ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಸ್ನೇಕ್​ ಡ್ಯಾನಿ ದುರಂತ ಸಾವು: 75 ಬಾರಿ ಬಚಾವ್​ ಆದ್ರೂ ಬೆಂಬಿಡದ ಮೃತ್ಯು!

Snake Danny
Published on

ಬಾಗಲಕೋಟೆ: ನಾಗರಹಾವು ಹಿಡಿಯುವ ವೇಳೆ ಹಾವು ಕಚ್ಚಿ ಸ್ನೇಕ್​ ಕ್ಯಾಚರ್​ ಡೇನಿಯಲ್​ ನ್ಯೂಟನ್​ (43) ಮೃತಪಟ್ಟಿರುವ ಘಟನೆ ಬಾಗಲಕೋಟೆ ತಾಲ್ಲೂಕಿನ ಸೀಗಿಕೇರಿಯಲ್ಲಿ ನಡೆದಿದೆ.

ಸೀಗಿಕೇರಿ ಗ್ರಾಮದ ಮನೆಯೊಂದರಲ್ಲಿ ಹಾವು ಹಿಡಿಯುವ ವೇಳೆ ದುರಂತ ಘಟನೆ ನಡೆದಿದೆ. ಡೇನಿಯಲ್​ ಕೇವಲ ಒಂದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಈಗಾಗಲೇ ದೇಹದಾನ ಮಾಡಿರುವ ಡೇನಿಯಲ್, ಇದುವರೆಗೂ ಒಟ್ಟು 3279 ಹಾವನ್ನು ರಕ್ಷಣೆ ಮಾಡಿದ್ದಾರೆ. ಅದರಲ್ಲಿ 1036 ನಾಗರಹಾವು ಸೇರಿಕೊಂಡಿದೆ.

ಒಟ್ಟು 75 ಬಾರಿ ಹಾವಿನಿಂದ‌ ಕಚ್ಚಿಸಿಕೊಂಡು ಬಚಾವ್​ ಆಗಿದ್ದರು. ಕಳೆದ ಜೂನ್ ತಿಂಗಳಲ್ಲಿ ನಾಗರ ಹಾವಿನ ಮರಿ ಕಚ್ಚಿದ ಪರಿಣಾಮ ಡೇನಿಯಲ್ ಪರಿಸ್ಥಿತಿ ಗಂಭೀರವಾಗಿತ್ತು. ಸಾವು ಬದುಕಿನ ಮಧ್ಯೆ ಹೋರಾಡಿ ಬದುಕುಳಿದಿದ್ದರು. ಆದರೂ ಹಾವು ಹಿಡಿಯುವ ತನ್ನ ಕಾರ್ಯವನ್ನು ಬಿಡದೆ ಮುಂದುವರೆಸಿದ್ದರು.

ಅಂದಹಾಗೆ ಡೇನಿಯಲ್​ ಬಾಗಲಕೋಟೆ ನಗರದ ಜಯನಗರ ನಿವಾಸಿ. ಹಾವು ಹಿಡಿಯುವ ಮೂಲಕ ಬಾಗಲಕೋಟೆ ಹಾಗೂ ಸುತ್ತ ಮುತ್ತ ಹಳ್ಳಿಗಳಲ್ಲಿ ಸ್ನೇಕ್ ಡ್ಯಾನಿ ಎಂದೇ ಹೆಸರು ಗಳಿಸಿದ್ದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net