ಇನ್​ಸ್ಟಾಗ್ರಾಂ ಪರಿಚಯ ತಂದಿಟ್ಟ ಆಪತ್ತು: ಕಾಮುಕರ ಕೈಗೆ ಸಿಕ್ಕಿ ನರಕಯಾತನೆ ಅನುಭವಿಸಿದ ಅಪ್ರಾಪ್ತೆ!

Accused
Published on

ಬೆಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಐವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಅಭಿ, ವೆಂಕಿ, ಲೇಖನ್, ಚೇತನ್ ಹಾಗೂ ರಕ್ಷತ್ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಆರೋಪಿ ಬಾಬು ತಲೆ‌ಮರೆಸಿಕೊಂಡಿದ್ದು ಬಂಧನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

ವೆಂಕಿ, ಅಭಿ ಮತ್ತು ಬಾಬು ಎಂಬಾತರಿಂದ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾಗಿದೆ. ಇನ್​ಸ್ಟಾಗ್ರಾಂ ಮೂಲಕ ಬಾಲಕಿಯನ್ನು ಪರಿಚಯ ಮಾಡಿಕೊಂಡ ಕಾಮುಕರು, ಹೊರಗಡೆ ಹೋಗೋಣ ಎಂದು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿರುವ ಆರೋಪವಿದೆ. ನವೆಂಬರ್​ 8ರಂದು ಘಟನೆ ನಡೆದಿದೆ ಎನ್ನಲಾಗಿದೆ.

ಅತ್ಯಾಚಾರ ಎಸಗಿದ ಬಳಿಕ ಬಾಲಕಿಯನ್ನು ಮನೆ ಬಳಿ ಹೋಗಿ ಬಿಟ್ಟು ಬಂದಿದ್ದರು. ಇದೇ ಜನವರಿ 17 ರಂದು ಮತ್ತೆ ಮಧ್ಯರಾತ್ರಿ 2 ಗಂಟೆಗೆ ಬರುವಂತೆ ಬಾಲಕಿಗೆ ಕಾಮುಕರು ಪೀಡಿಸಿದ್ದರು. ಒಂದು ವೇಳೆ ಬರದಿದ್ರೆ ಮಾನ-ಮರ್ಯಾದೆ ತೆಗೆಯುವುದಾಗಿ ಬೆದರಿಕೆ ಹಾಕಿದ್ದರು.

ಅಂದು ಮುಂಜಾನೆ 2 ಗಂಟೆಗೆ ಶ್ರೀನಿವಾಸನಗರದ ತಾತನ‌‌ ಮನೆಯಿಂದ ಲೇಖನ್​ ಮತ್ತು ವೆಂಕಿ ಬೈಕ್​ನಲ್ಲಿ ಬಂದು ಕರೆದೊಯ್ದಿದ್ದರು. ಬಳಿಕ ಗುಟ್ಟಳ್ಳಿಯಲ್ಲಿರುವ ಸ್ನೇಹಿತನ‌ ರೂಮ್​ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆನ್ನಲಾಗಿದೆ. ಸ್ನೇಹಿತನ‌ ಕೃತ್ಯಕ್ಕೆ ಸಹಕರಿಸಿದ ಲೇಖನ್, ಚೇತನ್ ಹಾಗೂ ರಕ್ಷತ್​ನನ್ನು ಕೂಡ ಬಂಧಿಸಲಾಗಿದೆ.

ಘಟನೆ ಸಂಬಂಧ ಹನುಂಮತ ನಗರ ಠಾಣೆಯಲ್ಲಿ ಬಾಲಕಿಯ ತಾತ ದೂರು ನೀಡಿದ ಬಳಿಕ ಪ್ರಕರಣ ದಾಖಲಿಸಿಕೊಂಡ ಹನುಮಂತ ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net