸಿರು ಬಿಡುತ್ತಲೇ ಹಲವೆಡೆ ಏಕಕಾಲಕ್ಕೆ ಕಾಮಗಾರಿ ಆರಂಭಿಸಲಾಗಿದೆ. ಉತ್ತಮ ಮೂಲಸೌಕರ್ಯವುಳ್ಳ ಬಡಾವಣೆ ಎಲ್ಲರ ಅಭಿಲಾಷೇಯೇ ಆದರೂ ಅದರ ಸಾಕಾರಕ್ಕಾಗಿ ಜನರಿಗೆ ಈ ಪರಿ "ಶಿಕ್ಷೆ' ನೀಡಬೇಕೇ ಎಂಬ ಪ್ರಶ್ನೆ ಎದ್ದಿದೆ. ಚಾಮರಾಜಪೇಟೆ ಸಂಪರ್ಕಿಸುವ ಸುಲ್ತಾನ್​ ರಸ್ತೆ, ರ್ಸಿಸಿ ರಸ್ತೆ ಹಾಗೂ ಪ್ರಮುಖ ಅಡ್ಡರಸ್ತೆಗಳಲ್ಲಿ ಒಳಚರಂಡಿ, ರಸ್ತೆ, ಮಳೆನೀರಿನ ಚರಂಡಿ, ಬೆಸ್ಕಾಂ, ಜಲಮಂಡಳಿ ಕಾಮಗಾರಿಗಳು ನಡೆಯುತ್ತಿವೆ. ಈ ಪ್ರದೇಶಗಳಲ್ಲಿ ಓಡಾಡುವಾಗ ಚಕ್ರವ್ಯೂಹದಲ್ಲಿ ಸಿಲುಕಿದ ಅನುಭವವಾಗುತ್ತದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
ಮೈಸೂರು ಮುಖ್ಯರಸ್ತೆಯಿಂದ ಚಾಮರಾಜಪೇಟೆ ಸಂಪರ್ಕಿಸುವ ರ್ಸಿಸಿ ರಸ್ತೆಯನ್ನು 4ನೇ ಕ್ರಾಸ್​ವರೆಗೆ ವೈಟ್​ ಟಾಪಿಂಗ್​ ಕಾಮಗಾರಿಗಾಗಿ ಸಂಪೂರ್ಣ ಬಂದ್​ ಮಾಡಲಾಗಿದೆ. 5ನೇ ಮುಖ್ಯರಸ್ತೆಯಲ್ಲಿನ ಕೆಲಸ ಒಂದೂವರೆ ವರ್ಷವಾದರೂ ಮುಗಿದಿಲ್ಲ. ರಸ್ತೆಬದಿ ಅಲ್ಲಲ್ಲಿ ಮಣ್ಣಿನ ಗುಡ್ಡೆಗಳು ಕಾಣಿಸುತ್ತಿದ್ದು, ಕಾಮಗಾರಿಗಳು ಜನರಿಗೆ ತಲೆಬೇನೆ ತಂದೊಡ್ಡಿವೆ.
5ನೇ ಮುಖ್ಯರಸ್ತೆಯಲ್ಲಿ ಕಾಮಗಾರಿಯಿಂದಾಗಿ ಶಾಸಕರ ಕಚೇರಿ ಸಮೀಪದಿಂದ ಪ್ರಾರಂಭಿಸಿ ಟಿ.ಆರ್​.ಮಿಲ್​ ಕಡೆಗಿನ ರಸ್ತೆಯಲ್ಲಿ ಸಂಚಾರ ನಿಷೇಧಿಸಲಾಗಿದೆ. ಇತ್ತೀಚೆಗೆ ದ್ವಿಚಕ್ರವಾಹನ, ಆಟೋ, ಕಾರು ಕಿರಿದಾದ ಮಣ್ಣಿನ ಹಾದಿಯಲ್ಲಿ ಸಂಚರಿಸುತ್ತಿದರೂ, ಅಲ್ಲಲ್ಲಿ ಗುಡ್ಡೆಹಾಕಿರುವ ಮಣ್ಣಿನ ರಾಶಿ, ಕಾಂಕ್ರೀಟ್​ ಅವಶೇಷಗಳು, ಕಾಮಗಾರಿ ನಿಮಿತ್ತ ತೋಡಿರುವ ಗುಂಡಿಗಳು ಸವಾರರಿಗೆ ಕಂಟಕವಾಗಿವೆ.
ನಿತ್ಯವೂ ಸಂಚಾರ ಸಿಕ್ಕು: ಚಾಮರಾಜಪೇಟೆಯ ವಿವಿಧ ಭಾಗಗಳಲ್ಲಿ ದಿನವೂ ಸಂಚಾರ ಸಿಕ್ಕು ಸಾಮಾನ್ಯ. ಕಂದಕಗಳ ಮಧ್ಯೆ ಜೀವಭಯದಲ್ಲಿ ಸಂಚರಿಸುವುದಕ್ಕಿಂತ ಈ ಭಾಗಕ್ಕೆ ತಲೆಹಾಕದಿರುವುದೇ ಉತ್ತಮ ಎನ್ನುತ್ತಾರೆ "ಅನುಭವಿ'ಗಳು. ಕಾಮಗಾರಿ ಪ್ರಾರಂಭವಾಗಿ ವರ್ಷಗಳೇ ಸಂದರೂ ವೇಗ ಪಡೆಯುತ್ತಿಲ್ಲ, ಅಧಿಕಾರಿಗಳಿಗೆ ಮುಗಿಸುವ ಯೋಚನೆಯೇ ಇಲ್ಲ ಎಂಬ ಆರೋಪ ಕೇಳಿಬಂದಿದೆ. ಜನಪ್ರತಿನಿಧಿಗಳಿಗೆ, ಜಿಬಿಎ ಅಧಿಕಾರಿಗಳಿಗೆ ಎಷ್ಟೇ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳಿಯರು.
"

