ನಗರದ ತ್ಯಾಜ್ಯನೀರು ಶೇ.100 ಸಂಸ್ಕರಣೆ ಗುರಿ

ಜಲಮಂಡಳಿ
ಜಲಮಂಡಳಿ
Published on

ಪ್ರಮುಖ ಮುಖ್ಯಾಂಶಗಳು

  • ಎಸ್​ಟಿಪಿಗಳ ಅಭಿವೃದ್ಧಿಪಡಿಸಲು ಬಿಡಬ್ಲ್ಯುಎಸ್​ಎಸ್​ಬಿ ಯೋಜನೆ
ಬೆಂಗಳೂರು: ನಗರದಲ್ಲಿ ನಿತ್ಯ ಉತ್ಪತ್ತಿಯಾಗುವ 2,580 ದಶಲಕ್ಷ ಲೀಟರ್​ (ಎಂಎಲ್​ಡಿ) ಒಳಚರಂಡಿ ನೀರಿನಲ್ಲಿ ಪ್ರಸ್ತುತ ಶೇ.50 ಮಾತ್ರ ಸಂಸ್ಕರಣೆಯಾಗುತ್ತಿದ್ದು, 2029ರ ಡಿಸೆಂಬರ್​ ವೇಳೆಗೆ ಪ್ರತಿಯೊಂದು ಹನಿ ತ್ಯಾಜ್ಯ ನೀರನ್ನೂ ಸಂಸ್ಕರಿಸುವ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ.
ಈ ಹಿಂದೆ 2020, 2023 ಹಾಗೂ 2025ರ ಗಡುವು ನಿಗದಿಯಾಗಿದ್ದರೂ ಗುರಿ ಸಾಧಿಸಲು ಸಾಧ್ಯವಾಗಿರಲಿಲ್ಲ. ಇದೀಗ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್​ಎಸ್​ಬಿ) ಹಂತ ಹಂತವಾಗಿ ಕೊಳಚೆ ನೀರು ಸಂಸ್ಕರಣೆಯ ಹೊಸ ಘಟಕಗಳನ್ನು (ಎಸ್​ಟಿಪಿ) ನಿರ್ಮಿಸುವ ಹಾಗೂ ಅಸ್ತಿತ್ವದಲ್ಲಿರುವ ಘಟಕಗಳ ಸಾಮರ್ಥ್ಯ ಹೆಚ್ಚಿಸುವ ಯೋಜನೆ ರೂಪಿಸಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ (ಕೆಎಸ್​ಪಿಸಿಬಿ) ಏರ್ಪಡಿಸಿದ್ದ ಸಭೆಯಲ್ಲಿ ಜಲಮಂಡಳಿ ಸಲ್ಲಿಸಿದ ಅನುಷ್ಠಾನ ವರದಿ ಪರಿಶೀಲಿಸಿದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ, ಎಲ್ಲ ಉದ್ದೇಶಿತ ಎಸ್​ಟಿಪಿಗಳನ್ನು 2029ರ ಡಿಸೆಂಬರ್​ ಒಳಗೆ ನಿರ್ಮಿಸಿ ಕಾರ್ಯಾರಂಭ ಮಾಡುವಂತೆ ಕ್ರಮ ಕೈಗೊಳ್ಳಬೇಕು. ಸಂಸ್ಕರಣೆಯಾಗದ ನೀರು ಕಾವೇರಿ ನದಿಗೆ ಸೇರುವ ಕುರಿತು ಆತಂಕ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಗಡುವು ನಿಗದಿಪಡಿಸಿದೆ ಎಂದರು.
ಬೆಂಗಳೂರಿನ ತಂತ್ರಜ್ಞಾನ ಪಾರ್ಕ್​, ಹೋಟೆಲ್​, ಶಿಕ್ಷಣ ಸಂಸ್ಥೆ, ವಾಣಿಜ್ಯ ಹಾಗೂ ವಸತಿ ಸಮುಚ್ಚಯಗಳಲ್ಲಿರುವ ಖಾಸಗಿ ಎಸ್​ಟಿಪಿಗಳನ್ನೂ ಪರಿಶೀಲಿಸಿ ರಾಷ್ಟ್ರೀಯ ಮಾನದಂಡ ಪಾಲನೆ ಆಗುತ್ತಿರುವುದನ್ನು ಖಚಿತಪಡಿಸಿಕೊಳ್ಳುವಂತೆ ಕೆಎಸ್​ಪಿಸಿಬಿಗೆ ಸೂಚಿಸಲಾಗಿದೆ. ಎಸ್​ಟಿಪಿಗಳ ಕಾರ್ಯನಿರ್ವಹಣೆ ಹಾಗೂ ಸಂಸ್ಕರಿತ ನೀರಿನ ಗುಣಮಟ್ಟವನ್ನು ನೈಜ ಸಮಯದಲ್ಲಿ ತೋರಿಸುವ ಕೇಂದ್ರೀಕೃತ ಡ್ಯಾಶ್​ಬೋರ್ಡ್​ ಅಭಿವೃದ್ಧಿಪಡಿಸುವಂತೆಯೂ ಸಚಿವರು ನಿರ್ದೇಶಿಸಿದರು.
30 ದಿನದಲ್ಲಿ ಲೋಪ ಸರಿಪಡಿಸಿ
ಜಲಮಂಡಳಿ ನಿರ್ವಹಣೆಯ ಕೆಲವು ಎಸ್​ಟಿಪಿಗಳು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್​ಜಿಟಿ) ಹಾಗೂ ಕೆಎಸ್​ಪಿಸಿಬಿ ನಿಗದಿಪಡಿಸಿರುವ ಮಾನದಂಡಗಳನ್ನು ಪೂರೈಸದಿರುವುದು ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ. ಈ ಘಟಕಗಳಲ್ಲಿನ ಲೋಪಗಳನ್ನು 30 ದಿನದೊಳಗೆ ಸರಿಪಡಿಸಿ ಮಾನದಂಡಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುವಂತೆ ಸರ್ಕಾರ ಸೂಚಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net