ಹಳದಿ ಮಾರ್ಗಕ್ಕೆ 14ನೇ ಮೆಟ್ರೋ ರೈಲು ಆಗಮನ

ಮೆಟ್ರೋ
ಮೆಟ್ರೋ
Published on

ಪ್ರಮುಖ ಮುಖ್ಯಾಂಶಗಳು

  • ಮಾಸಾಂತ್ಯದೊಳಗೆ ಕೊನೆಯ ರೈಲು ಪೂರೈಕೆ
ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಕಾರ್ಯಾಚರಣೆಗೆ ಇನ್ನಷ್ಟು ವೇಗ ನೀಡುವುದಕ್ಕಾಗಿ 14ನೇ ಮೆಟ್ರೋ ರೈಲು ಹೆಬ್ಬಗೋಡಿ ಡಿಪೋ ಸೇರಿದೆ. ಜು.9ರಂದು ರೈಲು ಆಗಮಿಸಿದ್ದು, ಕಪ್ಲರ್​ ಹಾಗೂ ಗ್ಯಾಂಗ್​ವೇ ಅಳವಡಿಕೆ ಪೂರ್ಣಗೊಂಡ ನಂತರ ಇನ್​ಸ್ಪೆಕ್ಷನ್​ ಬೇ ಲೈನ್​ಗೆ ಸ್ಥಳಾಂತರಿಸಲಾಗಿದೆ.
ರೈಲಿನ ಜೋಡಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸ್ಥಿರ ತಪಾಸಣೆ ನಡೆಸಲಾಗುತ್ತದೆ. ನಂತರ ಕಡ್ಡಾಯವಾಗಿರುವ 750 ಕಿ.ಮೀ. ಡೈನಾಮಿಕ್​ ಪರೀಕ್ಷೆ ಮುಖ್ಯ ಮಾರ್ಗದಲ್ಲೇ (ರಾತ್ರಿ ವೇಳೆ) ನಡೆಯಲಿದೆ. ಈ ಪ್ರಕ್ರಿಯೆಗಳಾದ ಮೇಲೆ  ವಾಣಿಜ್ಯ ಸೇವೆಗೆ ಅನುಮೋದನೆ ನೀಡಲಾಗುತ್ತದೆ ಎಂದು ಬಿಎಂಆರ್​ಸಿಎಲ್​ ಅಧಿಕಾರಿಗಳು ತಿಳಿಸಿದ್ದಾರೆ.
ಕೊಲ್ಕತ್ತಾ ಸಮೀಪದ ತಿತಾಗಢ ರೈಲು ಸಿಸ್ಟಮ್ಸ್​ ಲಿಮಿಟೆಡ್​ ಸಂಸ್ಥೆ ಹಳದಿ ಮಾರ್ಗಕ್ಕಾಗಿ 15 ರೈಲುಗಳನ್ನು ತಯಾರಿಸುತ್ತಿದ್ದು, 14ನೇ ರೈಲು ಈಗಾಗಲೇ ತಲುಪಿದೆ. ಕೊನೆಯ ರೈಲು ಜುಲೈ ಅಂತ್ಯದೊಳಗೆ ಹೆಬ್ಬಗೋಡಿ ಡಿಪೋ ತಲುಪುವ ನಿರೀಕ್ಷೆಯಿದೆ. ಎಲ್ಲ ರೈಲುಗಳು ಸೇವೆಗೆ ಸೇರ್ಪಡೆಯಾದ ಬಳಿಕ ಜನದಟ್ಟಣೆ ಅವಧಿಯಲ್ಲಿ 4&5 ನಿಮಿಷಗಳ ಅಂತರದಲ್ಲಿ ರೈಲು ಸಂಚಾರ ನಡೆಸುವ ಸಾಧ್ಯತೆ ಇದೆ. 15ರಲ್ಲಿ 13 ರೈಲುಗಳನ್ನು ನಿಯಮಿತ ಪ್ರಯಾಣಿಕರ ಸೇವೆಗೆ ಬಳಸಲಾಗಲಿದ್ದು, ಉಳಿದ ಎರಡು ರೈಲುಗಳನ್ನು ತುರ್ತು ಪರಿಸ್ಥಿತಿ, ನಿರ್ವಹಣಾ ಕಾಮಗಾರಿ ಹಾಗೂ ತಾಂತ್ರಿಕ ಸಮಸ್ಯೆಗಳ ಸಂದರ್ಭಗಳಲ್ಲಿ ಮೀಸಲು ಸಂಗ್ರಹವಾಗಿ ಕಾಯ್ದಿರಿಸಲಾಗುತ್ತದೆ. ಆಗಸ್ಟ್​ ಅಂತ್ಯದೊಳಗೆ ಸಂಪೂರ್ಣ ರೈಲು ಪಡೆ ಕಾರ್ಯಾಚರಣೆಗೆ ಸಜ್ಜಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
19.75 ಕಿ.ಮೀ. ಉದ್ದದ ಹಳದಿ ಮಾರ್ಗದಲ್ಲಿ 10 ರೈಲುಗಳು ಕಾರ್ಯಾಚರಣೆ ನಡೆಸುತ್ತಿದ್ದು, ಗರಿಷ್ಠ ಸಂಚಾರದ ವೇಳೆಯಲ್ಲಿ ಸುಮಾರು 7 ನಿಮಿಷ ಹಾಗೂ ಇತರ ವೇಳೆಯಲ್ಲಿ 10 ನಿಮಿಷಗಳ ಅಂತರದಲ್ಲಿ ಸೇವೆ ಒದಗಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net