More

    ಮಕ್ಕಳು ಮದುವೆಗೆ ಒಪ್ಪದಿದ್ದರೆ ಅದರ ಹಿಂದಿರುವ ಕಾರಣಗಳು ಇದೂ ಇರಬಹುದಲ್ಲವೆ?

    ಮಕ್ಕಳು ಮದುವೆಗೆ ಒಪ್ಪದಿದ್ದರೆ ಅದರ ಹಿಂದಿರುವ ಕಾರಣಗಳು ಇದೂ ಇರಬಹುದಲ್ಲವೆ? ಮಧ್ಯವಯಸ್ಸಿನ ಮಹಿಳೆ ನಾನು. ನನ್ನ ಗಂಡನಿಗೆ ಹೃದಯದ ಶಸ್ತ್ರಚಿಕಿತ್ಸೆಯಾಗಿ ಈಗ ಆರೋಗ್ಯವಾಗಿದ್ದಾರೆ. ಒಬ್ಬನೇ ಮಗ ಬಿ.ಇ ಓದಿ ಒಳ್ಳೆಯ ಕೆಲಸದಲ್ಲಿದ್ದಾನೆ. ಕಾಲೇಜಿನಲ್ಲಿ ಓದುವಾಗ ಸ್ವಲ್ಪ ದಾರಿತಪ್ಪಿದ್ದ. ನಂತರ ಸ್ವಲ್ಪಕಾಲ ಕೆಲಸವೂ ಸಿಕ್ಕದೆ ನಿರಾಶನಾಗಿದ್ದ. ಈಗ ಒಳ್ಳೆಯ ಕೆಲಸ ಸಿಕ್ಕು, ಒಳ್ಳೆ ಹೆಸರು ತೆಗೆದುಕೊಂಡಿದ್ದಾನೆ.

    ಅವನಿಗೆ ಬೈಕ್‍ನಲ್ಲಿ ಸುತ್ತುವ ಹುಚ್ಚು ತುಂಬ ಇದೆ. ಅಲ್ಲದೆ ಯೋಗ, ಧ್ಯಾನ ಇತ್ಯಾದಿಗಳನ್ನು ತಪ್ಪದೆ ಮಾಡುತ್ತಾನೆ. ಸಂಗೀತ ಕೇಳುವುದು, ಪುಸ್ತಕ ಓದುವುದು ಮುಂತಾದ ಒಳ್ಳೆಯ ಹವ್ಯಾಸಗಳಿವೆ. ಆರ್ಥಿಕವಾಗಿ ನಾವು ಚೆನ್ನಾಗಿದ್ದೇವೆ.

    ಆದರೆ ಮಗನದೆ ಈಗ ಸಮಸ್ಯೆ. ಅವನು ಏನು ಮಾಡಿದರೂ ಮದುವೆಗೆ ಒಪ್ಪುತ್ತಿಲ್ಲ. ಇಷ್ಟ ಇಲ್ಲ ಎನ್ನುತ್ತಾನೆ, ಕಮಿಟ್ಮೆಂಟ್ ಬೇಡವೆನ್ನುತ್ತಾನೆ, ನನಗೆ ಸ್ವಾತಂತ್ರ್ಯ ಬೇಕು, ಮದುವೆಯಾದರೆ ಕಟ್ಟಿಹಾಕಿದ ಹಾಗೆ ಆಗುತ್ತದೆ, ಅದಕ್ಕೆ ಮದುವೆಗೆ ಒಪ್ಪುವುದಿಲ್ಲವೆನ್ನುತ್ತಾನೆ. ನಾನು, ಇವರು ಎಲ್ಲ ರೀತಿಯಲ್ಲೂ ಹೇಳಿ ಸೋತೆವು. ನಮಗೂ ಸೊಸೆ, ಮೊಮ್ಮಕ್ಕಳು ಅಂತ ಆಸೆ ಇರುವುದಿಲ್ಲವಾ? ನಾವು ಹೀಗೆ ಅಪೇಕ್ಷೆ ಪಡುವುದೇ ತಪ್ಪಾ? ಅವನನ್ನು ಬೆಳೆಸುವಲ್ಲಿ ಎಲ್ಲಿ ತಪ್ಪು ಮಾಡಿದೆ ಅಂತ ಅರ್ಥವಾಗುತ್ತಿಲ್ಲ. ನನ್ನ ಮಗನೇ ನನಗೆ ಒಂದು ಪ್ರಶ್ನಾರ್ಥಕ ಚಿಹ್ನೆ ಆಗಿದ್ದಾನೆ.

