

ಲುಟ್ಸ್ಕ್: ಪ್ರಜೆಗಳಲ್ಲಿ ಸರ್ಕಾರ ಭಾರಿ ಪ್ರಮಾಣದ ಭಯವನ್ನು ಹುಟ್ಟಿಸುತ್ತಿದೆ. ಹೀಗಾಗಿ ಸರ್ಕಾರ ಸ್ವತಃ ಹೀಗೆ ಘೋಷಿಸಿಕೊಳ್ಳಬೇಕು-"ಇಂದು ಮತ್ತು ಎಂದಿಗೂ ನಾನೇ ಫಸ್ಟ್ ಟೆರರಿಸ್ಟ್ ". ಇಂತಹ ವಿಚಿತ್ರ ಬೇಡಿಕೆಯನ್ನು ಮುಂದಿಟ್ಟ ವ್ಯಕ್ತಿಯೊಬ್ಬ ಮಾಡಿದ್ದೇನು ನೋಡಿ!
ಉಕ್ರೇನ್ನ ಪಶ್ಚಿಮಭಾಗದ ಲುಟ್ಸ್ಕ್ ಎಂಬ ಪಟ್ಟಣದಲ್ಲಿ ನಡೆದಿರುವ ಘಟನೆ ಇದು. ತಾನೇ ದೊಡ್ಡ ಭಯೋತ್ಪಾದಕ ಎಂದು ಸರ್ಕಾರವೇ ಸ್ವತಃ ಘೋಷಿಸಬೇಕು ಎಂಬ ವಿಚಿತ್ರ ಬೇಡಿಕೆ ಮುಂದಿಟ್ಟ ವ್ಯಕ್ತಿ ಶಸ್ತ್ರಾಸ್ತ್ರಗಳೊಂದಿಗೆ ದೀರ್ಘ ದೂರ ಸಂಚರಿಸುವ ಬಸ್ಸೊಂದನ್ನು ಏರಿದ್ದ. ಸ್ವಲ್ಪ ದೂರ ಹೋಗುತ್ತಲೇ ಬಸ್ಸನ್ನು ತನ್ನ ವಶಕ್ಕೆ ತೆಗೆದುಕೊಂಡು ಬೇಡಿಕೆ ಈಡೇರಿಸುವಂತೆ ಒತ್ತಡ ಹೇರತೊಡಗಿದ್ದ.
ಪೊಲೀಸ್ ಮಾಹಿತಿ ಪ್ರಕಾರ, ಬಸ್ಸನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕ ಆ ವ್ಯಕ್ತಿ ಮಾಡಿದ ಮೊದಲ ಕೆಲಸ ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ ಮಾಡಿದ್ದು. - "ನನ್ನ ಹೆಸರು ಮಕ್ಸಿಮ್ ಪ್ಲೋಖೊಯ್. ನಾನೊಂದು ಬಸ್ಸನ್ನು ಹೈಜಾಕ್ ಮಾಡಿದ್ದೇನೆ. ಪ್ರಯಾಣಿಕರು, ಬಸ್ಸಿನ ಸಿಬ್ಬಂದಿ ನನ್ನ ಒತ್ತೆಯಾಳುಗಳಾಗಿದ್ದಾರೆ. ಸರ್ಕಾರ ಮತ್ತು ನೀವೆಲ್ಲರೂ ಮಾಡಬೇಕಾದ್ದಿಷ್ಟೆ- ನಿಮ್ಮ ನಿಮ್ಮ ಸೋಷಿಯಲ್ ಮೀಡಿಯಾ ಪ್ಲಾಟ್ಫಾರಂನಲ್ಲಿ ನಾವು ಭಯೋತ್ಪಾದಕರು ಎಂದು ಬರೆದುಕೊಳ್ಳಿ. ಸರ್ಕಾರವೇ ಯಾವಾಗಲೂ ಟೆರರಿಸ್ಟ್ ಆಗಿದ್ದು, ಅದುವೇ ಫಸ್ಟ್ ಟೆರರಿಸ್ಟ್ ಅದನ್ನೂ ಘೋಷಿಸಬೇಕು" ಎಂದು ಹೇಳಿಕೊಂಡಿದ್ದ.
ಆತ ಒತ್ತೆ ಇರಿಸಿಕೊಂಡಿದ್ದ ಬಸ್ ಬಳಿಗೆ ಪೊಲೀಸರು ತಮ್ಮ ನಿಗಾ ಡ್ರೋನ್ ಅನ್ನು ರವಾನಿಸಿದ್ದರು. ಅಲ್ಲಿನ ಸ್ಥಿತಿಗತಿ ತಿಳಿದುಕೊಳ್ಳುವ ಉದ್ದೇಶ ಅವರದ್ದಾಗಿತ್ತು. ಆದರೆ, ಆತ ಬಸ್ಸಿನೊಳಗಿಂದ ಕಿಟಕಿಯ ಮೂಲಕ ಡ್ರೋನ್ ಮೇಲೆ ಸ್ಪೋಟಕಗಳನ್ನು ಎಸೆದಿದ್ದ. ಹಲವು ಸುತ್ತಿನ ಗುಂಡಿನ ದಾಳಿ ಕೂಡ ನಡೆಸಿದ್ದ ಎಂದು ಉಕ್ರೇನ್ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ಬಳಿಕ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಆತನನ್ನು ಬಂಧಿಸಿದ್ದಲ್ಲದೆ, ಬಸ್ಸಿನಲ್ಲಿದ್ದ 13 ಜನರನ್ನು ಯಾವುದೇ ಪ್ರಾಣಾಪಾಯ, ಗಾಯಗಳಿಲ್ಲದೇ ಬಚಾವ್ ಮಾಡಿದ್ದಾರೆ. ಈ ಪೈಕಿ ಒಬ್ಬ ಗರ್ಭಿಣಿ ಸೇರಿ ಮೂವರನ್ನು ಆತ ಮೊದಲೇ ಬಿಡುಗಡೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)