

ಹುಬ್ಬಳ್ಳಿ: ಶೆಟ್ಟರ್ ಸಾಹೇಬ್ರ ಸಿಬಿಟಿ ಖಾಲಿ ಐತ್ರಿ. ಕೋವಿಡ್ ಕೇರ್ ಸೆಂಟರ್ ಮಾಡ್ರಿಪಾ...
ಸಾರ್ವಜನಿಕರಿಂದ ಹೀಗೊಂದು ಭಿನ್ನಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೋಟ್ಯಂತರ ರೂ. ವೆಚ್ಚ ಮಾಡಿ ನಗರದಲ್ಲಿ 4 ಅಂತಸ್ತಿನ ಸಿಬಿಟಿ ಕಟ್ಟಡವನ್ನು ನಿರ್ವಿುಸಲಾಗಿದೆ. ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿದೆ.
ಈಗೀಗ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಜಿಲ್ಲೆಯ 7 ಸರ್ಕಾರಿ ಹಾಗೂ 30 ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ಗಳ ಕೊರತೆ ಕಾಡಲಾರಂಭಿಸಿದೆ. ಇಂತಹ ದೊಡ್ಡ ಕಟ್ಟಡವನ್ನು ಕೋವಿಡ್ ಕೇರ್ ಸೆಂಟರ್ ಮಾಡುವುದರಿಂದ ರೋಗಿಗಳ ಆರೈಕೆ ಸುಗಮವಾಗಿ ನಡೆಯಲಿದೆ. ಅಲ್ಲದೆ ಕಟ್ಟಡವೂ ಬಳಕೆಯಾಗಲಿದೆ. ಇಲ್ಲವಾದರೆ, ಇದ್ದ ಕಟ್ಟಡವೂ ನಿರ್ವಹಣೆ ಕೊರತೆಯಿಂದ ಮತ್ತಷ್ಟು ಹಾಳಾಗಲಿದೆ ಎಂಬುದು ಸಾರ್ವಜನಿಕರ ಆಕ್ರೋಶ.
ಬೆಡ್ಗಳಿಲ್ಲದೆ ಜನರು ಬೀದಿಗೆ ಬೀಳುವ ಮುನ್ನ ಸಚಿವ ಜಗದೀಶ ಶೆಟ್ಟರ್ ಅವರು ಎಚ್ಚೆತ್ತುಕೊಳ್ಳಬೇಕು. ಇಂತಹ ಕಟ್ಟಡ ಬಳಕೆಗೆ ಶೀಘ್ರವೇ ಆದೇಶ ಮಾಡಬೇಕು. ಇಲ್ಲವಾದರೆ ನಿಮ್ಮ ಆಡಳಿತ ದುರಾವಸ್ಥೆಗೆ ಹಿಡಿದ ಕೈಗನ್ನಡಿಯಾಗಲಿದೆ ಎಂದು ಸಾರ್ವಜನಿಕರು ಸಿಟ್ಟು ಹೊರಹಾಕಿದ್ದಾರೆ.