ಮಕ್ಕಳಂತೆ ಸಾಕಿದ್ದ ಜೋಡೆತ್ತುಗಳ ಸಾವಿಗೆ ಕಣ್ಣೀರಿಟ್ಟ ಊರಜನ! ರೈತ ಮಿತ್ರನಿಗೆ ವಿಷವಿಟ್ಟರಾ ದುಷ್ಕರ್ಮಿಗಳು?

Bullack
Published on

ಬಾಗಲಕೋಟೆ: ಮನೆಯ ಸದಸ್ಯರಂತೆ ಇದ್ದ ಜೋಡೆತ್ತು ಕಣ್ಣೇದುರು ಚಟಪಟನೇ ಒದ್ದಾಡಿ ಪ್ರಾಣಬಿಡುತ್ತಿದ್ದರೆ ಒಡೆಯನಿಗೆ ಮಾತ್ರವಲ್ಲದೇ ಅಲ್ಲಿದ್ದ ಅನೇಕರಿಗೆ ಕಣ್ಣು ತುಂಬಿ ಬಂದಿದ್ದವು.

ಹೌದು, ಇದು ನಡೆದಿದ್ದು ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ತುಂಬ ಗ್ರಾಮದಲ್ಲಿ. ತುಂಬ ಗ್ರಾಮದ ಬಡ ರೈತ ನಿಂಗನಗೌಡ ಅಗಸಿಮುಂದಿನ ಎಂಬುವವರು ತಮ್ಮ ಸ್ವಂತ ಮಕ್ಕಳಂತೆ ಸಾಕಿದ್ದ ಜೋಡೆತ್ತುಗಳಿಗೆ ಯಾರೋ ದುಷ್ಕರ್ಮಿಗಳು ವಿಷಪ್ರಾಸನ ಮಾಡಿದ್ದಾರೆ ಎನ್ನಲಾಗ್ತಿದೆ.

ನಿನ್ನೆ ರಾತ್ರಿಯೆಲ್ಲ ಲವಲವಿಕೆಯಿಂದ ಇತ್ತ ಎತ್ತುಗಳು ಬೆಳಗ್ಗೆ ನೀರು ಕುಡಿದ ತಕ್ಷಣವೇ ರೈತನ ಮುಂದೆಯೇ ಒದ್ದಾಡಿ ಪ್ರಾಣ ಬಿಟ್ಟವೆ. ಎಂತದ್ದೆ ಕಷ್ಟ ಇದ್ದರೂ ಭೀಕರ ಬರಗಾಲ ಬಿದ್ದಿದ್ದರೂ ರೈತ ತನ್ನ ಮಿತ್ರರನ್ನ ಮನೆ ಮಕ್ಕಳಂತೆ ಸಾಕಿದ್ದ. ನೋಡ ನೋಡ್ತಿದ್ದಂತೆ ಜೋಡೆತ್ತು ಪ್ರಾಣಬಿಟ್ಟಿದ್ದು ಆತನ ನೋವು ಮುಗಿಲು ಮುಟ್ಟಿತ್ತು.‌ ಮನೆ ಮಕ್ಕಳಂತೆ ಇದ್ದ ಜೋಡೆತ್ತಿನ ಅಂತ್ಯಸಂಸ್ಕಾರವನ್ನ ಸಂಪ್ರದಾಯಬದ್ಧವಾಗಿ ನೆರವೇರಿಸಿದ್ರು.

ಸಾವನ್ನಪ್ಪಿದ ಎತ್ತುಗಳಿಗೆ ಸಿಂಗಾರ ಮಾಡಿ ಊರತುಂಬೆಲ್ಲಾ ಮೆರವಣಿಗೆ ಮಾಡಲಾಯಿತು. ದಷ್ಟಪುಷ್ಟವಾಗಿದ್ದ, ಲವಲವಿಕೆಯಿಂದ ಇದ್ದ ಜೋಡೆತ್ತು ಸತ್ತಿದ್ದು ಗ್ರಾಮಸ್ಥರನ್ನ ಸಹ ದುಃಖದಲ್ಲಿ ಮುಳುಗಿಸಿತ್ತು. ಗ್ರಾಮದಲ್ಲಿ ಮೆರವಣಿಗೆಯ ನಂತರ ರೈತ ನಿಂಗನಗೌಡನ ಹೊಲದಲ್ಲಿ ಎತ್ತುಗಳ ಅಂತ ಸಂಸ್ಕಾರ ಮಾಡಲಾಯಿತು. ಲಕ್ಷಾಂತರ ರೂಪಾಯಿ ಕೊಟ್ಟು ಕೊಂಡುಕೊಂಡಿದ್ದ ಎತ್ತುಗಳನ್ನು ಕಳೆದುಕೊಂಡ ರೈತನು ಕಂಗಾಲಾಗಿದ್ದಾನೆ.

ಭೀಕರ ಬರದಲ್ಲಿ ಜೀವನ ನಿರ್ವಹಣೆಯೇ ಕಷ್ಟವಾಗಿರುವಾಗ ಲಕ್ಷಾಂತರ ರೂಪಾಯಿ ಬೆಲೆಬಾಳುವ ಜೋಡೆತ್ತು ಸಾವನ್ನಪ್ಪಿದ್ದು ರೈತನ ಜಂಘಾಬಲವೇ ಕುಸಿದಿದೆ. ಸಂಬಂಧಪಟ್ಟ ಇಲಾಖೆಯವರು ಇದರ ತನಿಖೆ ನಡೆಸಿ ರೈತನ ಕಣ್ಣೀರು ಒರೆಸುವ ಕೆಲಸ ಆಗಬೇಕು, ಅಗತ್ಯ ನೆರವು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net