

ಚಾಮರಾಜನಗರ: ಜಿಲ್ಲೆಯಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕರೊನಾ ಗಂಡ-ಹೆಂಡತಿ ಇಬ್ಬರನ್ನು ಬಲಿ ಪಡೆದು 4 ವರ್ಷದ ಮಗಳನ್ನು ಅನಾಥೆ ಮಾಡಿದೆ.
ತಾಲೂಕಿನ ಕೊತ್ತಲವಾಡಿ ಗ್ರಾಮದ ಗುರುಪ್ರಸಾದ್ ಮತ್ತು ರಶ್ಮಿ ದಂಪತಿ ಕೋವಿಡ್ನಿಂದ ಮೃತಪಟ್ಟಿದ್ದು, 4 ವರ್ಷದ ಮಗಳು ಸುಧಾರಾಣಿ ಅನಾಥೆಯಾಗಿದ್ದಾಳೆ.
ಗುರುಪ್ರಸಾದ್ ಕಳೆದ ಐದು ದಿನಗಳ ಹಿಂದೆ ಆಸ್ಪತ್ರೆಯಲ್ಲಿ ಕೋವಿಡ್ನಿಂದ ಮೃತಪಟ್ಟಿದ್ದರು. ಗಂಡನ ಅಂತ್ಯ ಸಂಸ್ಕಾರದ ಧಾರ್ಮಿಕ ಕಾರ್ಯ ಮಾಡಿ ರೋಗ ಲಕ್ಷಣ ಕಂಡು ಬಂದ ಹಿನ್ನೆಲೆ ಆಸ್ಪತ್ರೆ ಸೇರಿದ್ದ ರಶ್ಮಿ ಕೂಡ ಮೃತಪಟ್ಟರು. ರಶ್ಮಿಯ ತಂದೆ-ತಾಯಿಗೂ ಕೋವಿಡ್ ಪಾಸಿಟಿವ್ ಆಗಿದೆ. ಅವರೂ ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುಧಾರಾಣಿ ಸದ್ಯ ತನ್ನ ಚಿಕ್ಕಪ್ಪನ ಆಶ್ರಯದಲ್ಲಿದ್ದಾಳೆ.
ಹೆತ್ತವರನ್ನ ಕಳೆದುಕೊಂಡರೂ ಇದ್ಯಾವುದರ ಪರಿವೇ ಇಲ್ಲದ ಕಂದಮ್ಮ ಚಿಕ್ಕಪ್ಪನ ಮನೆಯಲ್ಲಿ ಆಟವಾಡಿಕೊಂಡಿದೆ. ಅಪ್ಪ-ಅಮ್ಮ ಎಲ್ಲೋ ಹೋಗಿದ್ದಾರೆ, ಆಮೇಲೆ ಬರುತ್ತಾರೆ ಎಂದುಕೊಂಡು ತನ್ನಷ್ಟಕ್ಕೆ ತಾನು ಆಟವಾಡಿಕೊಂಡಿದ್ದ ದೃಶ್ಯ ಮನಕಲಕುವಂತಿತ್ತು.