ಈ ಭಾಗದ ರಸ್ತೆಯಲ್ಲಿ ಓಡಾಡುವುದು ತುಂಬ ಕಷ್ಟವಾಗಿದೆ. ಸಂಚಾರ ಸಿಕ್ಕಿನ ಮಧ್ಯೆ ಗುಂಡಿಗಳನ್ನು ತಪ್ಪಿಸಿ ಕ್ರಮಿಸಬೇಕಿದೆ. ಸ್ವಲ್ಪ ಮಳೆ ಬಂದರೆ ಸಾಕು, ಕೆಸರುಮಯ ರಸ್ತೆಯಲ್ಲಿ ಸಾಗಲು ಸಾಧ್ಯವೇ ಇಲ್ಲ. ಎಲ್ಲಿ ನೋಡಿದರೂ ಬ್ಲಾಕ್​, ಬ್ಲಾಕ್​! ಚಾಮರಾಜಪೇಟೆಯ ಭಾಗದಲ್ಲಿ ಸರಾಗವಾಗಿ ಸಂಚರಿಸಲು ಒಂದು ರಸ್ತೆಯೂ ಇಲ್ಲ.

"

ನಮ್ಮ ಅಂಗಡಿ ಮುಂಭಾಗ ಸಿಮೆಂಟ್​ ಹಾಕಿದ್ದರೂ ಅದನ್ನು ಅಗೆಯಲಾಗಿದೆ. ಕಾಮಗಾರಿ ಪ್ರಾರಂಭವಾದ ಬಳಿಕ ವ್ಯಾಪಾರ ಕುಂಠಿತವಾಗಿದೆ. ಈಗ ಕಾಮಗಾರಿಯೂ ಸರಿಯಾಗಿ ನಡೆಯುತ್ತಿಲ್ಲ. ಜನವರಿಯಲ್ಲಿ ಮತ್ತೆ ರಸ್ತೆ ಅಗೆಯುತ್ತಾರಂತೆೆ!

"

ಹಿರಿಯರು ಮತ್ತು ಮಕ್ಕಳಿಗೆ ಈ ರಸ್ತೆಗಳಲ್ಲಿ ಓಡಾಡುವುದು ತುಂಬ ಕಷ್ಟವಾಗಿದೆ. ಪಾದಚಾರಿಗಳ ಓಡಾಟಕ್ಕೆ ಸರಿಯಾದ ಸ್ಥಳವೇ ಇಲ್ಲ. ಎಲ್ಲೆಂದರಲ್ಲಿ ವಾಹನ ಚಲಾಯಿಸುತ್ತಾರೆ. ಮನೆಯಿಂದ ಹೊರಗೆ ಬಂದರೆ ಧೂಳಿನ ಮಜ್ಜನ ಖಚಿತ.

"

ರಸ್ತೆ ಕಿತ್ತಾಕುವುದು ಬೇಗ ಆದರೆ, ಅದೇ ರಸ್ತೆಯ ನಿರ್ಮಾಣ ನಿಧಾನ ಇದು ಇಲ್ಲಿಯ ಪರಿಸ್ಥಿತಿ. ಅಧಿಕಾರಿಗಳನ್ನು ಕೇಳಿದರೆ 3 ದಿನದಲ್ಲಿ ಸರಿ ಮಾಡುತ್ತೇವೆ ಎನ್ನುತ್ತಾರೆ. ಆದರೂ, ಯಾವ ಕೆಲಸವೂ ಅಗುತ್ತಿಲ್ಲ. ಮತ್ತೆ ಮಳೆಯಿಂದ ನಿಧಾನವಾಗುತ್ತದೆ ಎಂದು ಸಬೂಬು ಹೇಳುತ್ತಾರೆ.

"

ಚಾಮರಾಜಪೇಟೆಯಲ್ಲಿ ಒಂದು ಕಡೆ ಕಾಮಗಾರಿಗಳು ಕಿರಿಕಿರಿ ಕೊಡುತ್ತಿದ್ದರೆ, ಇನ್ನೊಂದೆಡೆ ಮಾಲಿನ್ಯ ಹೆಚ್ಚುತ್ತ್ತಿದೆ. ಧೂಳು, ಕೊಳಚೆ ನೀರು, ತ್ಯಾಜ್ಯ ಹೀಗೆ ಎಲ್ಲ ಕಡೆಯೂ ಮಾಲಿನ್ಯಮಯವಾಗಿದೆ. ಇದರಿಂದ ಇನ್ನಷ್ಟು ಸಮಸ್ಯೆಗಳು ಉಲ್ಬಣವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net