    ನಾನು ಸರಿಯಾಗಿ ತಾಯ್ತನ ನಿಭಾಯಿಸಿಲ್ಲವೇನೋ ಅಂತ ಅನುಮಾನವಾಗುತ್ತಿದೆ. ನಾವು ಸಂಸಾರ ಪ್ರಾರಂಭಿಸಿದಾಗ ಆರ್ಥಿಕವಾಗಿ ಬಹಳ ಕಷ್ಟಪಟ್ಟೆವು. ಆ ಕಷ್ಟ ಅವನಿಗೆ ಗೊತ್ತಾಗದ‘ ಹಾಗೆ ಅವನನ್ನು ಸುಖದಲ್ಲೇ ಬೆಳೆಸಿದೆವು. ಈಗ ಅದಕ್ಕೆ ಬೆಲೆಯೇ ಇಲ್ಲದಂತಾಗಿದೆ. ದಿನದಿನಕ್ಕೂ ನಮಗೂ ಮತ್ತು ಅವನಿಗೂ ಸಹ ವಯಸ್ಸು ಹೆಚ್ಚಾಗುತ್ತಿದೆ. ಮದುವೆಯ ವಯಸ್ಸು ಮೀರಿದರೆ ಹೆಣ್ಣು ಸಿಗುವುದು ಕಷ್ಟ ಅನ್ನುವುದು ನನ್ನ ಆತಂಕ. ಏನು ಮಾಡಲಿ ತಿಳಿಸಿ?

    ಉತ್ತರ: ನಿಮ್ಮ ಪತ್ರದ ಪ್ರಕಾರ, ನಿಮ್ಮ ಆತಂಕಕ್ಕೆ ಮೂರು ಆಯಾಮಗಳಿವೆ. ಮಗನಿಗೆ ಮದುವೆಯಾಗುವ ಮನಸ್ಸಿಲ್ಲವೆನ್ನುವುದು, ಸಾಕುವುದರಲ್ಲೇ ತಪ್ಪಾಗಿದೆಯಾ ಎನ್ನುವುದು, ವಯಸ್ಸಾದರೆ ಹೆಣ್ಣು ಸಿಗಲಾರದು ಎನ್ನುವುದು. ಇವೆಲ್ಲವೂ ಮೇಲು ಮೇಲಿನ ಆತಂಕಗಳು. ಮಕ್ಕಳನ್ನು ಸಾಕುವಿಕೆಯ ಜವಾಬ್ದಾರಿ ಅವರು 21 ವರ್ಷದವರೆಗೆ ಇದ್ದು, ಅವರು ಪ್ರೌಢರಾದ ಮೇಲೆ ಮುಗಿದೇ ಹೋಗುತ್ತದೆ. ಸಾಕುವಿಕೆಯಲ್ಲೇ ದೋಷವಿದ್ದಿದ್ದರೆ, ನಿಮ್ಮ ಮಗ ಒಳ್ಳೆಯ ಕೆಲಸ ಪಡೆದು ಅದರಲ್ಲಿ ಕೀರ್ತಿ ಪಡೆದಿದ್ದಾರಲ್ಲ? ಅದು ಸಾಧ್ಯವಾಗುತ್ತಿತ್ತೇ? ನಿಮ್ಮ ಪತ್ರದಲ್ಲಿನ ಒಂದು ಸಣ್ಣ ಸುಳಿವನ್ನು ವಿಶ್ಲೇಷಣೆ ಮಾಡಿದರೆ ನಿಮ್ಮ ಮಗನ ಮದುವೆ ನಿರಾಕರಣೆಗೆ ಕಾರಣ ಅಲ್ಲಿ ಸಿಗುತ್ತದೆ ಎನಿಸುತ್ತದೆ. ನೀವು ಈ ಬಗ್ಗೆ ಯೋಚಿಸಿದ್ದಿರೋ ಇಲ್ಲವೋ ತಿಳಿಯದು.

