ಅಸುರಕ್ಷಿತ ಹಾಗೂ ಪರವಾನಗಿ ಇಲ್ಲದ ವಸತಿಗೃಹಗಳ(ಪಿಜಿ) ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಗುರುವಾರ ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 321 ಪಿಜಿ ಕೇಂದ್ರಗಳ ಪರಿಶೀಲನೆ ನಡೆಸಿದೆ.
ಗಂಭೀರ ಸ್ವಚ್ಛತಾ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಎರಡು ಪಿಜಿ ಕೇಂದ್ರಗಳನ್ನು ತಕ್ಷಣವೇ ಸೀಲ್ ಮಾಡಲಾಗಿದ್ದು, ವಿವಿಧ ಉಲ್ಲಂಘನೆಗಳಿಗಾಗಿ ಒಟ್ಟು 58 ಸಾವಿರ ರೂ.ದಂಡ ವಿಧಿಸಲಾಗಿದೆ.
ಕೇಂದ್ರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅವರ ಆದೇಶದ ಮೇರೆಗೆ ಅಪರ ಆಯುಕ್ತ (ಅಭಿವೃದ್ಧಿ) ದಲ್ಜಿತ್ ಕುಮಾರ್ ಅವರ ನೇತೃತ್ವದಲ್ಲಿ ಸಿ.ವಿ.ರಾಮನ್ ನಗರ, ಶಾಂತಿನಗರ ವ್ಯಾಪ್ತಿಯಲ್ಲಿ ವಸತಿಗೃಹಗಳನ್ನು ಪರಿಶೀಲನೆ ನಡೆಸಲಾಯಿತು.
ಪಿಜಿಗಳ ಶುಚಿತ್ವ, ಅಡುಗೆ ಕೊಣೆ ಶುಚಿತ್ವ, ಉದ್ದಿಮೆ ಪರವಾನಗಿ, ಸುರಕ್ಷಾ ಕ್ರಮಗಳ ಅಳವಡಿಕೆ ಕುರಿತಂತೆ ಮಾಹಿತಿಯನ್ನು ಪಿಜಿಗಳ ಮಾಲೀಕರು ಅಥವಾ ಸ್ಥಳದಲ್ಲಿದ್ದ ಪಿಜಿ ನಿರ್ವಹಣೆ ಮಾಡುವವರಿಂದ ಪಡೆಯಲಾಯಿತು.
ಉದ್ದಿಮೆ ಪರವಾನಗಿ ಪಡೆಯದ ಹಾಗೂ ಶುಚಿತ್ವ ಕಾಪಾಡದ, ಸುರಕ್ಷಾ ಕ್ರಮ ಅಳವಡಿಸಿಕೊಳ್ಳದ ಹಲವು ಪಿಜಿಗಳಿಗೆ ಸ್ಥಳದಲ್ಲಿಯೇ ನೋಟೀಸ್ ನೀಡಲಾಯಿತು. ಶುಚಿತ್ವ ಕಾಪಾಡದ, ಕೆಟ್ಟುಹೋಗಿರುವ ತರಕಾರಿ ಉಪಯೋಗಿಸುತ್ತಿರುವ ಅಡುಗೆ ಕೋಣೆಯನ್ನು ಮಹಜರ್ ವರದಿಯೊಂದಿಗೆ ಮುಚ್ಚಲಾಯಿತು.
ಪಿಜಿ ಒಳಗೆ ಬಿಟ್ಟುಕೊಳ್ಳದ ಮಾಲೀಕರು
ಶಾಂತಿನಗರದ ವ್ಯಾಪ್ತಿಯಲ್ಲಿ ಅಧಿಕಾರಿಗಳು ಪಿಜಿಗಳ ಪರಿಶೀಲನೆ ನಡೆಸಲು ಹೋದ ಸಂದರ್ಭದಲ್ಲಿ ಪಿಜಿ ನಿರ್ವಹಣೆ ಮಾಡುವವರು ಸುಮಾರು 20 ನಿಮಿಷಗಳ ಕಾಲ ವಸತಿಗೃಹದ ಒಳಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. ತದನಂತರ ಸ್ಥಳಿಯ ಪೊಲೀಸ್ ಅಧಿಕಾರಿಗಳನ್ನು ಕರೆಸಿ ಪರಿಶೀಲನೆ ನಡೆಸಲಾಯಿತು. ಪರವಾನಗಿ ಪಡೆಯದ ಕಾರಣ ಹಾಗೂ ಮೇಲ್ಚಾವಣಿಯಲ್ಲಿ ಅನಧಿಕೃತವಾಗಿ ಅಡುಗೆ ಕೋಣೆ ನಡೆಸುತ್ತಿರುವುದರಿಂದ ಮುಂದಿನ ತಿಂಗಳಿನಿಂದ ಸದರಿ ಪಿ.ಜಿ.ಯನ್ನು ಬೀಗ ಮುದ್ರೆ ಹಾಕಲಾಗುವುದೆಂದು ಎಚ್ಚರಿಕೆ ನೀಡಿ ನೋಟಿಸ್ ನೀಡಲಾಗಿದೆ.