ಟೆಕ್ಕಿ ಅತುಲ್​​ ಸುಭಾಷ್​ ಆ*ಹತ್ಯೆ ಪ್ರಕರಣ: ಕೊನೆಗೂ ಖಾಕಿ ಖೆಡ್ದಾಗೆ ಬಿದ್ದ ಪತ್ನಿ ನಿಕಿತಾ ಸಿಂಘಾನಿಯ | Atul Subhash

Atul Subhash
Published on

Atul Subhash : ದೇಶಾದ್ಯಂತ ಭಾರಿ ಚರ್ಚೆ ಹುಟ್ಟು ಹಾಕಿದ ಟೆಕ್ಕಿ ಅತುಲ್​ ಸುಭಾಷ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ಹಾಗೂ ಎ1 ಆರೋಪಿಯಾಗಿರುವ ನಿಕಿತಾ ಸಿಂಘಾನಿಯಳನ್ನು ಬೆಂಗಳೂರು ಪೊಲೀಸರು ಕೊನೆಗೂ ತಮ್ಮ ಖೆಡ್ಡಾಗೆ ಕೆಡವಿದ್ದಾರೆ.

ಬೆಂಗಳೂರು ನಗರದ ಮಾರತ್ತಹಳ್ಳಿ ಪೊಲೀಸರು ಈ ಪ್ರಕರಣದಲ್ಲಿ ಒಟ್ಟು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಅತುಲ್ ಸುಭಾಷ್ ಪತ್ನಿ ನಿಖಿತಾ ಸಿಂಘಾನಿಯ, ಅತ್ತೆ ನಿಶಾ ಸಿಂಘಾನಿಯಾ ಹಾಗೂ ಬಾಮೈದ ಅನುರಾಗ್ ಸಿಂಘಾನಿಯ ಎಂದು ಗುರುತಿಸಲಾಗಿದೆ.

ತಲೆಮರೆಸಿಕೊಂಡಿದ್ದ ನಿಕಿತಾ ಸಿಂಘಾನಿಯಳನ್ನು ಹರಿಯಾಣ ರಾಜ್ಯದ ಗುರುಗ್ರಾಮದಿಂದ ನಿನ್ನೆ (ಡಿ. 14) ಬೆಳಗ್ಗೆ ಅರೆಸ್ಟ್​ ಮಾಡಲಾಯಿತು. ಇದರೊಂದಿಗೆ ಪ್ರಕರಣದ ಎ2 ಆರೋಪಿತೆಯಾದ ನಿಶಾ ಸಿಂಘಾನಿಯಾ ಮತ್ತು ಎ3 ಆರೋಪಿಯಾದ ಅನುರಾಗ್ ಸಿಂಘಾನಿಯಾನನ್ನು ಉತ್ತರಪ್ರದೇಶದ ಅಲಹಾಬಾದ್​ನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತರಲಾಗಿದ್ದು, ಮೂವರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾರಜರುಪಡಿಸಿ, ನ್ಯಾಯಾಲಯದ ಆದೇಶದ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಂದಹಾಗೆ ಅತುಲ್​ ಅವರು ಮಾರತ್​ಹಳ್ಳಿಯಲ್ಲಿ ತಾನು ವಾಸವಿದ್ದ ಮನೆಯಲ್ಲಿ ಡಿಸೆಂಬರ್​ 09ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ಶರಣಾಗುವ ಮುನ್ನ ತಮ್ಮ ಎಕ್ಸ್​ ಖಾತೆಯಲ್ಲಿ ಭಾರತದಲ್ಲಿ ಪುರುಷರ ಮೇಲೆ ಕಾನೂನುಬದ್ಧ ನರಮೇಧ ನಡೆಯುತ್ತಿದೆ ಎಂದು ಪೋಸ್ಟ್​ ಮಾಡಿದ್ದರು. ಬಳಿಕ ಆ ಪೋಸ್ಟ್ಅನ್ನು ಡಿಲೀಟ್​ ಮಾಡಿದ್ದರು. ಸಾವಿಗೂ ಮುನ್ನ ಪತ್ನಿಯ ಕಿರುಕುಳದ ಬಗ್ಗೆ 24 ಪುಟಗಳ ಡೆತ್​ನೋಟ್​ ಬರೆದಿಟ್ಟಿದ್ದರು.

