ತೆನೆ ಹೊತ್ತ ಮಹಿಳೆ ಹಿಂದೆ ಚಕ್ರ

ಜೆಡಿಎಸ್ ಚಿಹ್ನೆ
ಜೆಡಿಎಸ್ ಚಿಹ್ನೆ
Published on
ಬೆಂಗಳೂರು: ಜನತಾದಳ (ಜಾತ್ಯತೀತ) ಪಕ್ಷದ ಅಧಿಕೃತ ಚಿಹ್ನೆಗೆ ಹೆಚ್ಚುವರಿಯಾಗಿ ಚಕ್ರ ಸೇರಿಸಲು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ.
ತೆನೆ ಹೊತ್ತ ಮಹಿಳೆ ಪ್ರಸ್ತುತ ಅಧಿಕೃತ ಚಿಹ್ನೆ ಆಗಿದೆ. ಇವಿಎಂ ಯಂತ್ರದಲ್ಲಿ ಮತದಾರರಿಗೆ ಸ್ಪಷ್ಟವಾಗಿ ಕಾಣುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಮಹಿಳೆ ಚಿಹ್ನೆಯ ಹಿಂದೆ ಚಕ್ರ ಸೇರಿಸಿ ಸ್ಪಷ್ಟವಾಗಿ ಕಾಣುವಂತೆ ಮಾಡಲು ವರಿಷ್ಠರು ಸಲಹೆ ನೀಡಿದ್ದಾರೆ.
ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲು ಸಿದ್ಧತೆ ನಡೆಸಲಾಗಿದೆ ಎಂದು ವಿಧಾನ ಪರಿಷತ್‌ನ ಜೆಡಿಎಸ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಮಾಹಿತಿ ನೀಡಿದ್ದಾರೆ. ಚಿಹ್ನೆಗೆ ಚಕ್ರ ಸೇರ್ಪಡೆಯಿಂದ ಪಕ್ಷಕ್ಕೆ ಸಕಾರಾತ್ಮಕ ಬಲ ಕೊಟ್ಟು ಸ್ಥಳೀಯ ಸಂಸ್ಥೆ, ಜಿಬಿಎ ಚುನಾವಣೆಯಲ್ಲಿ ಹೊಸ ಚೈತನ್ಯ ಕೊಡಲು ಜೆಡಿಎಸ್ ತಯಾರಿಯಲ್ಲಿದೆ.
ಈ ಹಿಂದೆ ಜೆಡಿಎಸ್ ರೈತರು ಬಳಸುವ ಟ್ರ್ಯಾಕ್ಟರ್ ಚುನಾವಣಾ ಚಿಹ್ನೆಯಾಗಿ ಅಳವಡಿಸಿಕೊಂಡಿತ್ತು. ಟ್ರ್ಯಾಕ್ಟರ್ ಹೋಲುವ ರೋಡ್ ರೋಲರ್, ಜೀಪು, ರೈಲು ಇಂಜಿನ್‌ಗಳನ್ನು ಚಿಹ್ನೆಯಾಗಿ ಪಕ್ಷೇತರ ಅಭ್ಯರ್ಥಿಗಳು ಬಳಸುತ್ತಿದ್ದರಿಂದ ಗೊಂದಲ ಉಂಟಾಗಿ ಪಕ್ಷದ ಅಭ್ಯರ್ಥಿಗಳಿಗೆ ಸೋಲು ಉಂಟಾಗಿತ್ತು.
ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು 2001ರಲ್ಲಿ ಟ್ರ್ಯಾಕ್ಟರ್ ಚಿಹ್ನೆ ಬದಲಾಯಿಸಿ ತೆನೆ ಹೊತ್ತ ಮಹಿಳೆಯ ಚಿಹ್ನೆ ಆಯ್ಕೆ ಮಾಡಿಕೊಂಡರು. 24 ವರ್ಷದ ಬಳಿಕ ಮತ್ತೊಮ್ಮೆ ಚಿಹ್ನೆಯಲ್ಲಿ ಸಣ್ಣ ಬದಲಾವಣೆಗೆ ಜೆಡಿಎಸ್ ತೀರ್ಮಾನಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net