ನೀರಿನ ಕಳ್ಳತನ, ಸೋರಿಕೆಗೆ ಎ.ಐ.-ರೋಬಾಟಿಕ್​ ಅಸ್ತ್ರ|bwssb

ಜಲಮಂಡಳಿ
ಜಲಮಂಡಳಿ
Published on

ಪ್ರಮುಖ ಮುಖ್ಯಾಂಶಗಳು

  • ಜಲಮಂಡಳಿಯಿಂದ ನೂತನ ತಂತ್ರಜ್ಞಾನದ ಮೊರೆ
  • ಸ್ಟಾರ್ಟಪ್​ಗಳಿಗೆ ಅವಕಾಶ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಗರದಲ್ಲಿ ನೀರಿನ ಕಳ್ಳತನ, ಪೈಪ್​ಲೈನ್​ ಸೋರಿಕೆ ಹಾಗೂ ಆದಾಯ ತರದ ನೀರಿನ (ಎನ್​ಆರ್​ಡಬ್ಲ್ಯು) ಪ್ರಮಾಣ ತಗ್ಗಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್​ಎಸ್​ಬಿ) ಕೃತಕ ಬುದ್ಧಿಮತ್ತೆ (ಎಐ) ಹಾಗೂ ರೋಬಾಟಿಕ್​ ತಂತ್ರಜ್ಞಾನಗಳ ಮೊರೆಹೋಗಿದೆ. ಈ ನಿಟ್ಟಿನಲ್ಲಿ "ಸ್ಮಾರ್ಟ್​ ಟೆರಾ' ಮತ್ತು "ಸೊಲಿನಾಸ್​' ಎಂಬ ನವೋದ್ಯಮ ಸಂಸ್ಥೆಗಳೊಂದಿಗೆ ಜಂಟಿ ಅಧ್ಯಯನ ನಡೆಸಲು ಮಂಡಳಿ ಮುಂದಾಗಿದೆ.
ಟೈಟಾನ್​ ಡಿಸೈನ್​ ಇಂಪ್ಯಾಕ್ಟ್​ ಅವಾರ್ಡ್ಸ್​ 2.0 ಯೋಜನೆಯಡಿ ಆಯ್ಕೆಯಾಗಿರುವ ಈ ಅಧ್ಯಯನಕ್ಕೆ ಟೈಟಾನ್​ ಕಂಪನಿ ಲಿಮಿಟೆಡ್​ ಅನುದಾನ ನೀಡಲಿದ್ದು, ವಿಲ್​ಗ್ರೋ ಇನ್​ಕ್ಯುಬೇಷನ್​ ಹಾಗೂ ವೆಲ್​ ಲ್ಯಾಬ್ಸ್​ ತಾಂತ್ರಿಕ ಪಾಲುದಾರರಾಗಿ ಕಾರ್ಯನಿರ್ವಹಿಸಲಿವೆ. ಒಂದು ವರ್ಷದ ಅವಧಿಯಲ್ಲಿ ನಡೆಯಲಿರುವ ಈ ಯೋಜನೆ ಜಲಮಂಡಳಿಗೆ ಯಾವುದೇ ಆರ್ಥಿಕ ಹೊರೆ ಇಲ್ಲದೆ ಅನುಷ್ಠಾನಗೊಳ್ಳಲಿದ್ದು, ಅಗತ್ಯವಿರುವ ಉತ್ಖನನ, ಪೈಪ್​ ದುರಸ್ತಿ ಮತ್ತು ಬದಲಿ ಕಾಮಗಾರಿಗಳನ್ನು ಮಾತ್ರ ಮಂಡಳಿ ನಿರ್ವಹಿಸಲಿದೆ.
