

ಬೆಂಗಳೂರು: ನಗರದಲ್ಲಿ ಕರೊನಾ ಸೋಂಕು ನಿಯಂತ್ರಣಕ್ಕಾಗಿ ಜಾರಿ ಗೊಳಿಸಲಾಗಿದ್ದ ಒಂದು ವಾರದ ಲಾಕ್ಡೌನ್ ಮುಕ್ತಾಯ ವಾಗಿದ್ದರೂ, ಮಾರುಕಟ್ಟೆ ಮತ್ತು ಅತಿ ಹೆಚ್ಚು ಸೋಂಕಿತರು ಕಂಡುಬಂದಿರುವ ಸೀಲ್ಡೌನ್ ಪ್ರದೇಶಗಳ ನಿರ್ಬಂಧ ಮುಂದುವರಿಯಲಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥಪ್ರಸಾದ್ ತಿಳಿಸಿದ್ದಾರೆ.
ಮಾಸ್ಕ್ ಧರಿಸದೆ ಸಂಚಾರ ಮಾಡುವವರಿಗೆ ಈಗಿರುವ ದಂಡದ 5 ಪಟ್ಟು ದಂಡ ಹೆಚ್ಚಳ ಮಾಡುವಂತೆ ಸಿಎಂಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮಂಗಳವಾರ ತಿಳಿಸಿದರು.
ಪೌರ ಕಾರ್ವಿುಕರಿಗೆ ಕೋವಿಡ್ ಪರೀಕ್ಷೆ: ಸ್ವಚ್ಛತಾ ಸೇನಾನಿಗಳಾಗಿ ಕಾರ್ಯ ನಿರ್ವಹಿಸುತ್ತಿರುವ 17 ಸಾವಿರ ಪೌರ ಕಾರ್ವಿುಕರಿಗೂ ಕರೊನಾ ಸೋಂಕು ಪರೀಕ್ಷೆ ಮಾಡಿಸಲಾಗುವುದು. ಸೋಂಕಿದ್ದವರಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದರು.
ಲಾಕ್ಡೌನ್ ಮುಕ್ತಾಯ ಗೊಂಡರೂ ಅದಕ್ಕಿಂತ ಮುನ್ನ ಸೀಲ್ಡೌನ್ ಮಾಡಲಾಗಿದ್ದ ಪ್ರದೇಶಗಳಲ್ಲಿ ನಿರ್ಬಂಧ ಮುಂದುವರಿಯುತ್ತದೆ. ಜತೆಗೆ ಕೃ. ರಾ. ಮಾರುಕಟ್ಟೆ, ಕಲಾಸಿಪಾಳ್ಯ, ಯಶವಂತಪುರ, ಸಿಂಗೇನ ಅಗ್ರಹಾರ ಹಾಗೂ ಅತಿ ಹೆಚ್ಚು ಸೋಂಕಿತರು ಪತ್ತೆಯಾಗಿರುವ ವಿ.ವಿ. ಪುರ, ಚಿಕ್ಕಪೇಟೆ, ಚಾಮರಾಜಪೇಟೆ, ಧರ್ಮರಾಯ ಸ್ವಾಮಿ ವಾರ್ಡ್ಗಳ ಕೆಲವು ರಸ್ತೆಗಳಲ್ಲಿ ಸೀಲ್ಡೌನ್ ಜಾರಿಯಲ್ಲಿರುತ್ತದೆ. ಜನರು ನಿಯಮ ಪಾಲನೆ ಮಾಡಬೇಕು ಎಂದು ತಿಳಿಸಿದರು.
ಲಾಕ್ಡೌನ್ ತೆರವಿಗೆ ಬೇಡಿಕೆ: ಪ್ರಮುಖ ಮಾರುಕಟ್ಟೆ ಸ್ಥಳಗಳಾದ ಚಿಕ್ಕಪೇಟೆ, ಬಳೇಪೇಟೆ, ಕಾಟನ್ಪೇಟೆ ಸೇರಿ ವಿವಿಧೆಡೆ ಸ್ವಯಂ ಲಾಕ್ಡೌನ್ ಮಾಡಬೇಕು ಎಂದು ಬಿಬಿಎಂಪಿಗೆ ಅಲ್ಲಿನ ವ್ಯಾಪಾರಿ ಸಂಘಟನೆಗಳು ಮನವಿ ಸಲ್ಲಿಸಿದ್ದವು. ಈಗ ನಿರ್ಬಂಧ ತೆರವುಗೊಳಿಸಲು ಬೇಡಿಕೆಯಿಟ್ಟಿವೆ. ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರ ಮಾಡುತ್ತಿದ್ದ 50 ವರ್ಷ ಮೇಲ್ಪಟ್ಟವರಿಗೆ ಹೆಚ್ಚಾಗಿ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ, ಸೋಂಕು ಹರಡದಂತೆ ಯಾವ ಕ್ರಮ ಅನುಸರಿಸಲು ವ್ಯಾಪಾರಿ ಸಂಘಟನೆ ಸಿದ್ಧವಿದೆ ಎಂಬುದನ್ನು ತಿಳಿದು ನಿರ್ಬಂಧ ತೆರವುಗೊಳಿಸಲು ತೀರ್ಮಾನಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.