    `ಕಾಲೇಜಿನಲ್ಲಿ ಓದುವಾಗ ದಾರಿ ತಪ್ಪಿದ್ದ ಮತ್ತು ಸ್ವಲ್ಪ ಕಾಲ ಕೆಲಸ ಸಿಕ್ಕದೇ ನಿರಾಶನಾಗಿದ್ದ’ ಎನ್ನುವ ನಿಮ್ಮ ಸಾಲುಗಳನ್ನು ಕುರಿತು ಚಿಂತಿಸಿದರೆ, ಆ ದಿನಗಳಲ್ಲಿ ನಿಮ್ಮ ಮಗನಿಗೆ ಕೆಟ್ಟ ಅನುಭವಗಳಾಗಿರುವ ಸಾಧ್ಯತೆಗಳಿವೆ. ಕಾಲೇಜಿನ ಸೀನಿಯರ್ ಹುಡುಗರು ಜೂನಿಯರ್ಸ್​ಗಳನ್ನು ತಮ್ಮ ದೈಹಿಕ ಕಾಮನೆಗೆ ಬಳಸಿಕೊಳ್ಳುವುದು, ಇವರಿಗೆ ಇಷ್ಟವಿಲ್ಲದ ಕೆಲಸಗಳನ್ನು ಮಾಡಿಸುವುದು ಇಂಥದರಿಂದಲೂ ಮನಸ್ಸಿನ ಮೇಲೆ ಪರಿಣಾಮವಾಗಿ `ಇಂಥ ಕೆಟ್ಟ ಅನುಭವಗಳಿಗೆಲ್ಲ ಸಿಕ್ಕಿರುವ ನಾನು `ಮದುವೆ’ಗೆ ಯೋಗ್ಯನಲ್ಲ ಎಂದು ಆತ ತಾನೇ ನಿರ್ಧರಿಸಿರಬಹುದು.

    ಕೆಲಸ ಬೇರೆ ಬೇಗ ಸಿಗದೇ `ತಾನು ಯಾವುದಕ್ಕೂ ಯೋಗ್ಯನಲ್ಲ’ ಎನ್ನುವ ಭಾವ ಮತ್ತಷ್ಟು ಬಲಗೊಂಡಿರಬಹುದು. ಇಂಥವನ್ನೆಲ್ಲ ಗಂಡುಮಕ್ಕಳು ತಮ್ಮ ಹೆತ್ತವರೊಡನೆ ಹೇಳಿಕೊಳ್ಳಲು ನಾಚುತ್ತಾರೆ ಮತ್ತು ಅಂಜುತ್ತಾರೆ. ತಮ್ಮನ್ನು ತಾವು ಇದರಿಂದ ಮುಚ್ಚಿಟ್ಟುಕೊಳ್ಳಲು ಜಗಳವಾಡುವ ಹಾಗೆ ಕೂಗಾಡಿ ಹೆತ್ತವರ ಬಾಯನ್ನು ಮುಚ್ಚಿಸುತ್ತಾರೆ. ಇಂತ ಸಂದರ್ಭದಲ್ಲಿ ದೈಹಿಕ ಮತ್ತು ಮಾನಸಿಕ ದೌರ್ಬಲ್ಯಗಳಿರುವ ಸಾಧ್ಯತೆ ಇರುತ್ತದೆ. ನೀವು ಆತನನ್ನು

    ಒಳ್ಳೆಯ ಮಾತುಗಳಿಂದಲೇ ಒಪ್ಪಿಸಿ ಮನೋವೈದ್ಯರಲ್ಲಿಗೆ ಕರೆದುಕೊಂಡು ಹೋಗುವುದು ಉಚಿತ.

    ನನಗೆ ಗೊತ್ತು. ಇಂಥ ವಿಚಾರ ಅವರಿಗೆ ಹೇಳಿದ ತಕ್ಷಣ ನನಗೇನು ಹುಚ್ಚಾ ಎಂದೇ ಪ್ರತಿಕ್ರಿಯಿಸುತ್ತಾರೆ. ಹುಚ್ಚು ನಿನಗಲ್ಲ, ನನಗೇ ನಿನ್ನ ಬಗ್ಗೆ ಆತಂಕ ಹೆಚ್ಚಾಗಿದೆ, ನನಗೆ ಮನೋವೈದ್ಯರ ಸಲಹೆ ಬೇಕಾಗಿದೆ, ನನಗೆ ಸಹಾಯಕ ಮಾಡಲು ನೀನು ಬಾ ಎಂದು ಹೇಳಿ.