ಯೋಜನೆಯಡಿ ಎ.ಐ. ಆಧಾರಿತ ವಿಶ್ಲೇಷಣೆಯ ಮೂಲಕ ನೀರು ಸೋರಿಕೆಯಾಗುವ ಹಾಗೂ ಅಪಾಯದಲ್ಲಿರುವ ಪೈಪ್​ಲೈನ್​ಗಳನ್ನು ಮುಂಚಿತವಾಗಿ ಗುರುತಿಸಲಾಗುತ್ತದೆ. ಸೊಲಿನಾಸ್​ ಸಂಸ್ಥೆಯು ಪೈಪ್​ಗಳ ಒಳಗೆ ರೋಬಾಟ್​ ಕಳುಹಿಸಿ ತಪಾಸಣೆ ನಡೆಸಲಿದ್ದು, "ಸ್ಮಾರ್ಟ್​ ಟೆರಾ' ಸಂಸ್ಥೆಯು ಶಬ್ದ ತರಂಗ ತಂತ್ರಜ್ಞಾನದ ಮೂಲಕ ಉತ್ಖನನವಿಲ್ಲದೆ ಸೋರಿಕೆಯ ನಿಖರ ಸ್ಥಳ ಪತ್ತೆಹಚ್ಚಲಿದೆ.
ಈ ತಂತ್ರಜ್ಞಾನದಿಂದ ನೀರು ಪೂರೈಕೆ, ಮೀಟರ್​ ಬಳಕೆ, ಸೋರಿಕೆ ಹಾಗೂ ನೀರಿನ ನಷ್ಟದ ಮೇಲೆ ನಿಗಾವಹಿಸಲು ಸಾಧ್ಯವಾಗಲಿದ್ದು, ಜಲಮಂಡಳಿಯ ಆದಾಯ ಹೆಚ್ಚಳಕ್ಕೂ ನೆರವಾಗಲಿದೆ. ಅಲ್ಲದೆ, ನಗರದಲ್ಲಿ ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣ ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುವ ನಿರೀಕ್ಷೆ ಇದೆ.
ನವೀನ ತಂತ್ರಜ್ಞಾನ ಅಭಿವೃದ್ಧಿಪಡಿಸಿರುವ ಯುವ ಸ್ಟಾರ್ಟಪ್​ಗಳಿಗೆ ಜಲಮಂಡಳಿಯ ಮೂಲಸೌಕರ್ಯಗಳನ್ನು "ಟೆಸ್ಟ್​ ಬೆಡ್​' ಆಗಿ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ. ದತ್ತಾಂಶ ಆಧಾರಿತ ವೈಜ್ಞಾನಿಕ ವಿಧಾನಗಳು ಮತ್ತು ಡಿಜಿಟಲ್​ ವರ್ಕ್​ಫ್ಲೋಗಳ ಮೂಲಕ ನಗರ ನೀರು ನಿರ್ವಹಣೆಯಲ್ಲಿ ಮಹತ್ತರ ಬದಲಾವಣೆ ತರಲು ಸಾಧ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಯೋಗಿಕ ಅಧ್ಯಯನಕ್ಕಾಗಿ ಆದ್ಯತೆಯ ವಲಯಗಳನ್ನು ಗುರುತಿಸಿ ಶೀಘ್ರದಲ್ಲೇ ಆರಂಭಿಕ ಸಮೀಕ್ಷೆಗೆ ಅನುಮತಿ ನೀಡಲಾಗುವುದು. ನೀರಿನ ಸೋರಿಕೆಯಿಂದ ಉಂಟಾಗುತ್ತಿರುವ ಆರ್ಥಿಕ ನಷ್ಟ ತಡೆದು, ಪೈಪ್​ಲೈನ್​ ದೋಷಗಳಿಂದ ನೀರು ಕಲುಷಿತಗೊಳ್ಳುವುದನ್ನು ತಪ್ಪಿಸಲಾಗುವುದು.

— ಡಾ.ರಾಮ್​ ಪ್ರಸಾತ್​ ಮನೋಹರ್​, ಜಲಮಂಡಳಿ ಅಧ್ಯಕ್ಷ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net