

Shoaib Akhtar : ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾದಲ್ಲಿ ಮಾತ್ರವಲ್ಲದೆ ವಿಶ್ವ ಕ್ರಿಕೆಟ್ನ ಅಗ್ರ ಬೌಲರ್ಗಳಲ್ಲಿ ಒಬ್ಬರಾಗಿ ಮುಂದುವರಿದಿದ್ದಾರೆ. ಬುಮ್ರಾ ಅವರು ಎಲ್ಲ ಮೂರು ಸ್ವರೂಪಗಳಲ್ಲಿಯೂ ಅದ್ಭುತ ಪ್ರದರ್ಶನ ನೀಡುತ್ತಾ ಬರುತ್ತಿದ್ದಾರೆ.
ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಬುಮ್ರಾ ಅಲ್ಲಿಯೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. 2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಇದುವರೆಗೆ ಎರಡು ಟೆಸ್ಟ್ಗಳನ್ನು ಆಡಿರುವ ಬುಮ್ರಾ ಒಟ್ಟು 11 ವಿಕೆಟ್ಗಳನ್ನು ಪಡೆದಿದ್ದಾರೆ. ಈ ಸಂದರ್ಭದಲ್ಲಿ, ಶೋಯೆಬ್ ಅಖ್ತರ್, ಬುಮ್ರಾ ಅವರನ್ನು ಗುರಿಯಾಗಿಸಿಕೊಂಡು ಪ್ರಮುಖ ಕಾಮೆಂಟ್ಗಳನ್ನು ಮಾಡಿದ್ದಾರೆ. ಬುಮ್ರಾ ಅವರು ತಮ್ಮ ವೃತ್ತಿಜೀವನವನ್ನು ದೀರ್ಘಕಾಲದವರೆಗೆ ಮುಂದುವರಿಸಲು ಬಯಸಿದರೆ ಟೆಸ್ಟ್ ಕ್ರಿಕೆಟ್ ತ್ಯಜಿಸಬೇಕು ಎಂದು ಸಲಹೆ ನೀಡಿದ್ದಾರೆ.
ಬುಮ್ರಾ ಓರ್ವ ಅದ್ಭುತ ವೇಗದ ಬೌಲರ್. ಟೆಸ್ಟ್ ಕ್ರಿಕೆಟ್ಗಿಂತ ಏಕದಿನ ಮತ್ತು ಟಿ20 ಮಾದರಿ ಪಂದ್ಯಗಳು ಅವರಿಗೆ ಸೂಕ್ತವಾಗಿವೆ. ಏಕೆಂದರೆ, ಅವರು ಲೈನ್ ಅಂಡ್ ಲೆಂಥ್ ಅನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಡೆತ್ ಓವರ್ಗಳಲ್ಲಿ ಮತ್ತು ಪವರ್ಪ್ಲೇನಲ್ಲಿ ಚೆಂಡನ್ನು ಅದ್ಭುತವಾಗಿ ಎಸೆಯುತ್ತಾರೆ. ಅವರು ಚೆಂಡನ್ನು ಎರಡು ರೀತಿಯಲ್ಲಿ ಸ್ವಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ ಬುಮ್ರಾ ತಮ್ಮ ವೃತ್ತಿಜೀವನವನ್ನು ದೀರ್ಘಕಾಲದವರೆಗೆ ಮುಂದುವರಿಸಲು ಬಯಸಿದರೆ, ಅವರು ಟೆಸ್ಟ್ ಅನ್ನು ತ್ಯಜಿಸಬೇಕು. ಏಕೆಂದರೆ, ಟೆಸ್ಟ್ಗಳಲ್ಲಿ ದೀರ್ಘ ಕಾಲ ಬೌಲಿಂಗ್ ಮಾಡಬೇಕು. ಇಲ್ಲಿ ಬ್ಯಾಟ್ಸ್ಮನ್ಗಳು ಎಲ್ಲ ಸಮಯದಲ್ಲೂ ವೇಗದ ಬೌಲರ್ಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸುವುದಿಲ್ಲ. ಹೀಗಾಗಿ ಇನ್ನು ಹೆಚ್ಚಿನ ವೇಗದಲ್ಲಿ ಬೌಲಿಂಗ್ ಮಾಡಬೇಕಾಗುತ್ತದೆ. ಒಂದು ವೇಳೆ ಬೌಲಿಂಗ್ನಲ್ಲಿ ಯಾವುದೇ ವೇಗವಿಲ್ಲದಿದ್ದರೆ, ಚೆಂಡು ಸೀಮ್ ಅಥವಾ ರಿವರ್ಸ್ ಸ್ವಿಂಗ್ ಆಗುವುದಿಲ್ಲ. ಇದು ಬೌಲಿಂಗ್ ಶೈಲಿಯ ಬಗ್ಗೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಅಖ್ತರ್ ಹೇಳಿದರು.
ಬುಮ್ರಾ ಟೆಸ್ಟ್ ಕ್ರಿಕೆಟ್ನಲ್ಲಿಯೂ ವಿಕೆಟ್ಗಳನ್ನು ಪಡೆಯಬಲ್ಲರು. ಅದರಲ್ಲಿ ಯಾವುದೇ ಸಂದೇಹವಿಲ್ಲ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರು ಉತ್ತಮ ಪ್ರದರ್ಶನ ನೀಡಲಿಲ್ಲ. ಈ ರೀತಿಯು ಕೆಲವೊಮ್ಮೆ ಸಂಭವಿಸುತ್ತದೆ. ಆದರೆ, ಅವರು ಟೆಸ್ಟ್ನಲ್ಲಿ ಮುಂದುವರಿಯಬೇಕಾದರೆ ಬೌಲಿಂಗ್ ವೇಗವನ್ನು ಹೆಚ್ಚಿಸಿಕೊಳ್ಳಬೇಕು. ಈ ರೀತಿ ಮಾಡಿದರೆ, ಗಾಯಗೊಳ್ಳುವ ಅಪಾಯವಿದೆ. ನಾನು ಅವರ ಸ್ಥಾನದಲ್ಲಿದ್ದರೆ, ನಾನು ಏಕದಿನ ಮತ್ತು ಟಿ20ಗೆ ಮಾತ್ರ ಸೀಮಿತಗೊಳಿಸುತ್ತಿದ್ದೆ ಎಂದು ಅಖ್ತರ್ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. (ಏಜೆನ್ಸೀಸ್)