    ಇತ್ತೀಚೆಗೆ ಗಂಡುಮಕ್ಕಳಲ್ಲಿ ಮದುವೆಯ ನಿರಾಕರಣೆ ಹೆಚ್ಚುತ್ತಿದೆ. ಇದಕ್ಕೆ ಕಾರಣವನ್ನು ಮನೋವೈದ್ಯರಿಂದಲೇ ತಿಳಿಯಬೇಕಾಗುತ್ತದೆ. ಇನ್ನು ಹೆಣ್ಣು ಸಿಗುವುದಿಲ್ಲ ಎನ್ನುವುದು ಅಷ್ಟೇನೂ ಗಂಭೀರ ಸಮಸ್ಯೆ ಅಲ್ಲವೆನಿಸುತ್ತದೆ. ಆದರೆ ಇಲ್ಲಿ ಒಂದು ಮಾತು ಸೇರಿಸಬಯಸುತ್ತೇನೆ.

    ಹೆಣ್ಣು ಹುಡುಕುವಾಗ ಗಂಡಿನ ಕಡೆಯವರಲ್ಲಿ ಒಂದು ಪಟ್ಟಿ ಇರುತ್ತದೆ. `ಹುಡುಗಿ ತೆಳ್ಳಗೆ ಬೆಳ್ಳಗೆ ಸುಂದರಿಯಾಗಿರಬೇಕು, ಒಳ್ಳೆಯ ವಿದ್ಯೆ ಇರಬೇಕು, ಒಳ್ಳೆಯ ಕೆಲಸದಲ್ಲಿರಬೇಕು, ನಮ್ಮ ಜಾತಿ ನಮ್ಮ ಕುಲ, ನಮ್ಮ ಒಳ ಪಂಗಡ, ಮತ್ತು ಹಸನಾದ ಜಾತಕ’ ಇತ್ಯಾದಿ ಇತ್ಯಾದಿ! ಇಂಥವನ್ನೆಲ್ಲ ಕಡಿಮೆ ಮಾಡಿಕೊಂಡು `ಹುಡುಗಿ ಒಳ್ಳೆಯ ಗುಣದವಳಾಗಿದ್ದು, ಹುಡುಗ ಮತ್ತು ಹುಡುಗಿ ಪರಸ್ಪರ ಹೊಂದಿಕೊಂಡರೆ ಸಾಕು’ ಎನ್ನುವ ಒಂದೇ ಪಟ್ಟಿಯಿದ್ದರೆ ಬಹುಶಃ ಹೆಣ್ಣು ಸಿಗುವುದು ಕಷ್ಟವಾಗಲಿಕ್ಕಿಲ್ಲ.

    ಡಾ.ಶಾಂತಾ ನಾಗರಾಜ್​ ಅವರ ಇನ್ನಷ್ಟು ಸಲಹೆಗಳಿಗಾಗಿ https://www.vijayavani.net/ ಕ್ಲಿಕ್ಕಿಸಿ ಅದರಲ್ಲಿರುವ ಅಂಕಣ ಕಾಲಂನಲ್ಲಿರುವ ನಂದೊಂದು ಕಥೆ ವಿಭಾಗಕ್ಕೆ ಹೋಗಿ.

    ಅಮ್ಮ ದಾರಿತಪ್ಪಿದ್ದಾಳೆ, ನನ್ನ ಮದುವೆ ಫಿಕ್ಸ್‌ ಆಗಿದ್ದು ಗೊಂದಲದಲ್ಲಿದ್ದೇನೆ, ಏನು ಮಾಡಲಿ?

    ಗಂಡನಿಗೆ ನನ್ನ ಬಗ್ಗೆ ಆಸಕ್ತಿಯೇ ಇಲ್ಲ… ಏನು ಮಾಡಲಿ?

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts