ಇವರು ನಮ್ಮ ಪಕ್ಷದ ಕಾರ್ಯಕರ್ತ, ಇವರ ಕಾರನ್ನು ಹಿಡಿದು ತೊಂದರೆ ಕೊಡಬಾರದು: ಬಿಜೆಪಿ MLA ಶಿಫಾರಸು

ramappa s lamani
Published on

ಬೆಂಗಳೂರು: ಕಚೇರಿಗಳಲ್ಲಿ ಕೆಲಸ ಮಾಡಿಕೊಡಲು ಅಧಿಕಾರಿಗಳು ಸತಾಯಿಸುತ್ತಿದ್ದರೆ, ಆಸ್ಪತ್ರೆಯಲ್ಲಿ ಬೆಡ್​ ಸಿಗದಿದ್ದರೆ, ಚಿಕಿತ್ಸಾ ವೆಚ್ಚ ಕಡಿಮೆ ಮಾಡಿಸಿಕೊಳ್ಳಲು, ಶಾಲಾ-ಕಾಲೇಜುಗಳಲ್ಲಿ ಸೀಟ್​ ಗಿಟ್ಟಿಸಿಕೊಳ್ಳಲು, ಬೇರೆಡೆ ಹೋದಾಗ ಅತಿಥಿ ಗೃಹಗಳಲ್ಲಿ ವಿಶ್ರಾಂತಿ ಕೊಠಡಿ ಪಡೆಯಲು... ಹೀಗೆ ನಾನಾ ಕಾರಣಕ್ಕೆ ಬೆಂಬಲಿಗರು ಮತ್ತು ಆಪ್ತರು ಆಯಾ ಕ್ಷೇತ್ರದ ಶಾಸಕರು ಸೇರಿದಂತೆ ಜನಪ್ರತಿನಿಧಿಗಳ ಶಿಫಾರಸು ಪತ್ರ ಪಡೆಯೋದು ಕಾಮನ್​. ಜನರ ಕಷ್ಟಕ್ಕೆ ಮರುಗಿ ಅವರಿಗೆ ಅನುಕೂಲವಾಗಲೆಂದು ಜನಪ್ರತಿನಿಧಿಗಳು ಪತ್ರ ರವಾನಿಸುವ ಮೂಲಕ ಸಂಬಂಧಪಟ್ಟವರಿಗೆ ಸೂಚನೆ ನೀಡೋದು ಸಹಜ. ಆದರೆ, ಇಲ್ಲೊಬ್ಬ ಶಾಸಕರು ತನ್ನ ಬೆಂಬಲಿಗನ ಕಾರನ್ನು ಯಾವುದೇ ಕಾರಣಕ್ಕೂ ತಪಾಸಣೆ ಮಾಡುವ ನೆಪದಲ್ಲಿ ನಿಲ್ಲಿಸಬಾರದು ಎಂದು ಪತ್ರ ಬರೆದು ತಾಕೀತು ಮಾಡಿದ್ದಾರೆ!

ಶಾಸಕರ ಪತ್ರ ವೈರಲ್​ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಇದು ಅಧಿಕಾರದ ದುರ್ಬಳಕೆ, ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ, ಶಾಸಕರ ಕಡೆಯವರು ಅಂದ ಮಾತ್ರಕ್ಕೆ ಸಾರಿಗೆ ನಿಯಮ ಅನ್ವಯಿಸುವುದಿಲ್ಲವೇ? ಇದ್ಹೇನು ಸರ್ವಾಧಿಕಾರಿ ಧೋರಣೆಯೇ ಎಂದು ಪ್ರಶ್ನಿಸುತ್ತಿದ್ದಾರೆ. ಅಷ್ಟಕ್ಕೂ ಪತ್ರ ಬರೆದು ವಿವಾದ ಮೈಮೇಲೆ ಎಳೆದುಕೊಂಡಿರುವ ಶಾಸಕರ ಯಾರು ಗೊತ್ತಾ? ಗದಗ ಜಿಲ್ಲೆ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಮಪ್ಪ ಎಸ್​. ಲಮಾಣಿ.

ಪತ್ರದಲ್ಲಿ ಏನಿದೆ?: ಶಿರಹಟ್ಟಿ ತಾಲೂಕಿನ ಬೆಳಗಟ್ಟಿಯ ಜಿ.ಬಸವರಾಜ ಎಂಬುವವರು ನನ್ನ ಮತ ಕ್ಷೇತ್ರಕ್ಕೆ ಒಳಪಟ್ಟಿದ್ದು, ನಮ್ಮ ಪಕ್ಷದ ಕಾರ್ಯಕರ್ತರಾಗಿದ್ದಾರೆ. ಹಾಗೂ ನನಗೆ ತುಂಬಾ ಚಿರಪರಿಚಿತರು. ಬಸವರಾಜ ಅವರು ಮಹೇಂದ್ರ ಬೊಲೆರೋ ವಾಹನ ಹೊಂದಿದ್ದು, ಇದರ ಸಂಖ್ಯೆ AP-39 V-3517. ಈ ವಾಹನವನ್ನು ಹಿಡಿಯಬಾರದು. ಯಾವುದೇ ಕಾರಣಕ್ಕೂ ತೊಂದರೆ ಕೊಡಬಾರದು ಎಂದು ಪತ್ರದ ಮೂಲಕ ಮನವಿ ಮಾಡುತ್ತೇನೆ ಎಂದು ಶಾಸಕರ ಲೆಟರ್​ಹೆಡ್​ನಲ್ಲೇ ರಾಮಪ್ಪ ಎಸ್​. ಲಮಾಣಿ ಅವರು ಬರೆದು ಸಹಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net