291 ಆಸ್ಪತ್ರೆಗಳಿಗೆ ನೋಟಿಸ್: ಬೆಂಗಳೂರು ನಗರದಲ್ಲಿ 291 ಖಾಸಗಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರ ಸೂಚಿಸಿದ ಶೇ.50 ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ನೀಡಿಲ್ಲ. ಆದ್ದರಿಂದ ಈ ಎಲ್ಲ ಆಸ್ಪತ್ರೆ ಗಳಿಗೂ ಜು.20ರಂದು ನೋಟೀಸ್ ಜಾರಿಗೊಳಿಸಲಾಗಿದೆ. ಜು.22ರ ಒಳಗಾಗಿ ಶೇ.50 ಹಾಸಿಗೆ ಒದಗಿಸಿರುವ ಬಗ್ಗೆ ಮಾಹಿತಿ ನೀಡಬೇಕು. ನಿರ್ಲಕ್ಷ್ಯ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗುವುದು. ಈ ಕಾಯ್ದೆ ಯಡಿ, ಒಮ್ಮೆ ಪ್ರಕರಣ ದಾಖಲಾದರೆ ಅದರಿಂದಾಗುವ ಪರಿಣಾಮಗಳನ್ನು ಆಸ್ಪತ್ರೆಯವರು ಎದುರಿಸಬೇಕಾಗುತ್ತದೆ ಎಂದು ಆಯುಕ್ತರು ಎಚ್ಚರಿಕೆ ನೀಡಿದರು.
ಮೇಲ್ವಿಚಾರಣಾ ಅಧಿಕಾರಿ ನೇಮಕ: ಬಿಬಿಎಂಪಿ ಆಯುಕ್ತನಾಗಿ ಅಧಿಕಾರ ವಹಿಸಿಕೊಂಡ 24 ಗಂಟೆಗಳಲ್ಲಿ ಹಲವು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ಮಾಡಿದ್ದೇನೆ. ಕೆಲವೊಂದು ಆಸ್ಪತ್ರೆಗಳು ಸರ್ಕಾರದ ಸೂಚನೆಯಂತೆ ಹಾಸಿಗೆ ಒದಗಿಸಿ ಶಿಸ್ತುಬದ್ಧವಾಗಿ ಸೋಂಕಿತರಿಗೆ ಚಿಕಿತ್ಸೆ ಪ್ರಾರಂಭಿಸಿವೆ. ಆದರೆ ಬಹುತೇಕ ಆಸ್ಪತ್ರೆಗಳು ಹಾಸಿಗೆ ನೀಡದೆ, ಚಿಕಿತ್ಸೆ ನೀಡುತ್ತಿರುವ ಬಗ್ಗೆ ಮಾಹಿತಿಯನ್ನೂ ನೀಡದೆ ನಿರ್ಲಕ್ಷ್ಯ ಮಾಡುತ್ತಿವೆ. ಹೀಗಾಗಿ ಖಾಸಗಿ ಆಸ್ಪತ್ರೆಗಳು ಶೇ.50 ಹಾಸಿಗೆ ಬಿಟ್ಟುಕೊಡುವುದು ಹಾಗೂ ಎಷ್ಟು ಹಾಸಿಗೆ ಭರ್ತಿಯಾಗಿವೆ ಎಂಬ ಮಾಹಿತಿ ನೀಡಲು ಪ್ರತಿ 4 ಆಸ್ಪತ್ರೆಗಳಿಗೆ ಒಬ್ಬರಂತೆ ಮೇಲ್ವಿಚಾರಣಾ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ಮಂಜುನಾಥಪ್ರಸಾದ್ ಮಾಹಿತಿ ನೀಡಿದರು.
ರ್ಯಾಪಿಡ್ ಟೆಸ್ಟ್ ಬಗ್ಗೆ ಅನುಮಾನ ಬೇಡ: ಸರ್ಕಾರ 50 ಸಾವಿರ ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಕಿಟ್ ನೀಡಿದೆ. ವರದಿಯಲ್ಲಿ ಪಾಸಿಟಿವ್ ಬಂದಲ್ಲಿ ಯಾವುದೇ ಅನುಮಾನ ಪಡದೆ ಚಿಕಿತ್ಸೆ ಪಡೆಯಬೇಕು. ಒಂದು ವೇಳೆ ನೆಗೆಟಿವ್ ಬಂದು ಸೋಂಕಿನ ಲಕ್ಷಣಗಳಿದ್ದವರನ್ನು ಪುನಃ ಆರ್ ಟಿ-ಪಿಸಿಆರ್ ಮೂಲಕ ಸೋಂಕು ಪರೀಕ್ಷೆ ಮಾಡಲಾಗುವುದು. ಕರೊನಾ ಪರೀಕ್ಷೆಗೊಳಪಟ್ಟ ಎಲ್ಲರಿಗೂ ಪಾಸಿಟಿವ್ ಅಥವಾ ನೆಗೆಟಿವ್ ವರದಿ ಬಗ್ಗೆ ಎಸ್ಎಂಎಸ್ ಕಳುಹಿಸಲಾಗುವುದು ಎಂದು ಮಂಜುನಾಥಪ್ರಸಾದ್ ತಿಳಿಸಿದರು.