

ಹಾವೇರಿ: ರಾಣೇಬೆನ್ನೂರು ನಗರದ ಕೋರ್ಟ್ ಆವರಣದಲ್ಲಿ ಅನುಮಾನಾಸ್ಪದವಾಗಿ ಕೋರ್ಟಿನ ಸಿಬ್ಬಂದಿಯೊಬ್ಬರು ನಿನ್ನೆ(ಭಾನುವಾರ) ರಾತ್ರಿ ಮೃತಪಟ್ಟಿದ್ದಾರೆ.
ಅರೆಮಲ್ಲಾಪುರ ಗ್ರಾಮದ ನಿವಾಸಿ ರವಿಕುಮಾರ್ ಬೆನ್ನೂರ್ ಮೃತರು. ಮಾಜಿ ಸೈನಿಕರಾಗಿದ್ದ ರವಿಕುಮಾರ್, ಕೋರ್ಟ್ನಲ್ಲಿ ಜವಾನರಾಗಿ ಕೆಲಸ ಮಾಡುತ್ತಿದ್ದರು.
ಭಾನುವಾರ ರಾತ್ರಿ ಎದೆನೋವು ಎಂದು ರವಿಕುಮಾರ್ ಮನೆಗೆ ಕರೆ ಮಾಡಿ ಹೇಳಿದ್ದರು. ಬೆಳಗ್ಗೆ ಗೇಟ್ ಬಡಿದರೂ ಕೋರ್ಟ್ನ ಬಾಗಿಲು ತೆಗೆದಿಲ್ಲ. ಬಾಗಿಲು ಮುರಿದು ಒಳ ಹೋಗಿ ನೋಡಿದಾಗ ರವಿಕುಮಾರ್ರ ಶವ ಅರೆ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸ್ಥಳಕ್ಕೆ ಸಿಪಿಐ ಮಹಂತೇಶಗೌಡ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ರಾಣೇಬೆನ್ನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಇದು ಸಹಜ ಸಾವೋ ಅಥವಾ ಅಸಹಜ ಸಾವೋ ಎಂದು ತಿಳಿಯಲಿದೆ. (ದಿಗ್ವಿಜಯ ನ್ಯೂಸ್)