

ಬೆಂಗಳೂರು: ರಾಜ್ಯದ ಹಲವೆಡೆ ವರುಣನ ಅಬ್ಬರ ಮುಂದುವರಿದಿದ್ದು, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಧಾರಾಕಾರ ಮಳೆಯಾಗಲಿದೆ.
ಬುಧವಾರವೂ ವಿವಿಧ ಭಾಗಗಳಲ್ಲಿ ಮಳೆಯಾಗಿದ್ದು, ಚಿಕ್ಕಮಗಳೂರಿನ ಶೃಂಗೇರಿಯಲ್ಲಿ 13 ಸೆಂ.ಮೀ., ಕೊಪ್ಪದಲ್ಲಿ 11 ಸೆಂ.ಮೀ., ಶಿವಮೊಗ್ಗದ ಲಿಂಗನಮಕ್ಕಿಯಲ್ಲಿ 9 ಸೆಂ.ಮೀ., ಬೆಳಗಾವಿಯ ಲೋಂಡದಲ್ಲಿ 8 ಸೆಂ.ಮೀ., ಕಲಬುರಗಿಯ ಖಜೂರಿಯಲ್ಲಿ 7 ಸೆಂ.ಮೀ. ಹಾಗೂ ಬೀದರ್‌ನ ಔರದ್‌ನಲ್ಲಿ 7 ಸೆಂ.ಮೀ. ಮಳೆಯಾಗಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಹಾಗೂ ಕೊಡಗಿನಲ್ಲಿ ಮುಂದಿನ 24 ಗಂಟೆ ಭಾರೀ ಮಳೆ ಬೀಳುವ ಮುನ್ಸೂಚನೆ ಇದೆ. ಹಾಗಾಗಿ ಈ ಭಾಗದಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಅಲ್ಲದೆ, ಜು.15ರಿಂದ ಮುಂದಿನ ಮೂರು ದಿನ ಈ ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಇರಲಿದೆ. ಹಾವೇರಿ, ಗದಗ, ಧಾರವಾಡ, ಯಾದಗಿರಿ, ಕಲಬುರಗಿ ಮತ್ತು ವಿಜಯಪುರದಲ್ಲಿ ಮುಂದಿನ 72 ಗಂಟೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ದಕ್ಷಿಣ ಒಳನಾಡಿನಲ್ಲಿ ಆಗಾಗ್ಗೆ ಚದುರಿದಂತೆ ಸಾಧಾರಣ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಜು.1ರಿಂದ 13ರ ವರೆಗೆ ರಾಜ್ಯಾದ್ಯಂತ ವಾಡಿಕೆಯಂತೆ 110 ಮಿ.ಮೀ. ಮಳೆ ಬದಲಾಗಿ 224 ಮಿ.ಮೀ. ಮಳೆಯಾಗಿದ್ದು, ಶೇ.104 ಹೆಚ್ಚು ಮಳೆ ಸುರಿದಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಜೂನ್‌ನಲ್ಲಿ ಮಳೆ ಕೊರತೆ ಅನುಭವಿಸಿದ್ದ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಜುಲೈನಲ್ಲಿ ಭರ್ಜರಿ ವರ್ಷಧಾರೆಯಾಗಿದೆ.
Unavailable on free accounts. Upgrade to redirect links.