ಅತುಲ್ ಸುಭಾಷ್ ತನ್ನ ಪತ್ನಿ ನಿಕಿತಾ ಸಿಂಘಾನಿಯ ಮತ್ತು ಕುಟುಂಬದ ಸುಲಿಗೆ ಮತ್ತು ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದಿರುವ ಹೆತ್ತವರು, ಆತ ತೀವ್ರ ಒತ್ತಡದಲ್ಲಿದ್ದ. ಕೋರ್ಟ್ ಕೇಸುಗಳಿಗಾಗಿ ಆತ ಉತ್ತರ ಪ್ರದೇಶದ ಜೌನ್​ಪುರ ಮತ್ತು ಕರ್ನಾಟಕ ಬೆಂಗಳೂರು ನಡುವೆ ಕನಿಷ್ಠ 40 ಬಾರಿ ಪ್ರಯಾಣ ಮಾಡಿದ್ದಾನೆ ಎಂದು ಬೇಸರ ಹೊರಹಾಕಿದ್ದಾರೆ.

ನನ್ನ ಮಗನಿಗೆ ಚಿತ್ರಹಿಂಸೆ ಕೊಟ್ಟರು. ನಮಗೂ ಚಿತ್ರಹಿಂಸೆ ನೀಡಿದರು. ಆದರೆ ಮಗ ಎಲ್ಲವನ್ನೂ ತಾನೇ ಅನುಭವಿಸಿಕೊಂಡ, ಸಹಿಸಿಕೊಂಡ. ನಮಗೆ ಕಷ್ಟ ಆಗದಂತೆ ಎಚ್ಚರವಹಿಸುತ್ತಿದ್ದ. ಒಳಗೊಳಗೇ ಆತ ನೋವು ಪಡುತ್ತಿದ್ದುದು ನಮಗೆ ಗೊತ್ತಾಗುತ್ತಿತ್ತು ಎಂದು ಮಗನ ಸಾವಿನಿಂದ ತತ್ತರಿಸಿರುವ ತಾಯಿ ಹೇಳಿದ್ದಾರೆ. ಕೌಟುಂಬಿಕ ನ್ಯಾಯಾಲಯ ಕಾನೂನನ್ನು ಪಾಲಿಸಲಿಲ್ಲ ಎಂದು ಅತುಲ್ ಹೇಳುತ್ತಿದ್ದ. ಬೆಂಗಳೂರು ಮತ್ತು ಜೌನ್​ಪುರ ನಡುವೆ 40 ಬಾರಿ ಓಡಾಡಿದ್ದಾನೆ. ಹತ್ತಾರು ಆರೋಪಗಳನ್ನು ಎದುರಿಸಿದ್ದ ಎಂದು ತಂದೆ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮೃತನ ಸಹೋದರ ಬಿಲಾಸ್​ ಕುಮಾರ್​, ನನ್ನ ಸಹೋದರನ ವಿರುದ್ಧ ಆತನ ಪತ್ನಿ, ಅತ್ತೆ, ಸೋದರಮಾವ ಹಾಗೂ ಚಿಕ್ಕಪ್ಪ ಸುಳ್ಳು ದೂರು ದಾಖಲಿಸಿ 3 ಕೋಟಿ ರೂಪಾಯಿ ಕೊಡುವಂತೆ ಬೇಡಿಕೆ ಇರಿಸಿದ್ದರು. ಇದಲ್ಲದೆ ಆತನಿಗೆ ಮಾನಸಿಕ ಕಿರುಕುಳ ನೀಡಲು ಶುರು ಮಾಡಿದರು. ಇದರಿಂದಾಗಿ ತೀವ್ರವಾಗಿ ಮನನೊಂದಿದ್ದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಸಹೋದರ ಬಿಲಾಸ್​ ಕುಮಾರ್​ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net