ಕಾವೇರಿ ನೀರಿನ ಮೇಲಿನ ಅವಲಂಬನೆಗೆ ಬ್ರೇಕ್​

ಜಲಮಂಡಳಿ
ಜಲಮಂಡಳಿ
Published on

ಪ್ರಮುಖ ಮುಖ್ಯಾಂಶಗಳು

  • ಶುದ್ಧೀಕರಿಸಿದ ನೀರಿನ ಸಾಮರ್ಥ್ಯ ದುಪ್ಪಟ್ಟು
  • 2029ರ ವೇಳೆಗೆ 2,511 ಎಂಎಲ್​ಡಿ ಸಾಮರ್ಥ್ಯ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ವೇಗವಾಗಿ ಹೆಚ್ಚುತ್ತಿರುವ ಜನಸಂಖ್ಯೆ, ವಿಸ್ತರಿಸುತ್ತಿರುವ ಐಟಿ ವಲಯದಿಂದ ಬೆಂಗಳೂರಿನಲ್ಲಿ ನೀರಿನ ಬೇಡಿಕೆ ದಿನದಿನಕ್ಕೆ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ನೀರಿನ ಮೇಲಿನ ಅವಲಂಬನೆ ಕಡಿಮೆ ಮಾಡುವ ಯೋಜನೆಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್​ಎಸ್​ಬಿ) ಮುಂದಾಗಿದೆ.
ಮುಂದಿನ ಮೂರು ವರ್ಷಗಳಲ್ಲಿ ನಗರದ ಒಳಚರಂಡಿ ನೀರು ಸಂಸ್ಕರಣಾ ಸಾಮರ್ಥ್ಯವನ್ನು ಸುಮಾರು ದುಪ್ಪಟ್ಟುಗೊಳಿಸುವ ಗುರಿ ಹೊಂದಿದೆ. ಪ್ರಸ್ತುತ ಜಲಮಂಡಳಿ ಒಟ್ಟು 34 ಒಳಚರಂಡಿ ನೀರು ಸಂಸ್ಕರಣಾ ಘಟಕಗಳನ್ನು (ಎಸ್​ಟಿಪಿ) ನಿರ್ವಹಿಸುತ್ತಿದ್ದು, ಇವುಗಳ ಒಟ್ಟು ಸಾಮರ್ಥ್ಯ 1,348 ಮಿಲಿಯನ್​ ಲೀಟರ್​ ಪ್ರತಿದಿನ (ಎಂಎಲ್​ಡಿ) ಇದೆ. ಇದಕ್ಕೆ ಸೇರ್ಪಡೆಯಾಗಿ 1,163 ಎಂಎಲ್​ಡಿ ಸಾಮರ್ಥ್ಯದ 45 ಹೊಸ ಎಸ್​ಟಿಪಿಗಳನ್ನು ಈಗಾಗಲೇ ನಿರ್ಮಿಸಲಾಗಿದ್ದು, 2029ರ ಸೆಪ್ಟೆಂಬರ್​ ವೇಳೆಗೆ ಅವು ಕಾರ್ಯಾರಂಭಿಸಲಿವೆ. ಇದರಿಂದ ನಗರದ ಒಟ್ಟು ಸಂಸ್ಕರಣಾ ಸಾಮರ್ಥ್ಯ 2,511 ಎಂಎಲ್​ಡಿಗೆ ಏರಿಕೆಯಾಗಲಿದೆ.
ನಗರದಲ್ಲಿ ಬೇಸಿಗೆ ವೇಳೆ ಎದುರಾಗುವ ನೀರಿನ ಬಿಕ್ಕಟ್ಟಿಗೆ ದೀರ್ಘಕಾಲೀನ ಪರಿಹಾರ ಕಂಡುಕೊಳ್ಳುವುದರ ಜತೆಗೆ, ಶುದ್ಧ ಕುಡಿಯುವ ನೀರನ್ನು ಕೈಗಾರಿಕಾ ಬಳಕೆಗೆ ವ್ಯಯವಾಗದಂತೆ ತಡೆಯುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಕೈಗಾರಿಕೆಗಳು, ನಿಮಾರ್ಣ ವಲಯ, ವಾಣಿಜ್ಯ ಸಂಸ್ಥೆಗಳು ಸೇರಿ ಕುಡಿಯುವ ಗುಣಮಟ್ಟದ ನೀರಿನ ಅಗತ್ಯವಿಲ್ಲದ ಎಲ್ಲ ಕ್ಷೇತ್ರಗಳಲ್ಲಿ ಸಂಸ್ಕರಿತ ನೀರಿನ ಬಳಕೆಯನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಮಂಡಳಿ ಕಾಯೋರ್ನ್ಮುಖವಾಗಿದೆ.
ಹೆಚ್ಚುವರಿ ಪ್ರಮಾಣದಲ್ಲಿ ಲಭ್ಯವಾಗುವ ಸಂಸ್ಕರಿತ ನೀರನ್ನು ಮುಖ್ಯವಾಗಿ ಕೈಗಾರಿಕೆಗಳಿಗೆ ಪೂರೈಸಲಾಗುವುದು. ಇದರಿಂದ ಕಾವೇರಿ ನೀರಿನ ಮೇಲಿನ ಒತ್ತಡ ಕಡಿಮೆಯಾಗಲಿದ್ದು, ನಗರದ ಕೆರೆಗಳಿಗೆ ಸಂಸ್ಕರಿತ ನೀರು ಹರಿಸುವ ಮೂಲಕ ಅಂತರ್ಜಲ ಮಟ್ಟವನ್ನೂ ಹೆಚ್ಚಿಸಲು ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರದಲ್ಲಿ ಶೀಘ್ರದಲ್ಲೇ ಡೇಟಾ ಸೆಂಟರ್​ಗಳು ಸ್ಥಾಪನೆಯಾಗಲಿದ್ದು, ಅವುಗಳಿಗೆ ಅಪಾರ ಪ್ರಮಾಣದ ನೀರಿನ ಅಗತ್ಯವಿರುತ್ತದೆ. ಈ ಹೆಚ್ಚುವರಿ ಬೇಡಿಕೆಯನ್ನು ಸಂಸ್ಕರಿತ ನೀರಿನ ಮೂಲಕ ಪೂರೈಸುವುದರಿಂದ ಕುಡಿಯುವ ನೀರಿನ ಮೇಲೆ ಹೆಚ್ಚುವರಿ ಒತ್ತಡ ಬೀಳುವುದಿಲ್ಲ ಎಂಬುದು ಮಂಡಳಿಯ ಲೆಕ್ಕಾಚಾರವಾಗಿದೆ.

