ಬಳ್ಳಾರಿ: ಮಹಾಮಾರಿ ಕರೊನಾ ಸೋಂಕಿಗೆ ತಾಯಿ ಗರ್ಭದಲ್ಲಿರುವ ಮಕ್ಕಳೂ ಬಲಿಯಾಗುತ್ತಿದ್ದಾರೆ ಎಂಬುದು ಆತಂಕ ಹುಟ್ಟಿಸಿದೆ. ಕೋಲಾರ ಜಿಲ್ಲೆ ಮೂಲದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿಎಸ್ಐ ಆಗಿದ್ದ 24 ವರ್ಷದ ಶಾಮಿಲಿ ಜತೆಗೆ ಆಕೆಯ ಹೊಟ್ಟೆಯಲ್ಲಿದ್ದ ಮಗುವನ್ನೂ ಬಲಿ ಪಡೆದಿತ್ತು ಕರೊನಾ. ಇಂತಹ ಸಾವಿನ ಸರಣಿ ಮುಂದುವರಿದಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಕರೊನಾ ಎರಡನೇ ಅಲೆಯಲ್ಲಿ 177 ಗರ್ಭಿಣಿ ಮಹಿಳೆಯರಿಗೆ ಕರೋನಾ ಸೋಂಕು ದೃಢಪಟ್ಟಿದ್ದು, ಈವರೆಗೆ 7 ಸೋಂಕಿತ ಗರ್ಭಿಣಿಯರಿಗೆ ಚಿಕಿತ್ಸೆ ಫಲಕಾರಿಯಾಗದೆ ತಾಯಿ ಜತೆಗೆ ಗರ್ಭದಲ್ಲೇ ಮಕ್ಕಳೂ ಮೃತಪಟ್ಟಿದ್ದಾರೆ. ಸೋಂಕಿತ ನಾಲ್ವರಿಗೆ ಗರ್ಭಪಾತವಾಗಿದೆ.
177 ಕರೊನಾ ಸೋಂಕಿತ ಗರ್ಭಿಣಿಯರ ಪೈಕಿ 134 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ಹೆರಿಗೆಯಾಗಿರುವ ಕೆಲವು ಗರ್ಭಿಣಿಯರಿಗೆ ಸೋಂಕು ದೃಢಪಟ್ಟರೂ ನವಜಾತ ಶಿಶುಗಳಲ್ಲಿ ಕರೊನಾ ಪಾಸಿಟಿವ್ ಬಂದಿಲ್ಲ. ನವಜಾತ ಶಿಶುಗಳಲ್ಲಿ ಸೋಂಕು ಕಾಣಿಸಿಕೊಳ್ಳದಿರುವುದು ಸಮಾಧಾನಕರ ಸಂಗತಿ. ಇದುವರೆಗೆ ಬಳ್ಳಾರಿ ಜಿಲ್ಲೆಯಲ್ಲಿ ಎರಡು ನವಜಾತ ಶಿಶುಗಳಲ್ಲಿ ಸೋಂಕು ದೃಢಪಟ್ಟಿತ್ತು. ಆದರೆ ಡಿಸ್ಚಾರ್ಜ್ ಆಗುವ ವೇಳೆಗೆ ಕೋವಿಡ್ ರಿಪೋರ್ಟ್ ಕೂಡ ನೆಗೆಟಿವ್ ಬಂದಿದೆ.