ಸಂಸ್ಕರಿತ ನೀರು ಬಳಕೆ ಅಭ್ಯಾಸವಾಗಲಿ

ಸಂಸ್ಕರಿತ ನೀರಿನ ಬಳಕೆಯನ್ನು ಸಾಧ್ಯವಾದಷ್ಟು ಹೆಚ್ಚಿಸುವುದೇ ಮುಂದಿನ ದಾರಿ. ಕೈಗಾರಿಕೆ, ನಿಮಾರ್ಣ ವಲಯ ಸೇರಿ ಎಲ್ಲ ಕ್ಷೇತ್ರಗಳು ಕುಡಿಯುವ ನೀರಿನ ಬದಲು ಸಂಸ್ಕರಿತ ನೀರನ್ನು ಬಳಸುವ ಅಭ್ಯಾಸ ರೂಢಿಸಿಕೊಳ್ಳಬೇಕು. ಇದು ಕೇವಲ ಬೇಸಿಗೆ ಸಮಸ್ಯೆಗೆ ಪರಿಹಾರವಲ್ಲ; ಶಾಶ್ವತ ನೀರಿನ ನಿರ್ವಹಣೆಯ ಭಾಗವಾಗಬೇಕು ಎಂದು ಜಲಮಂಡಳಿ ಅಧ್ಯಕ್ಷೆ ಎನ್​. ಮಂಜುಳಾ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net